ADVERTISEMENT

ಟ್ರೋಲ್‌ ಆದ ರಾಜಕೀಯ ಪ್ರಹಸನ

​ಪ್ರಜಾವಾಣಿ ವಾರ್ತೆ
Published 20 ಮೇ 2018, 19:30 IST
Last Updated 20 ಮೇ 2018, 19:30 IST
ಉತ್ತರ ಕರ್ನಾಟಕ ಮೀಮ್ಸ್
ಉತ್ತರ ಕರ್ನಾಟಕ ಮೀಮ್ಸ್   

ಬೆಂಗಳೂರು: ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟಗೊಂಡ ಬಳಿಕದ ಕುತೂಹಲಕಾರಿ ಬೆಳವಣಿಗೆಗಳ ಕುರಿತು ತರಹೇವಾರಿ ಟ್ರೋಲ್‌ಗಳು ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುತ್ತಿವೆ.

ಬಿಜೆಪಿ ಹೆಚ್ಚು ಸ್ಥಾನ ಪಡೆದಿರುವುದು, ಜೆಡಿಎಸ್‌– ಕಾಂಗ್ರೆಸ್‌ ಮೈತ್ರಿ, ಯಡಿಯೂರಪ್ಪ ಪ್ರಮಾಣ ವಚನ ಸ್ವೀಕಾರ, ವಿಶ್ವಾಸಮತಯಾಚನೆ, ಸದನ ಸ್ವಾರಸ್ಯ.. ಹೀಗೆ ಹಲವು ವಿಷಯಗಳು ಟ್ರೋಲ್‌ ಆಗುತ್ತಿವೆ.

ರೆಸಾರ್ಟ್‌ನಿಂದ ರೆಸಾರ್ಟ್‌ಗೆ ಶಾಸಕರನ್ನು ‘ಬಸ್‌ಗಳಲ್ಲಿ’ ಯಶಸ್ವಿಯಾಗಿ ಕರೆದುಕೊಂಡು ಹೋದವರಿಗೆ ‘ಸಾರಿಗೆ ಸಚಿವ’ ಸ್ಥಾನ ಕೊಡಬಹುದೆಂಬ ಮಾತು ಕೇಳಿಬರುತ್ತಿದೆ ಎಂದು ‘ಉತ್ತರ ಕರ್ನಾಟಕ ಮೀಮ್ಸ್’ ವ್ಯಂಗ್ಯ ಮಾಡಿದೆ.

ADVERTISEMENT

ಗೆಲುವಿನ ಸಂಕೇತ ತೋರಿಸುವ ಯಡಿಯೂರಪ್ಪ ಅವರ ಚಿತ್ರದೊಂದಿಗೆ, ‘ನಾನು ಹೇಳಿದ್ದು ಎರಡೇ ದಿನ ಅಂತ, ನೀವು ಏನ್‌ ಅಂದ್‌ಕೊಂಡ್ರೊ’ ಎಂಬ ಟ್ರೋಲ್‌ ಅನೇಕರ ಮನಗೆದ್ದಿದೆ.

‘ನಮಗೆ ಐದು ವರ್ಷ ಇರುವ ಮುಖ್ಯಮಂತ್ರಿ ಹೆಸರನ್ನು ಕೇಳಿದರೇ ಬೇಗ ನೆನಪಿಗೆ ಬರುವುದಿಲ್ಲ, ಇನ್ನು ನಿತ್ಯವೂ ಮುಖ್ಯಮಂತ್ರಿ ಬದಲಾದರೆ ಹೆಂಗೋ ನೆನಪಲ್ಲಿ ಇಟ್ಟುಕೊಳ್ಳೊದು’ ಎನ್ನುವ ಟ್ರೋಲ್‌ ಸಹ ಇದೆ.

