ADVERTISEMENT

ಡೋಪಿಂಗ್ ಸಾಬೀತು: ದೋಷಾರೋಪ ಪಟ್ಟಿ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2018, 19:32 IST
Last Updated 10 ಏಪ್ರಿಲ್ 2018, 19:32 IST

ಬೆಂಗಳೂರು: ರೇಸ್‌ನಲ್ಲಿ ಪ್ರಶಸ್ತಿ ಜಯಿಸಿದ್ದ ‘ಕ್ವೀನ್‌ ಲತೀಫಾ’ ಕುದುರೆಗೆ ಉದ್ದೀಪನಾ ಮದ್ದು (ಡೋಪಿಂಗ್) ನೀಡಲಾಗಿತ್ತು ಎಂಬುದು ಸಿಐಡಿ ತನಿಖೆಯಿಂದ ಸಾಬೀತಾಗಿದ್ದು, ಈ ಸಂಬಂಧ ಕ್ಲಬ್ ಸಿಇಒ ಎಸ್‌.ನಿರ್ಮಲ್ ಪ್ರಸಾದ್ ಸೇರಿ ಆರು ಮಂದಿ ವಿರುದ್ಧ 1ನೇ ಎಸಿಎಂಎಂ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ.

ಪ್ರಕರಣದ ತನಿಖೆ ನಡೆಸಿದ ಸಿಐಡಿ ಡಿವೈಎಸ್ಪಿ ಕೆ.ನಂಜುಂಡೇಗೌಡ ನೇತೃತ್ವದ ತಂಡವು ನಿರ್ಮಲ್ ಪ್ರಸಾದ್, ಪ್ರದ್ಯುಮ್ನ ಸಿಂಗ್,
ಡಾ.ಎಚ್‌.ಎಸ್‌.ಮಹೇಶ್‌, ವಿವೇಕ್ ಉಭಯ್‌ಕರ್‌, ಅರ್ಜುನ್ ಸಜನಾನಿ ಹಾಗೂ ನೀಲ್‌ ದರಾಶಾ ವಿರುದ್ಧ 700 ಪುಟಗಳ ಆರೋಪ ಪಟ್ಟಿ ಸಲ್ಲಿಸಿದೆ. ರೇಸ್‌ನಲ್ಲಿ ‘ಕ್ವೀನ್‌ ಲತೀಫಾ’ ಕುದುರೆಯ ಸವಾರಿ ಮಾಡಿದ್ದ ದೇಶದ ಪ್ರಖ್ಯಾತ ಜಾಕಿ ಸೂರಜ್ ನರೇಡು ಸೇರಿ 44 ಮಂದಿಯ ಹೇಳಿಕೆಗಳನ್ನೂ ಅದರಲ್ಲಿ ಸೇರಿಸಿದೆ.

2017ರ ಮಾರ್ಚ್ 5ರಂದು ನಡೆದ ರೇಸ್‌ನಲ್ಲಿ ಮೂರು ವರ್ಷದ ಕ್ವೀನ್ ಲತಿಫಾ ‘ರೇಸ್ ಕೋರ್ಸ್ ಓನರ್ಸ್ ಅಸೋಸಿಯೇಷನ್’ ಪ್ರಶಸ್ತಿ ಗೆದ್ದಿತ್ತು. ವಾಡಿಕೆಯಂತೆ ಗೆದ್ದ ಕುದುರೆಯ ಮೂತ್ರವನ್ನು ದೆಹಲಿಯಲ್ಲಿರುವ ‘ನ್ಯಾಷನಲ್ ಡೋಪಿಂಗ್ ಟೆಸ್ಟ್ ಲ್ಯಾಬೊರೇಟರಿಗೆ (ಎನ್‌ಡಿಟಿಎಲ್‌)’ ಕಳುಹಿಸಲಾಗಿತ್ತು. ‘ಕುದುರೆಗೆ ಉದ್ದೀಪನಾ ಮದ್ದು ನೀಡಲಾಗಿದೆ’ ಎಂದು ಮಾರ್ಚ್ 23ರಂದು ಅಲ್ಲಿನ ತಜ್ಞರು ವರದಿ ಕೊಟ್ಟಿದ್ದರು.

