ADVERTISEMENT

ಡ್ರಗ್ಸ್ ದಂಧೆಯ ಕಡಿವಾಣಕ್ಕೆ ‘1908’

* ಒಂದೇ ದಿನ ಐದು ಕಡೆ ಪೊಲೀಸರ ದಾಳಿ * ಮಾದಕ ವಸ್ತು ಮಾರುತ್ತಿದ್ದ 10 ಮಂದಿ ಸೆರೆ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2017, 19:30 IST
Last Updated 8 ನವೆಂಬರ್ 2017, 19:30 IST
ಡ್ರಗ್ಸ್ ದಂಧೆಯ ಕಡಿವಾಣಕ್ಕೆ ‘1908’
ಡ್ರಗ್ಸ್ ದಂಧೆಯ ಕಡಿವಾಣಕ್ಕೆ ‘1908’   

ಬೆಂಗಳೂರು: ಮಾದಕ ವಸ್ತು ಮಾರಾಟ ದಂಧೆಗೆ ಕಡಿವಾಣ ಹಾಕಲು ‘1908’ ದೂರು ಸ್ವೀಕಾರ ಕೇಂದ್ರ ಪ್ರಾರಂಭಿಸಿ ಕಾರ್ಯಾಚರಣೆಗೆ ಇಳಿದಿರುವ ನಗರ ಪೊಲೀಸರು, ಮಂಗಳವಾರ ಒಂದೇ ದಿನ ಐದು ಕಡೆ ದಾಳಿ ನಡೆಸಿ ನೈಜೀರಿಯಾ ಪ್ರಜೆ ಸೇರಿ 10 ಮಂದಿಯನ್ನು ಬಂಧಿಸಿದ್ದಾರೆ.

ಕೊಕೇನ್ ಜಪ್ತಿ
ನೈಜೀರಿಯಾದಿಂದ ಕೊಕೇನ್ ತರಿಸಿಕೊಂಡು ನಗರದ ವಿದ್ಯಾರ್ಥಿಗಳಿಗೆ ಮಾರುತ್ತಿದ್ದ ಛುಕ್ವು ಗಾಡ್ವಿನ್ (36) ಎಂಬಾತ ಸುದ್ದಗುಂಟೆಪಾಳ್ಯ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ಆತನ ಬಳಿ 25 ಗ್ರಾಂ ಕೊಕೇನ್ ಪತ್ತೆಯಾಗಿದೆ.

‘ಬಟ್ಟೆ ವ್ಯಾಪಾರದ ಸಲುವಾಗಿ 2014ರಲ್ಲಿ ನಗರಕ್ಕೆ ಬಂದ ನೈಜೀರಿಯಾದ ಛುಕ್ವು, ಹೊಸಕೋಟೆ ರಸ್ತೆಯ ಮೇಡಹಳ್ಳಿಯಲ್ಲಿ ಮನೆ ಬಾಡಿಗೆ ಪಡೆದು ವಾಸವಾಗಿದ್ದ. ಮೊದಲು ಉಚಿತವಾಗಿ ಗಾಂಜಾ ಕೊಟ್ಟು ವಿದ್ಯಾರ್ಥಿಗಳನ್ನು ಮಾದಕ ವ್ಯಸನಿಗಳನ್ನಾಗಿ ಮಾಡಿಕೊಳ್ಳುತ್ತಿದ್ದ ಈತ, ದಿನ ಕಳೆದಂತೆ ಅವರಿಗೆ ಕೊಕೇನ್‌ನ ರುಚಿ ತೋರಿಸಿ ಹಣ ಕೀಳುತ್ತಿದ್ದ. ಅಲ್ಲದೆ, ಪಬ್ ಹಾಗೂ ಪಾರ್ಟಿಗಳಿಗೂ ಹೋಗಿ ಯುವಕ–ಯುವತಿಯರಿಗೆ ಕೊಕೇನ್ ಮಾರುತ್ತಿದ್ದ’ ಎಂದು ಪೊಲೀಸರು ತಿಳಿಸಿದರು.