‘ಮೂರು ದಿನಗಳಲ್ಲಿ ಭ್ರಷ್ಟಾಚಾರ ರಹಿತ, ಪಾರದರ್ಶಕ, ಸ್ವಚ್ಛ ಆಡಳಿತ ನೀಡಿದ್ದ ಬಿಎಸ್‌ವೈ ಸರ್ಕಾರ ಪತನ’ ಎಂಬ ಸಂದೇಶ ವಾಟ್ಸ್‌ಆ್ಯಪ್‌ನಲ್ಲಿ ಹರಿದಾಡುತ್ತಿದೆ.

‘ನಮ್‌ ಹುಲಿ ಅಡ್ಡಾ ಕಣೋ ಇದು. ಇಲ್ಲೇ ಡ್ರಾ, ಇಲ್ಲೇ ಬಹುಮಾನ. ಕೊಡ್ತಾ ಇರ್ತೀವಿ, ತಗೋತ್ತಾ ಇರಬೇಕು. ಡೈರೆಕ್ಟ್‌ ಫೈಟ್‌ಗೆ ಬಂದ್ರೆ ಮುಲಾಜೇ ನೋಡಲ್ಲ’ ಎಂದು ಕಾಂಗ್ರೆಸ್‌ನ ಎಲ್ಲಾ ಶಾಸಕರನ್ನು ಹಿಡಿತದಲ್ಲಿಟ್ಟಿದ್ದ ಡಿ.ಕೆ. ಶಿವಕುಮಾರ್ ಕುರಿತ ಟ್ರೋಲ್ ಸದ್ದು ಮಾಡುತ್ತಿದೆ.

‘ರಾಜ್ಯದಲ್ಲಿ ರಚನೆಗೊಂಡ ಸಮ್ಮಿಶ್ರ ಸರ್ಕಾರದ ರೀತಿಯಲ್ಲಿಯೇ ಐಪಿಎಲ್‌ ಕ್ರಿಕೆಟ್‌ ಪಂದ್ಯಾವಳಿಯಲ್ಲಿ 6 ಪಂದ್ಯಗಳನ್ನು ಗೆದ್ದ ಆರ್‌ಸಿಬಿ ಹಾಗೂ 4 ಪಂದ್ಯಗಳನ್ನು ಗೆದ್ದಿದ್ದ ಡೆಲ್ಲಿ ಡೇರ್‌ ಡೆವಿಲ್ಸ್‌ ಒಂದಾಗಿಸಿ, ಅಂತಿಮ ಹಣಾಹಣಿಯಲ್ಲಿ ಅವಕಾಶ ನೀಡಬಹುದೇನೊ’ ಎಂಬ ಮೀಮ್ಸ್‌ಗಳು ಹರಿದಾಡುತ್ತಿವೆ.

ಐಪಿಎಲ್‌ ಪಂದ್ಯಾವಳಿಯಲ್ಲಿ ನೀಡುವ ‘ನಯೀ ಸೋಚ್‌ ಪ್ರಶಸ್ತಿ’ಗೆ ರಾಜಯಕೀಯದಲ್ಲಿ ಅಮಿತ್‌ ಶಾ, ದೇವೇಗೌಡ ಹಾಗೂ ಗುಲಾಂ ನಬಿ ಆಜಾದ್ ಅವರನ್ನು ಸ್ಪರ್ಧಿಗಳನ್ನಾಗಿ ಮಾಡಿದ ಪೋಸ್ಟ್‌ ಫೇಸ್‌ಬುಕ್‌ನಲ್ಲಿದೆ.

ಕನ್ನಡ, ತೆಲುಗು ಮತ್ತು ತಮಿಳು ಚಿತ್ರಗಳ ಫೋಟೋಗಳು ಕೂಡ ಟ್ರೋಲ್‌ಗೆ ಬಳಕೆಯಾಗಿವೆ. ಬಾಹುಬಲಿಯ ಒಂದು ಟ್ರೋಲ್‌ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಕ್ರಿಕೆಟ್‌ ತಾರೆಯರು ಹಾಗೂ ಪ್ರಮುಖ ಘಟನೆಗಳನ್ನು ಆಧರಿಸಿದ ಅನೇಕ ಟ್ರೋಲ್‌ಗಳೂ ಬಂದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.