ADVERTISEMENT

ಡಿ.28ರಂದು ಅಲ್ಪಸಂಖ್ಯಾತರ ರಾಜ್ಯಮಟ್ಟದ ಸಮ್ಮೇಳನ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2013, 19:30 IST
Last Updated 17 ಡಿಸೆಂಬರ್ 2013, 19:30 IST

ಬೆಂಗಳೂರು: ‘ರಾಜ್ಯದಲ್ಲಿ ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ದೌರ್ಜನ್ಯದ ಕುರಿತು ಚರ್ಚಿಸಲು ಡಿ.28 ರಂದು ರಾಜ್ಯಮಟ್ಟದ ಅಲ್ಪಸಂಖ್ಯಾತರ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗಿದೆ’ ಎಂದು ಜೆಡಿ(ಯು) ಪಕ್ಷದ ರಾಜ್ಯ ಘಟಕದ ಸಂಚಾಲಕ ಸೈಯದ್‌ ಮಹಬೂಬ್‌ ತಿಳಿಸಿದರು.

ನಗರದಲ್ಲಿ ಇತ್ತೀಚೆಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನಗರದ ಕನ್ನಿಂಗ್‌ಹ್ಯಾಂ ರಸ್ತೆಯಲ್ಲಿರುವ ಫಿರೋಜ್‌ ಎಸ್ಟೇಟ್‌ನ ಆರನೇ ಮಹಡಿಯ ಸಭಾಂಗಣದಲ್ಲಿ ಸಮ್ಮೇಳನ ನಡೆಯಲಿದೆ. ಇತ್ತೀಚೆಗೆ ನಡೆದ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಆಯ್ಕೆಯಾಗಿರುವ ಪಕ್ಷದ ಶಾಸಕ ಶೋಯಬ್‌ ಇಕ್ಬಾಲ್‌ ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ ಎಂದರು.

‘ಅಲ್ಪಸಂಖ್ಯಾತರಿಗಾಗಿ ರಾಜ್ಯ ಸರ್ಕಾರವು ಬಿದಾಯಿ ಯೋಜನೆಯನ್ನು ಜಾರಿ ಗೊಳಿಸುವ ಮೂಲಕ ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿದೆ. ಬಿದಾಯಿ ಯೋಜನೆಯನ್ನು ಕೈಬಿಟ್ಟು ಮುಸ್ಲಿಂ, ಸಿಖ್‌, ಕ್ರೈಸ್ತ, ಜೈನ ಮತ್ತು ಬೌದ್ಧ  ಅಲ್ಪ ಸಂಖ್ಯಾತ ಸಮುದಾಯಗಳಲ್ಲಿರುವ  ನಿರುದ್ಯೋಗಿ ಯುವಕರಿಗೆ ಉದ್ಯೋಗ ಕಲ್ಪಿಸುವ, ವಿದ್ಯಾವಂತರಿಗೆ ಸರ್ಕಾರಿ ಕೆಲಸ ನೀಡುವ  ಕುರಿತು ಚಿಂತನೆ ನಡೆಸಬೇಕು ಎಂದರು.

ಸಮ್ಮೇಳನದಲ್ಲಿ ಸಾಚಾರ್‌ ಸಮಿತಿಯ ಅನುಷ್ಠಾನ, ರಾಜ್ಯದ ಉರ್ದು ಶಾಲೆಗಳಿಗೆ ಶಿಕ್ಷಕರನ್ನು ನೇಮಿಸುವುದು, ಅಲ್ಪಸಂಖ್ಯಾತ ಸಮುದಾಯಗಳ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ವಿಶೇಷ ಕ್ರಮ ಕೈಗೊಳ್ಳುವುದು, ಸರ್ಕಾರ ಅವೈಜ್ಞಾನಿಕವಾಗಿ ಜಾರಿಗೆ ತಂದಿರುವ ಬಿದಾಯಿ ಯೋಜನೆಯನ್ನು ರದ್ದುಪಡಿಸಿ ಅವಿವಾಹಿತ ಅಲ್ಪಸಂಖ್ಯಾತ ಮಹಿಳೆಯರಿಗೆ ಸರ್ಕಾರಿ ಉದ್ಯೋಗ ಕಲ್ಪಿಸುವಂತೆ ಸಮ್ಮೇಳನದಲ್ಲಿ ಒತ್ತಾಯಿಸಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.