ADVERTISEMENT

‘ಆರೋಪಿ ಮಾದಕ ವಸ್ತು ಮಾರುತ್ತಿರುವ ಬಗ್ಗೆ ವ್ಯಕ್ತಿಯೊಬ್ಬರು ‘1908’ಗೆ ಕರೆ ಮಾಡಿ ಸುಳಿವು ನೀಡಿದರು. ಆ ನಂತರ ಎರಡು ದಿನ ಆತನ ಚಲನವಲನಗಳ ಮೇಲೆ ನಿಗಾ ಇಟ್ಟು, ಮಂಗಳವಾರ ಮಧ್ಯಾಹ್ನ ಮನೆ ಮೇಲೆ ದಾಳಿ ನಡೆಸಿ ಬಂಧಿಸಿದೆವು’ ಎಂದು ಮಾಹಿತಿ ನೀಡಿದರು.

8 ಕೆ.ಜಿ ಗಾಂಜಾ
ಜಯನಗರದ ಮೇವ ಕಾಲೇಜು ಬಳಿ ಗಾಂಜಾ ಮಾರುತ್ತಿದ್ದ ಪೂರ್ಣ ಚಂದ್ರನಾಥ್ ಅಲಿಯಾಸ್ ಬಬ್ಲೂ (45), ಸೂರಜ್‌ಕುಮಾರ್ (38), ವಿಜಯ್‌ಕುಮಾರ್ (35) ಹಾಗೂ ಕಮಲೇಶ್ (24) ಎಂಬುವರನ್ನು ತಿಲಕ್‌ನಗರ ಪೊಲೀಸರು ಬಂಧಿಸಿದ್ದಾರೆ.

‘ಒಡಿಶಾದ ಬಬ್ಲೂ, ತನ್ನ ರಾಜ್ಯದಿಂದ ರೈಲಿನಲ್ಲಿ ಗಾಂಜಾ ಮೂಟೆ ತೆಗೆದುಕೊಂಡು ಕೆ.ಆರ್.ಪುರ ನಿಲ್ದಾಣಕ್ಕೆ ಬರುತ್ತಿದ್ದ. ಅಲ್ಲಿಂದ ವಿಜಯ್‌ನ ಸರಕು ಸಾಗಣೆ ಆಟೊದಲ್ಲಿ ಆ ಮೂಟೆಯನ್ನು ಇಟ್ಟುಕೊಂಡು, ಕೆಂಗೇರಿಯ ಮಲ್ಲಸಂದ್ರದಲ್ಲಿರುವ ಸೂರಜ್‌ನ ಮನೆಗೆ ಹೋಗುತ್ತಿದ್ದರು. ಅಲ್ಲಿ ಗಾಂಜಾ ಸೊಪ್ಪನ್ನು ಸಣ್ಣ ಸಣ್ಣ ಪೊಟ್ಟಣಗಳಿಗೆ ತುಂಬಿ, ಕಮಲೇಶ್‌ನ ಮೂಲಕ ವಿದ್ಯಾರ್ಥಿಗಳಿಗೆ ಮಾರಾಟ ಮಾಡಿಸುತ್ತಿದ್ದರು’ ಎಂದು ಅಧಿಕಾರಿಯೊಬ್ಬರು ಹೇಳಿದರು.

‘ಬಂಧಿತರಿಂದ 8 ಕೆ.ಜಿ.ಗಾಂಜಾ ಹಾಗೂ ಕೃತ್ಯಕ್ಕೆ ಬಳಸುತ್ತಿದ್ದ ಆಟೊವನ್ನು ಜಪ್ತಿ ಮಾಡಲಾಗಿದೆ. ಮಡಿವಾಳ ಹಾಗೂ ಮೈಕೊಲೇಔಟ್ ಠಾಣೆಗಳಲ್ಲೂ ಇವರ ವಿರುದ್ಧ ಪ್ರಕರಣಗಳು ದಾಖಲಾಗಿವೆ’ ಎಂದು ಮಾಹಿತಿ ನೀಡಿದರು.

