ADVERTISEMENT

ಟೇಕ್ವಾಂಡೊ: ನಗರದ ಯುವಕನಿಗೆ ಬಂಗಾರ

​ಪ್ರಜಾವಾಣಿ ವಾರ್ತೆ
Published 21 ಜುಲೈ 2013, 19:33 IST
Last Updated 21 ಜುಲೈ 2013, 19:33 IST

ಬೆಂಗಳೂರು: ದಕ್ಷಿಣ ಕೋರಿಯಾದಲ್ಲಿ ನಡೆದ ಟೇಕ್ವಾಂಡೊ ಪ್ರದರ್ಶನದಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ನೀಡಿದ ಆರ್ಥಿಕ ನೆರವಿನಿಂದ ಪಾಲ್ಗೊಂಡಿದ್ದ ನಗರದ ಯುವಕ ವಿ.ನಾಗರಾಜ್ ಬ್ಲ್ಯಾಕ್ ಬೆಲ್ಟ್ ವಿಭಾಗದಲ್ಲಿ ತಲಾ ಒಂದು ಬಂಗಾರ ಹಾಗೂ ಕಂಚಿನ ಪದಕ ಪಡೆದಿದ್ದಾರೆ.

ಭಾರತದಿಂದ ಪಾಲ್ಗೊಂಡಿದ್ದ 45 ಜನರಲ್ಲಿ ನಾಗರಾಜ್ ಕೂಡ ಒಬ್ಬರಾಗಿದ್ದರು. ಬಡ ಕುಟುಂಬದಿಂದ ಬಂದ ಅವರು, ದಕ್ಷಿಣ ಕೋರಿಯಾಕ್ಕೆ ಹೋಗಲು ಬಿಬಿಎಂಪಿಯಿಂದ ಆರ್ಥಿಕ ನೆರವು ಪಡೆದಿದ್ದರು. ಪ್ರವಾಸಕ್ಕಾಗಿ ವೆಚ್ಚವಾದ ರೂ1.25 ಲಕ್ಷದಲ್ಲಿ ರೂ 60,000 ಬಿಬಿಎಂಪಿ ನೀಡಿದರೆ, ಮಿಕ್ಕ ಮೊತ್ತವನ್ನು ಸ್ವಯಂಸೇವಾ ಸಂಸ್ಥೆಗಳು ಭರಿಸಿದ್ದವು. ಮುಂಬೈ ಮೂಲದ ಜಲನ್‌ವಾಲಾ ಕ್ರೀಡಾ ತರಬೇತಿ ಮತ್ತು ಸಂಶೋಧನಾ ಕೇಂದ್ರ ಈ ಪ್ರವಾಸ ಆಯೋಜಿಸಿತ್ತು.

`ದಕ್ಷಿಣ ಕೋರಿಯಾದ ಪ್ರವಾಸದಿಂದ ಸಾಕಷ್ಟು ವಿಷಯಗಳು ಗೊತ್ತಾದವು. ಅಲ್ಲಿಯ ಕೋಚ್‌ಗಳಿಂದ ಮಾರ್ಗದರ್ಶನವನ್ನೂ ಪಡೆದೆವು. ಪುಣೆಯಲ್ಲಿ ನಡೆಯಲಿರುವ ಟೇಕ್ವಾಂಡೊ ಪ್ರದರ್ಶನದಲ್ಲೂ ಪಾಲ್ಗೊಳ್ಳಲು ಉದ್ದೇಶಿಸಿದ್ದೇನೆ' ಎಂದು ನಾಗರಾಜ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.