ADVERTISEMENT

ವರದಿ ಬಂದ ಕೂಡಲೇ ಬಿಟಿಸಿ ಅಧಿಕಾರಿಗಳು ಕ್ವೀನ್ ಲತೀಫಾಗೆ ತರಬೇತಿ ನೀಡಿದ್ದ ಸ್ಥಳಕ್ಕೆ (ಸ್ಟೇಬಸ್) ಹೋಗಿ ಪರಿಶೀಲನೆ ನಡೆಸಬೇಕಿತ್ತು. ಅಲ್ಲಿ ಯಾವುದಾದರೂ ಚುಚ್ಚುಮದ್ದುಗಳು ಅಥವಾ ನಿಷೇಧಿತ ಔಷಧಗಳು ಬಿದ್ದಿವೆಯೇ ಎಂಬುದನ್ನು ಪತ್ತೆ ಮಾಡಬೇಕಿತ್ತು. ಈ ಕ್ರಮ ಅನುಸರಿಸದ ಅಧಿಕಾರಿಗಳು, ತಜ್ಞರ ವರದಿಯನ್ನೂ ಬಚ್ಚಿಡುವ ಮೂಲಕ ಕೋಟ್ಯಂತರ ರೂಪಾಯಿ ಬೆಟ್ಟಿಂಗ್ ಕಟ್ಟಿದ್ದ ಸಾರ್ವಜನಿಕರಿಗೆ ವಂಚಿಸಿದ್ದಾರೆ ಎಂದು ಅಧಿಕಾರಿಗಳು ಆರೋಪಪಟ್ಟಿಯಲ್ಲಿ ಹೇಳಿದ್ದಾರೆ.

ಅಧ್ಯಕ್ಷನನ್ನೇ ಬದಲಾಯಿಸಿದರು: ‘ಕ್ವೀನ್‌ ಲತೀಫಾ ಕುದುರೆಯ ಮಾಲೀಕ ಅರ್ಜುನ್ ಸಜನಾನಿ. ಅವರು ಕ್ಲಬ್‌ನ ವ್ಯವಸ್ಥಾಪಕ ಮಂಡಳಿಯ ಸದಸ್ಯ ಹಾಗೂ ಹಿರಿಯ ಸ್ಟೀವರ್ಡ್ ಆಗಿದ್ದ ವಿವೇಕ್‌ ಉಭಯ್‌ಕರ್‌ನ ಆಪ್ತರು. ಇಬ್ಬರೂ ಲ್ಯಾವೆಲ್ಲೆ ರಸ್ತೆಯ ‘ಸ್ಕೈಲೈನ್ ರೆಸಿಡೆನ್ಸಿ’ ಅಪಾರ್ಟ್‌ಮೆಂಟ್‌ ಸಮುಚ್ಚಯದಲ್ಲಿ ಒಂದೇ ಫ್ಲ್ಯಾಟ್‌ನಲ್ಲಿ ನೆಲೆಸಿದ್ದಾರೆ. ಸ್ನೇಹಿತನ ಕುದುರೆಗೆ ಉದ್ದೀಪನಾ ಮದ್ದು ನೀಡಲಾಗಿದೆ ಎಂಬ ಆರೋಪ ಕೇಳಿಬಂದಿದ್ದರಿಂದ ಅವರ ನೆರವಿಗೆ ವಿವೇಕ್ ನಿಂತಿದ್ದರು ಎಂಬ ಅಂಶವನ್ನು ಆರೋಪಪಟ್ಟಿಯಲ್ಲಿ ಸೇರಿಸಿದ್ದೇವೆ’ ಎಂದು ಸಿಐಡಿ ಅಧಿಕಾರಿಗಳು ‘ಪ್ರಜಾವಾಣಿ’ಗೆ ತಿಳಿಸಿದರು.

‘ಮೊದಲು ಬಿಟಿಸಿಯಲ್ಲಿ ಕಾರ್ಯದರ್ಶಿಯಾಗಿದ್ದ ನಿರ್ಮಲ್ ಪ್ರಸಾದ್, 2016ರಲ್ಲಿ ಸ್ವಯಂ ನಿವೃತ್ತಿ ಹೊಂದಿದರು. ಆದರೆ, ವಿವೇಕ್ ಕೃಪೆಯಿಂದ ಆ ನಂತರವೂ ಸಿಇಒ ಆಗಿ ಮುಂದುವರಿದಿದ್ದರು. ತನಗೆ ಉನ್ನತ ಹುದ್ದೆ ಕಲ್ಪಿಸಿಕೊಟ್ಟಿದ್ದಕ್ಕಾಗಿ ನಿರ್ಮಲ್, ‘ಡೋಪಿಂಗ್ ಅಕ್ರಮ’ದಲ್ಲಿ ವಿವೇಕ್ ಹಾಗೂ ಅರ್ಜುನ್‌ಗೆ ನೆರವಾಗಿದ್ದರು.’

