ADVERTISEMENT

ತಪ್ಪು ಮಾಹಿತಿ: ಅರ್ಜಿದಾರರಿಗೆ ದಂಡ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2013, 19:50 IST
Last Updated 20 ಏಪ್ರಿಲ್ 2013, 19:50 IST

ಬೆಂಗಳೂರು: ಸರ್ಕಾರಿ ಖರಾಬು ಜಮೀನನ್ನು ಗೋಮಾಳ ಜಮೀನು ಎಂದು ಬಿಂಬಿಸಲು ಪ್ರಯತ್ನಿಸಿದ ವ್ಯಕ್ತಿಯೊಬ್ಬರಿಗೆ ಹೈಕೋರ್ಟ್ 10 ಸಾವಿರ ರೂಪಾಯಿ ದಂಡ ವಿಧಿಸಿದೆ. ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಜಾಗೊಳಿಸಿದೆ.

ನಗರ ಕೆಂಗೇರಿ ಹೋಬಳಿಯ ಕಣ್ಮಿಣಿಕೆ ಹಳ್ಳಿಯಲ್ಲಿ ಸರ್ಕಾರವು ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಫ್ಲ್ಯಾಟ್‌ಗಳನ್ನು ನಿರ್ಮಿಸುತ್ತಿದೆ. ಈ ಫ್ಲ್ಯಾಟ್ ನಿರ್ಮಾಣ ಆಗುತ್ತಿರುವುದು ಗೋಮಾಳ ಜಮೀನಿನಲ್ಲಿ. ಇದನ್ನು ಉಳಿಸಬೇಕು, ಫ್ಲ್ಯಾಟ್ ನಿರ್ಮಾಣಕ್ಕೆ ತಡೆ ನೀಡಬೇಕು ಎಂದು ಕೋರಿ ಬೆಂಗಳೂರಿನ ಕೆ.ಜಿ. ಗೋವಿಂದರಾಜು ಎಂಬುವರು ಅರ್ಜಿ ಸಲ್ಲಿಸಿದ್ದರು.

ಇದರ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಡಿ.ಎಚ್. ವಘೇಲಾ ಮತ್ತು ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅವರನ್ನು ಒಳಗೊಂಡ ವಿಭಾಗೀಯ ಪೀಠ ನಡೆಸಿತು. ಸರ್ಕಾರದ ಪರ ವಾದ ಮಂಡಿಸಿದ ವಕೀಲ ಆರ್. ದೇವದಾಸ್, `ಅದು ಗೋಮಾಳ ಜಮೀನಲ್ಲ. ಅದು ಸರ್ಕಾರಿ ಖರಾಬು ಜಮೀನು. ಈ ಮಾಹಿತಿ ಅರ್ಜಿದಾರರಿಗೂ ತಿಳಿದಿದೆ. ಆದರೂ ಅವರು ಇಂಥ ಅರ್ಜಿ ಸಲ್ಲಿಸಿದ್ದಾರೆ' ಎಂದರು. ಇದಕ್ಕೆ ಸಂಬಂಧಿಸಿದ ದಾಖಲೆ ಸಲ್ಲಿಸಿದರು.

ಅವರ ಹೇಳಿಕೆ ದಾಖಲು ಮಾಡಿಕೊಂಡ ನ್ಯಾಯಪೀಠ, ಅರ್ಜಿಯನ್ನು ವಜಾ ಮಾಡಿತು. ತಪ್ಪು ಮಾಹಿತಿ ನೀಡಿದ ಕಾರಣಕ್ಕೆ, ಅರ್ಜಿದಾರರಿಗೆ ದಂಡ ವಿಧಿಸಿತು. ಈ ಹಿಂದೆ ಅರ್ಜಿಯ ವಿಚಾರಣೆ ವೇಳೆ, ಫ್ಲ್ಯಾಟ್‌ಗಳ ನಿರ್ಮಾಣ ಕಾರ್ಯದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ವಿಭಾಗೀಯ ಪೀಠ 2012ರ ಜುಲೈನಲ್ಲಿ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು. ಈಗ ಆ ನಿರ್ದೇಶನ ತೆರವಾದಂತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.