ADVERTISEMENT

ಡಿ.ಕೆ.ಶಿವಕುಮಾರ್ ವಿರುದ್ಧ ತೇಜಸ್ವಿನಿ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 26 ಮೇ 2012, 19:30 IST
Last Updated 26 ಮೇ 2012, 19:30 IST

ಕನಕಪುರ: ಶಾಸಕ ಡಿ.ಕೆ.ಶಿವಕುಮಾರ್ ತಮ್ಮನ್ನು ಕನಕಪುರ ತಾಲ್ಲೂಕಿನ `ಗಣಿ ಕಾಯುವ ನಾಯಿ~ ಎಂಬ ಟೀಕೆಗೆ ಅಷ್ಟೇ ಕಟುವಾದ ಪ್ರತ್ಯುತ್ತರ ನೀಡಿರುವ ಮಾಜಿ ಸಂಸದೆ ತೇಜಸ್ವಿನಿ ರಮೇಶ್ ಅವರು “ಡಿ.ಕೆ.ಶಿವಕುಮಾರ್ ಒಬ್ಬ ಹುಚ್ಚುನಾಯಿ” ತಾಲ್ಲೂಕನ್ನು ಈ ಹುಚ್ಚು ನಾಯಿಯಿಂದ ರಕ್ಷಿಸಬೇಕಿದೆ ಎಂದು ಬಲವಾದ ತಿರುಗೇಟು ನೀಡಿದರು.

ಪಟ್ಟಣದ ದೇಗುಲಮಠಕ್ಕೆ ಶನಿವಾರ ತಮ್ಮ ಅನುಯಾಯಿಗಳೊಂದಿಗೆ ಭೇಟಿ ನೀಡಿ ಸುದ್ದಿಗಾರರೊಂದಿಗೆ ಅವರು ಮಾತನಾಡುತ್ತಿದ್ದರು.

ನಾನು ತಾಲ್ಲೂಕಿನಲ್ಲಿರುವ ಗಣಿ ಸಂಪತ್ತನ್ನು ಕಾಯೋ ನಾಯಿ ನಿಜ. ಇಲ್ಲಿನ ಪ್ರಕೃತಿ ಸಂಪತ್ತನ್ನು ರಕ್ಷಣೆ ಮಾಡುವ ಜವಾಬ್ದಾರಿ ನನ್ನದು. ಹಾಗಾಗಿ ನಾನು ಆ ಕೆಲಸವನ್ನು ಮಾಡುತ್ತ್ದ್ದಿದೇನೆ. ಆದರೆ ಈ “ಡಿ.ಕೆ.ಶಿವಕುಮಾರ್ ಹುಚ್ಚುನಾಯಿ” ಈ ನಾಯಿಯಿಂದ ತಾಲ್ಲೂಕನ್ನು ರಕ್ಷಿಸಬೇಕಿದೆ ಎಂದು ಬಲವಾದ ತಿರಗೇಟು ನೀಡಿದರು. 

ಡಿಕೆಶಿ ನೀಡಿದ ದೂರಿನನ್ವಯ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ತಮಗೆ ಷೋಕಾಸ್ ನೋಟಿಸ್ ನೀಡಿದ್ದಾರೆಂಬ ವಿಷಯ ಚಾನೆಲ್‌ಗಳಲ್ಲಿ ಬಿತ್ತರವಾಗುತ್ತಿದ್ದಂತೆಯೇ ತೇಜಸ್ವಿನಿ ಕೆಂಡಾಮಂಡಲವಾದರು.

ಡಿಕೆಶಿ ಒಬ್ಬ ರಾಜಕೀಯ ಭಯೋತ್ಪಾದಕ. ಅವರಿಂದಲೇ ಕಾಂಗ್ರೆಸ್‌ಗೆ ಕುಂದುಂಟಾಗಿದೆ. ಶಿವಕುಮಾರ್ ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿದ್ದ ಸಂಧರ್ಭದಲ್ಲಿ ಪಕ್ಷವನ್ನು ಬಲಪಡಿಸಲಾಗದೆ ಹೋದರು. ಈಗ ನನ್ನನ್ನು ಕ್ಷೇತ್ರಕ್ಕೆ ಬರಬೇಡಿ ಎಂದು ನನ್ನ ಮೇಲೆ ಒತ್ತಡ ಹಾಕುವ ಮೂಲಕ ತಮ್ಮ ಸಣ್ಣತನ ಪ್ರದರ್ಶಿಸುತ್ತಿದ್ದಾರೆ. ನನ್ನನ್ನು ಈ ಕ್ಷೇತ್ರಕ್ಕೆ ಬರಬೇಡಿ ಎಂದು ಹೇಳಲು ಅವರ‌್ಯಾರು ಎಂದು ಕೇಳಿದರು.