‘ಎನ್‌ಡಿಟಿಎಲ್‌ನಿಂದ ಬಂದಿದ್ದ ವರದಿಯನ್ನು ಆಗಿನ ಅಧ್ಯಕ್ಷರಾಗಿದ್ದ ಎನ್‌.ಹರೀಂದ್ರ ಶೆಟ್ಟಿ ಅವರ ಗಮನಕ್ಕೆ ಬಾರದಂತೆ ವಿವೇಕ್ ಹಾಗೂ ಪದ್ಯುಮ್ನ ಸಿಂಗ್ ನೋಡಿಕೊಂಡಿದ್ದರು. ‘ಹರೀಂದ್ರ ಶೆಟ್ಟಿ ಅದೇ ಸ್ಥಾನದಲ್ಲಿ ಮುಂದುವರಿದರೆ ಸ್ನೇಹಿತ ಕಷ್ಟಕ್ಕೆ ಸಿಲುಕುತ್ತಾನೆ’ ಎಂದು ನಿರ್ಧರಿಸಿದ ವಿವೇಕ್, ವ್ಯವಸ್ಥಾಪಕ ಮಂಡಳಿ ಸದಸ್ಯರ ಜತೆ ಸೇರಿ ಅವರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಸಲು ಸಂಚು ರೂಪಿಸಿದ್ದರು.’

‘ಕ್ವೀನ್ ಲತೀಫಾ ಪ್ರಕರಣಕ್ಕೆ ಸಂಬಂಧಿಸಿದಂತೆ ಏಪ್ರಿಲ್ 27ರಂದು ಕ್ಲಬ್‌ನಲ್ಲಿ ಮಹತ್ವದ ಸಭೆಯೊಂದು ನಡೆಯಿತು. ಅದರ ಕಾರ್ಯಸೂಚಿ (ಅಜೆಂಡಾ) ಬದಲಾಯಿಸಿ ಹರೀಂದ್ರಶೆಟ್ಟಿ ಸಭೆಗೆ ಹಾಜರಾಗದಂತೆ ಮಾಡಿದ ಅವರು, ‘ಅಧ್ಯಕ್ಷರಿಗೆ ಅಜೆಂಡಾ ತಲುಪಿಸಿದ್ದೇವೆ’ ಎಂದು ಡೆಲಿವರಿ ಬಾಯ್ ಅರುಣ್ ಹಾಗೂ ಟೆಲಿಫೋನ್ ರಿಸಫ್ಶನಿಸ್ಟ್ ರೇಖಾ ಅವರಿಂದ ಸುಳ್ಳು ದಾಖಲೆಗಳನ್ನು ಬರೆಸಿದ್ದರು. ಆ ನಂತರ ಅಧ್ಯಕ್ಷರ ಬದಲಾವಣೆ ಸಂಬಂಧ ನಡೆದ ಮತ್ತೊಂದು ಸಭೆಯಲ್ಲಿ ವೈ.ಜಗನ್ನಾಥ್ ಅವರನ್ನು ಅವಿರೋಧ ಆಯ್ಕೆ ಮಾಡಲಾಗಿತ್ತು’ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಸುಳ್ಳು ವರದಿ ಸೃಷ್ಟಿ:  ‘ಕುದುರೆಯಿಂದ ಸಂಗ್ರಹಿಸಿದ ಪ್ರತಿ ಮಿಲಿ ಲೀಟರ್‌ ಮೂತ್ರದಲ್ಲೂ 10 ನ್ಯಾನೊಗ್ರಾಂ ಪ್ರೋಕೈನ್‌ ಅಂಶ ಇರಬಹುದು ಎಂದು ‘ಯುರೋಪಿಯನ್‌ ಹಾರ್ಸ್‌ ರೇಸಿಂಗ್‌ ಸೈಂಟಿಫಿಕ್‌ ಲಿಯಸನ್‌’ ಸಮಿತಿ ಶಿಫಾರಸು ಮಾಡಿದೆ. ಅದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಮದ್ದಿನ ಅಂಶ ಪತ್ತೆಯಾದರೆ ಅಪರಾಧವಾಗುತ್ತದೆ. ಆದರೆ, ಕ್ವೀನ್ ಲತೀಫಾ ದೇಹದಲ್ಲಿ ಅಷ್ಟು ಪ್ರಮಾಣದ ಮದ್ದು ಇರಲಿಲ್ಲವೆಂದು ಮಾರಿಷಸ್‌ನ ‘ಕ್ವಾಂಟಿ’ ಪ್ರಯೋಗಾಲಯವೇ  ಹೇಳಿರುವುದಾಗಿ ಆರೋ‍ಪಿಗಳು ಸುಳ್ಳು ದಾಖಲೆಗಳನ್ನು ಸೃಷ್ಟಿಸಿದ್ದರು. ನಂತರ ಬಿಟಿಸಿಯ ನಿಯಮಗಳ ಪಟ್ಟಿಯನ್ನು ತಮ್ಮ ಇಚ್ಛೆಯಂತೆ ಬದಲಾಯಿಸಿದ್ದರು’ ಎಂದು ಅಧಿಕಾರಿಗಳು ಹೇಳಿದ್ದಾರೆ.

