ADVERTISEMENT

ತತ್ಸಮಾನ ಕೋರ್ಸ್‌ಗಳ ಬಗ್ಗೆ ಸರ್ಕಾರದ ಸುತ್ತೋಲೆ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2018, 20:10 IST
Last Updated 28 ಫೆಬ್ರುವರಿ 2018, 20:10 IST

ಬೆಂಗಳೂರು: ಎಸ್‌ಎಸ್‌ಎಲ್‌ಸಿ, ದ್ವಿತೀಯ ಪಿಯು ಮತ್ತು ಪದವಿ ವಿದ್ಯಾರ್ಹತೆಗಳಿಗೆ ತತ್ಸಮಾನ ವಿದ್ಯಾರ್ಹತೆ ಅಥವಾ ಕೋರ್ಸ್‌ಗಳು ಯಾವವು ಎಂಬುದರ ಕುರಿತು ಸರ್ಕಾರ ಸುತ್ತೋಲೆ ಹೊರಡಿಸಿದೆ.

ಕೆಲ ಹುದ್ದೆಗಳ ನೇಮಕಾತಿಗೆ ಎಸ್‌ಎಸ್‌ಎಲ್‌ಸಿ/ ದ್ವಿತೀಯ ಪಿಯು/ ಪದವಿ ಕೋರ್ಸ್‌ಗಳಿಗೆ ತತ್ಸಮಾನ ವಿದ್ಯಾರ್ಹತೆ ಹೊಂದಿರುವವರಿಗೂ ಅವಕಾಶ ನೀಡಲಾಗಿದೆ. ಆದರೆ ತತ್ಸಮಾನ ವಿದ್ಯಾರ್ಹತೆಗಳು ಯಾವವು ಎಂಬುದರ ಬಗ್ಗೆ ಅಭ್ಯರ್ಥಿಗಳಲ್ಲಿ ಗೊಂದಲಗಳಿದ್ದವು. ಈ ಸಂಬಂಧ ಇದ್ದ 2015ರ ಸುತ್ತೋಲೆಯಲ್ಲೂ ಕೆಲ ಗೊಂದಲಗಳಿದ್ದವು. ಇವುಗಳನ್ನು ಬಗೆಹರಿಸುವ ಉದ್ದೇಶದಿಂದ ಸರ್ಕಾರ (ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ) ಸ್ಪಷ್ಟೀಕರಣದಿಂದ ಕೂಡಿದ ಸುತ್ತೋಲೆ ಹೊರಡಿಸಿದೆ.

ಪದವಿಗೆ ತತ್ಸಮಾನ ವಿದ್ಯಾರ್ಹತೆ:

ADVERTISEMENT

* ವಿಶ್ವವಿದ್ಯಾಲಯ ಧನಸಹಾಯ ಆಯೋಗದಿಂದ (ಯುಜಿಸಿ) ಮಾನ್ಯತೆ ಹೊಂದಿರುವ ವಿಶ್ವವಿದ್ಯಾಲಯಗಳು, ಖಾಸಗಿ /ಡೀಮ್ಡ್‌ ಹಾಗೂ ಹೊರ ರಾಜ್ಯದ ವಿಶ್ವವಿದ್ಯಾಲಯಗಳಿಂದ ಪಡೆದ ಪದವಿಗಳು. ಆದರೆ, ವಿಶ್ವವಿದ್ಯಾಲಗಳ ಪದವಿಯ ತತ್ಸಮಾನದ ಬಗ್ಗೆ ಆಯಾ ವಿಶ್ವವಿದ್ಯಾಲಯ ಮತ್ತು ಉದ್ಯೋಗಕ್ಕೆ ಸಂಬಂಧಿಸಿದಂತೆ ಉದ್ಯೋಗ ನೀಡುವ ಪ್ರಾಧಿಕಾರ ತೀರ್ಮಾನ ತೆಗೆದುಕೊಳ್ಳಬೇಕಾಗುತ್ತದೆ.