ಸಿಸಿಬಿಗೆ ಸಿಕ್ಕಿಬಿದ್ದರು
ಮೈಸೂರು ರಸ್ತೆಯ ವಾಲ್ಮೀಕಿ ನಗರದಲ್ಲಿ ಕಾರ್ಯಾಚರಣೆ ನಡೆಸಿದ ಸಿಸಿಬಿ ಪೊಲೀಸರು, ಆಸಿಫ್ ಅಲಿಯಾಸ್ ಅತಾವುಲ್ಲಾ (51) ಎಂಬಾತನನ್ನು ಬಂಧಿಸಿ 1 ಕೆ.ಜಿ. 100 ಗ್ರಾಂ ಗಾಂಜಾ ಜಪ್ತಿ ಮಾಡಿದ್ದಾರೆ.

ಮತ್ತೊಂದು ಪ್ರಕರಣದಲ್ಲಿ ಬೆಳಿಗ್ಗೆ 11.30ರ ಸುಮಾರಿಗೆ ಮುರುಗೇಶ್‌ಪಾಳ್ಯದ ‘ಗೀತಾಸ್ ಹರ್ಬಲ್ ಪಾರ್ಲರ್’‍ ಮುಂದೆ ನಿಂತು ಗಾಂಜಾ ಮಾರುತ್ತಿದ್ದ ವಿಬೇಶ್ ಅಲಿಯಾಸ್ ವಿಬಿನ್ (34) ಸಿಸಿಬಿ ಬಲೆಗೆ ಬಿದ್ದಿದ್ದಾನೆ. ಆತನ ಬಳಿ 1 ಕೆ.ಜಿ 200. ಗ್ರಾಂ ಗಾಂಜಾ ಸಿಕ್ಕಿದೆ. ಇನ್ನೊಬ್ಬ ಆರೋಪಿ ನ್ಯಾನೇಶ್ ತಪ್ಪಿಸಿಕೊಂಡಿದ್ದಾನೆ.

ವಿಮಾನದಲ್ಲಿ ಪ್ರಯಾಣ!
ಕೋರಮಂಗಲ ಪೊಲೀಸರ ಕಾರ್ಯಾಚರಣೆಯಲ್ಲಿ ರಾಜಸ್ಥಾನದ ಗಂಗರಾಮ್ ಹಾಗೂ ದಿಲೀಪ್ ಎಂಬುವರು ಸಿಕ್ಕಿಬಿದ್ದಿದ್ದಾರೆ.

ಕೋರಮಂಗಲದಲ್ಲಿ ಬೀಡಾ ಅಂಗಡಿ ಇಟ್ಟುಕೊಂಡಿರುವ ಇವರು, ತಿಂಗಳಿಗೊಮ್ಮೆ ವಿಮಾನದಲ್ಲಿ ತಮ್ಮ ರಾಜ್ಯಕ್ಕೆ ತೆರಳುತ್ತಿದ್ದರು. ಅಲ್ಲಿ ಗಾಂಜಾ ತೆಗೆದುಕೊಂಡು ರೈಲಿನಲ್ಲಿ ನಗರಕ್ಕೆ ವಾಪಸಾಗುತ್ತಿದ್ದರು.

ನಗರದ ಆಗ್ನೇಯ ವಿಭಾಗದ ಬಹುತೇಕ ಬೀಡಾ ಅಂಗಡಿಗಳಿಗೆ ಇವರು ಗಾಂಜಾ ಸೊಪ್ಪನ್ನು ಪೂರೈಸುತ್ತಿದ್ದರು. ಬಂಧಿತರಿಂದ 2 ಕೆ.ಜಿ ಗಾಂಜಾ ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.