ADVERTISEMENT

ಟೆಕ್ಕಿಗಳ ಕೊಳೆತ ಶವ ಪತ್ತೆ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2012, 19:30 IST
Last Updated 11 ಅಕ್ಟೋಬರ್ 2012, 19:30 IST

ಬೆಂಗಳೂರು: ನಗರದ ಎಚ್‌ಎಸ್‌ಆರ್ ಲೇಔಟ್‌ನ ಪ್ರತ್ಯೇಕ ಅಪಾರ್ಟ್‌ಮೆಂಟ್‌ಗಳಲ್ಲಿ ಬುಧವಾರ ಮತ್ತು ಗುರುವಾರ ಇಬ್ಬರು ಸಾಫ್ಟ್‌ವೇರ್ ಕಂಪೆನಿ ಉದ್ಯೋಗಿಗಳ ಶವಗಳು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿವೆ.

`ಸಾಫ್ಟ್‌ವೇರ್ ಕಂಪೆನಿಯ ಸಿಬ್ಬಂದಿಯೊಬ್ಬರು ಬುಧವಾರ ಠಾಣೆಗೆ ಕರೆ ಮಾಡಿ, ಕಂಪೆನಿಯ ಹಿರಿಯ ವ್ಯವಸ್ಥಾಪಕ ರವಿಶಂಕರ್ ಠಾಕೂರ್(42) ಐದು ದಿನಗಳಿಂದ ಕೆಲಸಕ್ಕೆ ಬಂದಿಲ್ಲ. ಅವರ ಮೊಬೈಲ್‌ಗೆ ಕರೆ ಮಾಡಿದರೂ ಯಾವುದೇ ಪ್ರತಿಕ್ರಿಯೇ ನೀಡುತ್ತಿಲ್ಲ ಎಂದು ಹೇಳಿದರು. ಕೂಡಲೇ ಅಪಾರ್ಟ್‌ಮೆಂಟ್‌ಗೆ ಹೋಗಿ ಪರಿಶೀಲನೆ ನಡೆಸಿದಾಗ ಕೊಳೆತ ಸ್ಥಿತಿಯಲ್ಲಿ ರವಿಶಂಕರ್ ಶವ ಪತ್ತೆಯಾಯಿತು~ ಎಂದು ಪೊಲೀಸರು ಹೇಳಿದರು.

ಬಿಹಾರ ಮೂಲದ ರವಿಶಂಕರ್, ಪತ್ನಿ ಮತ್ತು ಮಕ್ಕಳೊಂದಿಗೆ ದೂರವಾಗಿದ್ದಾರೆ. ಹತ್ತು ವರ್ಷದ ಹಿಂದೆ ನಗರಕ್ಕೆ ಬಂದಿದ್ದ ಅವರು, ಎಚ್‌ಎಸ್‌ಆರ್ ಲೇಔಟ್‌ನಲ್ಲಿರುವ ಶೋಭಾ ಡ್ಯಾಫೋಡಿಲ್ ಹೆಸರಿನ ಅಪಾರ್ಟ್‌ಮೆಂಟ್‌ನಲ್ಲಿ ನೆಲೆಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಇದೇ ರೀತಿಯ ಮತ್ತೊಂದು ಪ್ರಕರಣದಲ್ಲಿ ಎಚ್‌ಎಸ್‌ಆರ್ ಲೇಔಟ್‌ನಲ್ಲಿರುವ ಸನ್‌ಸಿಟಿ ಅಪಾರ್ಟ್‌ಮೆಂಟ್‌ನಲ್ಲಿ ಫ್ರಾಂಕ್ಲಿನ್ ಮೆಂಡಿಸ್ (35) ಎಂಬ ಐಬಿಎಂ ಕಂಪೆನಿ ಉದ್ಯೋಗಿಯ ಶವ ಪತ್ತೆಯಾಗಿದೆ. ಕೇರಳ ಮೂಲದ ಫ್ರಾಂಕ್ಲಿನ್ ಮೆಂಡಿಸ್, ನಾಲ್ಕು ವರ್ಷದ ಹಿಂದೆ ವಿವಾಹವಾಗಿದ್ದರು. ಇವರೂ ಸಹ ಪತ್ನಿಯಿಂದ ದೂರ ಉಳಿದಿದ್ದರು.

ಮೆಂಡಿಸ್ ಅವರ ಮನೆಯಿಂದ ಕೆಟ್ಟ ವಾಸನೆ ಬರುತ್ತಿದ್ದ ಕಾರಣ ಅಪಾರ್ಟ್‌ಮೆಂಟ್ ನಿವಾಸಿಗಳು ಠಾಣೆಗೆ ಕರೆ ಮಾಡಿ ವಿಷಯ ತಿಳಿಸಿದ್ದರು. ಪೊಲೀಸರು ಮನೆಯ ಬಾಗಿಲು ಮುರಿದು ನೋಡಿದಾಗ ಪ್ರಕರಣ ಬೆಳಕಿಗೆ ಬಂತು.  ಮೆಂಡಿಸ್, ಭಾನುವಾರ ಸಂಬಂಧಿಕರೊಂದಿಗೆ ಮೊಬೈಲ್‌ನಲ್ಲಿ ಮಾತನಾಡಿದ್ದಾರೆ.

ಆ ನಂತರ ಅವರ ಮೊಬೈಲ್‌ಗೆ ಯಾವುದೇ ಕರೆಗಳು ಬಂದಿಲ್ಲ. ಅವರು ಅಸ್ತಮಾದಿಂದ ಬಳಲುತ್ತಿದ್ದರು ಎಂಬುದು ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.