* ಅಂಚೆ ಮತ್ತು ದೂರ ಶಿಕ್ಷಣದ ಮೂಲಕ ಪಡೆದಿರುವ ಪದವಿಗಳು. ಆದರೆ ನಿಯಮ ಬಾಹಿರವಾಗಿ ಕೆಲ ವಿಶ್ವವಿದ್ಯಾಲಯಗಳು ಯುಜಿಸಿ ಅನುಮೋದನೆ ಇಲ್ಲದೆ ನಡೆಸುತ್ತಿರುವ ಅಂಚೆ ಮತ್ತು ದೂರ ಶಿಕ್ಷಣದ ಕೋರ್ಸ್‌ಗಳನ್ನು ಪರಿಗಣಿಸುವಂತಿಲ್ಲ. ಅದೇ ರೀತಿ ಅಂಚೆ ಮತ್ತು ದೂರ ಶಿಕ್ಷಣ ಮೂಲಕ ಪಡೆದ ತಾಂತ್ರಿಕ ಪದವಿಗಳನ್ನೂ ನೇಮಕಾತಿಗೆ ಪರಿಗಣಿಸುವಂತಿಲ್ಲ.

ಎಸ್‌ಎಸ್‌ಎಲ್‌ಸಿ ತತ್ಸಮಾನ ವಿದ್ಯಾರ್ಹತೆಗಳು:

* ಸಿಬಿಎಸ್‌ಇ ಮತ್ತು ಐಸಿಎಸ್‌ಇ ಮಂಡಳಿಗಳು ನಡೆಸುವ 10ನೇ ತರಗತಿ ಪರೀಕ್ಷೆ.

* ಇತರೆ ರಾಜ್ಯ ಸರ್ಕಾರದ ಪರೀಕ್ಷಾ ಮಂಡಳಿಗಳು ನಡೆಸುವ 10ನೇ ತರಗತಿ ಪರೀಕ್ಷೆ.

* ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಓಪನ್‌ ಸ್ಕೂಲಿಂಗ್‌ (ಎನ್‌ಐಒಎಸ್‌) ನಡೆಸುವ ಪ್ರೌಢ ಶಿಕ್ಷಣ ಮಟ್ಟದ ಕೋರ್ಸ್‌.

* ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸುವ ಪ್ರೌಢ ಶಿಕ್ಷಣ ಮಟ್ಟದ ಕೋರ್ಸ್‌ (ಕೆಒಎಸ್‌).

ದ್ವಿತೀಯ ಪಿಯು ತತ್ಸಮಾನ ವಿದ್ಯಾರ್ಹತೆ:

* ಸಿಬಿಎಸ್‌ಇ ಮತ್ತು ಐಎಸ್‌ಸಿ ಮಂಡಳಿ ನಡೆಸುವ 12ನೇ ತರಗತಿ ಪರೀಕ್ಷೆ.

* ಇತರೆ ರಾಜ್ಯ ಸರ್ಕಾರದ ಪರೀಕ್ಷಾ ಮಂಡಳಿಗಳು ನಡೆಸುವ 12ನೇ ತರಗತಿ ಪರೀಕ್ಷೆ.

* ಎನ್‌ಐಓಎಸ್‌ ನಡೆಸುವ ಉನ್ನತ ಪ್ರೌಢ ಶಿಕ್ಷಣ ಕೋರ್ಸ್‌/ಎಚ್‌ಎಸ್‌ಸಿ.

* ಮೂರು ವರ್ಷಗಳ ಡಿಪ್ಲೊಮಾ ಅಥವಾ ಎರಡು ವರ್ಷಗಳ ಐಟಿಐ ಕೋರ್ಸ್‌ ಅಥವಾ ಎರಡು ವರ್ಷಗಳ ವೃತ್ತಿ ಶಿಕ್ಷಣ ಡಪ್ಲೊಮಾ (ಜೆಓಸಿ/ಜೆಒಡಿಸಿ/ಜೆಲ್‌ಡಿಸಿ) ವ್ಯಾಸಂಗ ಮಾಡಿರುವ ಅಭ್ಯರ್ಥಿಗಳು ಎನ್‌ಐಒಎಸ್‌ ಅಥವಾ ಪದವಿ ಪೂರ್ವ ಶಿಕ್ಷಣ ಮಂಡಳಿ ನಡೆಸುವ ಒಂದು ಭಾಷಾ ಕೋರ್ಸ್‌ ಮತ್ತು ಒಂದು ಶೈಕ್ಷಣಿಕ ವಿಷಯದಲ್ಲಿ ಉತ್ತೀರ್ಣರಾದಲ್ಲಿ ಮಾತ್ರ ದ್ವಿತೀಯ ಪಿಯುಗೆ ತತ್ಸಮಾನ ಎಂದು ಪರಿಗಣಿಸಲಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.