ADVERTISEMENT

ತಂದೆ, ಮಕ್ಕಳ ಆತ್ಮಹತ್ಯೆ ಯತ್ನ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2013, 19:30 IST
Last Updated 7 ಡಿಸೆಂಬರ್ 2013, 19:30 IST

ಬೆಂಗಳೂರು: ನೆರೆಮನೆಯವರು ಅವಾಚ್ಯ ಶಬ್ದಗಳಿಂದ ನಿಂದಿಸಿದ ಕಾರಣಕ್ಕೆ ಆಹಾರದಲ್ಲಿ ವಿಷ ಬೆರೆಸಿ­ಕೊಂಡು ತಿಂದು ಒಂದೇ ಕುಟುಂಬದ ಮೂವರು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಪೀಣ್ಯದಲ್ಲಿ ಶನಿವಾರ ನಡೆದಿದೆ. ಬಿಎಚ್‌ಇಎಲ್‌ ಮಿನಿ ಕಾಲೊನಿ ನಿವಾಸಿ ರಾಮಣ್ಣ (45), ಅವರ ಮಕ್ಕಳಾದ ಶಶಿಕಲಾ (22) ಮತ್ತು ಸೌಮ್ಯಾ (19) ಆತ್ಮಹತ್ಯೆಗೆ ಯತ್ನಿಸಿದವರು.

ಕೂಲಿ ಕೆಲಸ ಮಾಡುವ ರಾಮಣ್ಣ ಮತ್ತು ಪಕ್ಕದ ಮನೆಯ ಬೈಲಪ್ಪ ಎಂಬು­ವರ ನಡುವೆ ಶುಕ್ರವಾರ ರಾತ್ರಿ ಜಗಳವಾಗಿತ್ತು. ಈ ವೇಳೆ ಬೈಲಪ್ಪ, ಶಶಿಕಲಾ ಮತ್ತು ಸೌಮ್ಯಾ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ ಕಾರಣಕ್ಕೆ ನೊಂದು ಆತ್ಮಹತ್ಯೆಗೆ ಯತ್ನಿಸಿದ್ದಾಗಿ ರಾಮಣ್ಣ ಹೇಳಿಕೆ ನೀಡಿ­ದ್ದಾರೆ ಎಂದು ಪೊಲೀಸರು ತಿಳಿಸಿ­ದ್ದಾರೆ. ಬೆಳಗ್ಗೆ 8 ಗಂಟೆ ಸುಮಾರಿಗೆ ಮೂವರೂ ಅನ್ನದಲ್ಲಿ ವಿಷ ಬೆರೆಸಿ­ಕೊಂಡು ತಿಂದಿದ್ದಾರೆ. ಸ್ವಲ್ಪ ಸಮಯ­ದಲ್ಲೇ ಹೊಟ್ಟೆ ನೋವು ಉಂಟಾಗಿ ಅಸ್ವಸ್ಥಗೊಂಡಿದ್ದಾರೆ.

ಅವರ ನರಳಾಟ ಕೇಳಿದ ನೆರೆಹೊರೆ­ಯವರು ಕೂಡಲೇ  ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿ­ಸಿದ್ದಾರೆ. ಮೂವರೂ ಪ್ರಾಣಾಪಾಯ­ದಿಂದ ಪಾರಾ­ಗಿದ್ದು, ಘಟನೆ ನಡೆದ ಸಮಯದಲ್ಲಿ ರಾಮಣ್ಣ ಅವರ ಪತ್ನಿ ಪುಷ್ಪಾ ಹಾಗೂ ಮತ್ತೊಬ್ಬ ಮಗಳು ಜ್ಯೋತಿ ಕೆಲಸಕ್ಕೆ ಹೋಗಿದ್ದರು ಎಂದು ಪೊಲೀಸರು ಹೇಳಿದ್ದಾರೆ.

 ಜಾತಿನಿಂದನೆ ದೂರು: ‘ಬಿಬಿಎಂಪಿ ಗುಮಾಸ್ತನಾಗಿರುವ ಬೈಲಪ್ಪ ಮತ್ತು ಪತ್ನಿ ಚಂದ್ರಿಕಾ ನಿರಂತರವಾಗಿ ಮಾನಸಿಕ ಕಿರುಕುಳ ನೀಡುತ್ತಿದ್ದರು. ಗುರುವಾರ ಜಗಳ ತೆಗೆದ ದಂಪತಿ, ಬಳಿಕ ಪೀಣ್ಯ ಠಾಣೆಯಲ್ಲಿ ನಮ್ಮ ವಿರುದ್ಧ ಜಾತಿನಿಂದನೆ ದೂರು ನೀಡಿದ್ದರು. ಗುರುವಾರ ಎರಡೂ ಕುಟುಂಬಗಳನ್ನು ಠಾಣೆಗೆ ಕರೆಸಿಕೊಂಡಿದ್ದ ಪೊಲೀಸರು ಸಂಧಾನ ನಡೆಸಿದ್ದರು. ಆ ನಂತರ ದಂಪತಿ ಅವಾಚ್ಯ ಶಬ್ದಗಳಿಂದ ನಿಂದಿಸುವುದು ಹೆಚ್ಚಾಯಿತು’ ಎಂದು ರಾಮಣ್ಣ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ಬೈಲಪ್ಪ ಮತ್ತು ಚಂದ್ರಿಕಾ ದಂಪತಿ ಮದುವೆ ವಯಸ್ಸಿಗೆ ಬಂದಿರುವ ನನ್ನ ಮಕ್ಕಳೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದರು. ಇದರಿಂದ ನೊಂದು ಪತಿ ಹಾಗೂ ಮಕ್ಕಳು ಆತ್ಮಹತ್ಯೆಗೆ ಯತ್ನಿಸಿದ್ದಾರೆ’ ಎಂದು ರಾಮಣ್ಣ ಅವರ ಪತ್ನಿ ಪಷ್ಪಾ ಹೇಳಿದ್ದಾರೆ. ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ಬೈಲಪ್ಪ ಮತ್ತು ಚಂದ್ರಿಕಾ ಅವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಪೀಣ್ಯ ಪೊಲೀಸರು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.