ADVERTISEMENT

ಡಬ್ಬಿಂಗ್: ಕನ್ನಡಕ್ಕೆ ಮಾರಕ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2011, 18:30 IST
Last Updated 6 ಮಾರ್ಚ್ 2011, 18:30 IST

ಬೆಂಗಳೂರು: ‘ಅನ್ಯ ಭಾಷೆಯ ಸಿನಿಮಾಗಳನ್ನು ಕನ್ನಡಕ್ಕೆ ಡಬ್ಬಿಂಗ್ ಮಾಡಿದರೆ ನಿರ್ಮಾಪಕನ ಜೇಬು ಮಾತ್ರ ತುಂಬುತ್ತದೆ. ಆದರೆ ಇದು ಕನ್ನಡ ಚಿತ್ರರಂಗ, ಭಾಷೆ, ಸಂಸ್ಕೃತಿಗೆ ಮಾರಕವಾಗಲಿದೆ. ಇಂದಿನ ಸ್ವತಂತ್ರ ನಿರ್ಮಾಣದ ಸಿನಿಮಾಗಳಲ್ಲಿಯೇ ಕನ್ನಡ ಭಾಷೆ ಗಬ್ಬೆದ್ದು ಹೋಗಿದೆ. ಇನ್ನು ಡಬ್ಬಿಂಗ್ ಸಂಸ್ಕೃತಿ ಬಂದರೆ ಇನ್ನೂ ಅಧ್ವಾನವಾಗುತ್ತದೆ’ ಎಂದು ಹಿರಿಯ ನಟ, ನಿರ್ದೇಶಕ ಸಿ.ವಿ. ಶಿವಶಂಕರ್ ಆತಂಕ ವ್ಯಕ್ತಪಡಿಸಿದರು.

ಕರ್ನಾಟಕ ಕೈಗಾರಿಕಾ ಮತ್ತು ವಾಣಿಜ್ಯೋದ್ಯಮ ಕನ್ನಡ ಸಂಘಗಳ ಒಕ್ಕೂಟವು ನಗರದ ಚಾಮರಾಜಪೇಟೆಯಲ್ಲಿನ ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ‘ಡಬ್ಬಿಂಗ್- ಪ್ರಸ್ತುತ ಕನ್ನಡ ಚಿತ್ರರಂಗಕ್ಕೆ ಆಗುವ ಸಾಧಕ ಬಾಧಕಗಳು’ ಕುರಿತು ಸಂವಾದದಲ್ಲಿ ಅವರು ಮಾತನಾಡಿದರು.

ಡಬ್ಬಿಂಗ್ ಸಿನಿಮಾಗಳಲ್ಲಿ ಪರದೆಯ ಮೇಲೆ ಕಾಣುವ ಪಾತ್ರಗಳ ತುಟಿಗಳ ಚಲನೆಗೆ ತಕ್ಕಂತೆ ಮಾತುಗಳನ್ನು ಜೋಡಿಸುವುದಷ್ಟೇ ಕೆಲಸ. ಇಲ್ಲಿ ಭಾಷೆಯ ಸೊಗಡು, ಸಾಹಿತ್ಯ ಯಾವುದೂ ಲೆಕ್ಕಕ್ಕೆ ಇರುವುದಿಲ್ಲ ಎಂದರು.‘ಡಬ್ಬಿಂಗ್ ಸಿನಿಮಾಗಳಿಗೆ ಅನುಮತಿ ನೀಡಿದರೆ ಕೇವಲ ಸಂಭಾಷಣೆ ಬರೆಯುವವರಿಗೆ, ಧ್ವನಿ ನೀಡುವ ಕಲಾವಿದರಿಗೆ ಮಾತ್ರ ಉದ್ಯೋಗ ಸೃಷ್ಟಿಯಾಗುತ್ತವೆ. ಇನ್ನುಳಿದ ತಂತ್ರಜ್ಞರು, ಕಲಾವಿದರಿಗೆ ಕೆಲಸವಿಲ್ಲದಂತಾಗುತ್ತದೆ’ ಎಂದು ಆತಂಕ ವ್ಯಕ್ತಪಡಿಸಿದರು.ಒಕ್ಕೂಟದ ಅಧ್ಯಕ್ಷ ಕೆ.ಪ್ರಭಾಕರ ರೆಡ್ಡಿ, ಕಾರ್ಯಾಧ್ಯಕ್ಷ ಸಿದ್ದಯ್ಯ, ಪ್ರಧಾನ ಕಾರ್ಯದರ್ಶಿ ಬಿ.ವಿಜಯಕುಮಾರ್ ಇತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.