ಟೀಕೆ: ಕೆಪಿಸಿಸಿ ನೋಟಿಸ್
ಬೆಂಗಳೂರು:
ಶಾಸಕ ಡಿ.ಕೆ.ಶಿವಕುಮಾರ್ ವಿರುದ್ಧ ಬಹಿರಂಗ ಹೇಳಿಕೆಗಳನ್ನು ನೀಡುತ್ತಿರುವ ಹಿನ್ನೆಲೆಯಲ್ಲಿ ಮಾಜಿ ಸಂಸದೆ ತೇಜಸ್ವಿನಿ ಅವರಿಗೆ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಶೋಕಾಸ್ ನೋಟಿಸ್ ಜಾರಿ ಮಾಡಿದ್ದಾರೆ.

ಇತ್ತೀಚೆಗೆ ಕನಕಪುರದಲ್ಲಿ ಶಿವಕುಮಾರ್ ವಿರುದ್ಧ ಬಹಿರಂಗ ಹೇಳಿಕೆಗಳನ್ನು ನೀಡಿದ್ದ ತೇಜಸ್ವಿನಿ, ತೀವ್ರ ವಾಗ್ದಾಳಿಯನ್ನೂ ನಡೆಸಿದ್ದರು. ಈ ಕುರಿತು ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷರಿಗೆ ದೂರು ನೀಡಿದ್ದರು. ದೂರು ಪರಿಶೀಲಿಸಿದ ಬಳಿಕ ಪರಮೇಶ್ವರ್ ತೇಜಸ್ವಿನಿ ಅವರಿಗೆ ನೋಟಿಸ್ ಜಾರಿ ಮಾಡಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.

`ಕೆಪಿಸಿಸಿಗೆ ಅಧಿಕಾರವಿಲ್ಲ~:
ನೋಟಿಸ್ ಕುರಿತು ರಾಮನಗರದಲ್ಲಿ ಪ್ರತಿಕ್ರಿಯಿಸಿರುವ ತೇಜಸ್ವಿನಿ, `ನಾನು ಎಐಸಿಸಿ ಸದಸ್ಯೆ. ನನ್ನ ವಿರುದ್ಧ ಪಕ್ಷದಲ್ಲಿ ಕ್ರಮ ಕೈಗೊಳ್ಳಬೇಕಿದ್ದರೆ ಅದನ್ನು ಎಐಸಿಸಿ ಅಧ್ಯಕ್ಷರೇ ಮಾಡಬೇಕು. ನನಗೆ ನೋಟಿಸ್ ನೀಡಲು ಕೆಪಿಸಿಸಿಗೆ ಅವಕಾಶ ಇಲ್ಲ. ನೋಟಿಸ್ ನನ್ನ ಕೈಸೇರುವ ಮುನ್ನವೇ ಈ ಸುದ್ದಿ ಟಿ.ವಿ. ಚಾನೆಲ್‌ಗಳಲ್ಲಿ ಬಿತ್ತರವಾಗಿದೆ.

ಈ ಮೂಲಕ ಪ್ರದೇಶ ಕಾಂಗ್ರೆಸ್ ಸಮಿತಿಯಲ್ಲಿನ ಗೋಪ್ಯತೆಯನ್ನು ಬೀದಿಯಲ್ಲಿ ಬಹಿರಂಗ ಹರಾಜು ಹಾಕಲಾಗುತ್ತಿದೆ. ಕೆಪಿಸಿಸಿಯಲ್ಲಿರುವ ಶಿವಕುಮಾರ್ ಅವರ ಕೆಲವು ಏಜೆಂಟರು ಪಕ್ಷದೊಳಗಿನ ಆಂತರಿಕ ವಿಚಾರಗಳನ್ನೆಲ್ಲಾ ಹೊರಕ್ಕೆ ಹರಿಬಿಡುತ್ತಿದ್ದಾರೆ. ಇಂತಹ ಪಕ್ಷದ್ರೋಹಿಗಳನ್ನು ಮೊದಲು ಪಕ್ಷದಿಂದ ಕಿತ್ತೆಸೆಯಬೇಕು~ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.