ಇದೇ ಸಂದರ್ಭದಲ್ಲಿ ‘ರಾಫಾ’ ಹೆಸರಿನ ಕುದುರೆಗೂ ಉದ್ದೀಪನಾ ಮದ್ದು ನೀಡಲಾಗಿದೆ ಎಂಬ ಆರೋಪ ಕೇಳಿ ಬಂದಿತು. ಆಗ ಆಡಳಿತ ಮಂಡಳಿ ಸದಸ್ಯರು ಆ ಕುದುರೆಯ ಲಾಯಕ್ಕೆ ಹೋಗಿ ಪರಿಶೀಲನೆ ನಡೆಸಿದ್ದರು. ‘ಕ್ವೀನ್ ಲತೀಫಾ’ದ ಲಾಯ ಪರಿಶೀಲಿಸದೆ, ತನ್ನ ಕುದುರೆಯ ಲಾಯವನ್ನಷ್ಟೇ ತಪಾಸಣೆ ನಡೆಸಿದ್ದಕ್ಕೆ ‘ರಾಫಾ’ ತರಬೇತುದಾರ ಡಾಮಿನಿಕ್ ಆಕ್ಷೇಪ ವ್ಯಕ್ತಪಡಿಸಿದ್ದರು. ಆ ಕಾರಣದಿಂದ 15 ದಿನಗಳ ನಂತರ ಕ್ವೀನ್ ಲತೀಫಾದ ಲಾಯವನ್ನೂ ತಪಾಸಣೆ ಮಾಡಿದ್ದರು. ಅಷ್ಟರಲ್ಲಾಗಲೇ ಅದರ ತರಬೇತುದಾರ ನೀಲ್ ದರಾಶಾ ಲಾಯವನ್ನು ಪೂರ್ತಿ ಸ್ವಚ್ಛಗೊಳಿಸಿದ್ದ.

ಆರೋಪಿಗಳ ವಿವರ

ಎಸ್‌.ನಿರ್ಮಲ್ ಪ್ರಸಾದ್: ಬಿಟಿಸಿ ಸಿಇಒ

ಪ್ರದ್ಯುಮ್ನ ಸಿಂಗ್: ಮುಖ್ಯ ಸ್ಟೈಫಂಡರಿ ಅಧಿಕಾರಿ

ವಿವೇಕ್‌ ಉಭಯ್‌ಕರ್: ಕ್ಲಬ್ ಸ್ಟೀವರ್ಡ್ ಹಾಗೂ ಲ್ಯಾವೆಲ್ಲೆ ರಸ್ತೆಯಲ್ಲಿರುವ ‘ಸನ್ನೀಸ್’ ರೆಸ್ಟೋರೆಂಟ್‌ನ ಮಾಲೀಕರಲ್ಲಿ ಒಬ್ಬರು.

ಅರ್ಜುನ್ ಸಜನಾನಿ: ‘ಕ್ವೀನ್ ಲತೀಫಾ’ ಕುದುರೆಯ ಮಾಲೀಕ

ನೀಲ್ ದರಶಾ: ಕುದುರೆ ತರಬೇತುದಾರ

ಎಚ್‌.ಎಸ್.ಮಹೇಶ್: ಟರ್ಫ್‌ಕ್ಲಬ್‌ನ ಪ‍ಶು ವೈದ್ಯಾಧಿಕಾರಿ

40,613 ಮಂದಿ ಬಾಜಿ ಕಟ್ಟಿದ್ದರು!

‘ಮಾರ್ಚ್ 5ರಂದು ಬೆಂಗಳೂರಿನಲ್ಲಿ ಮೊದಲ ಸ್ಥಾನ ಪಡೆದಿದ್ದ ಕ್ವೀನ್ ಲತೀಫಾ, ಅದೇ ವರ್ಷದ ಏ.14ರಂದು ಊಟಿಯಲ್ಲಿ ನಡೆದ ರೇಸ್‌ನಲ್ಲಿ ನಾಲ್ಕನೇ ಸ್ಥಾನ ಪಡೆಯಿತು. ಗೆಲ್ಲುವ ಕುದುರೆ ಎಂದು ನಂಬಿ ಊಟಿಯಲ್ಲಿ 40,613 ಮಂದಿ ಬಾಜಿ ಕಟ್ಟಿ ಮೋಸ ಹೋಗಿದ್ದಾರೆ’ ಎಂದು ಅಧಿಕಾರಿಗಳು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.