ADVERTISEMENT

ತರಗತಿಗಳು ದನದ ಕೊಟ್ಟಿಗೆಗಿಂತಲೂ ಕಡೆ!

​ಪ್ರಜಾವಾಣಿ ವಾರ್ತೆ
Published 3 ಮೇ 2012, 19:30 IST
Last Updated 3 ಮೇ 2012, 19:30 IST
ತರಗತಿಗಳು ದನದ ಕೊಟ್ಟಿಗೆಗಿಂತಲೂ ಕಡೆ!
ತರಗತಿಗಳು ದನದ ಕೊಟ್ಟಿಗೆಗಿಂತಲೂ ಕಡೆ!   

ಬೆಂಗಳೂರು: ಶಾಲೆಯ ಮೈದಾನದಲ್ಲಿ ಸುರಿಯಲ್ಪಟ್ಟ ತ್ಯಾಜ್ಯ, ಶಿಥಿಲಾವಸ್ಥೆಯಲ್ಲಿರುವ ಗೋಡೆಗಳು, ಕೆಟ್ಟ ವಾಸನೆಯ ಶೌಚಾಲಯಗಳು, ಇವುಗಳ ನಡುವೆ ದನದ ಕೊಟ್ಟಿಗೆಗಿಂತಲೂ ಕಡೆಯಾಗಿರುವ ತರಗತಿಗಳಲ್ಲಿ ಕುಳಿತು ಪಾಠ ಕೇಳುವ ಪರಿಸ್ಥಿತಿ...

ಇದು ದೇವರಜೀವನಹಳ್ಳಿಯ ಸರ್ಕಾರಿ ಉರ್ದುಶಾಲೆಯ ಸ್ಥಿತಿ. ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಅನ್ವರ್ ಮಾಣಿಪ್ಪಾಡಿ ಅವರು ಶಾಲೆಗೆ ಗುರುವಾರ ಭೇಟಿ ನೀಡಿ ತಪಾಸಣೆ ನಡೆಸಿದಾಗ ಕಂಡುಬಂದ ದೃಶ್ಯ.

`ಶಾಲೆಯ ಪ್ರಾಥಮಿಕ ಮತ್ತು ಪ್ರೌಢ ತರಗತಿಗಳಲ್ಲಿ ಎರಡು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಅಸಹ್ಯವನ್ನು ಲೆಕ್ಕಿಸದೇ ಅಕ್ಷರ ಪ್ರೀತಿಗೆ ಶರಣಾಗಿರುವ ಈ ವಿದ್ಯಾರ್ಥಿಗಳ ಮುಗ್ಧ ಕಣ್ಣುಗಳಲ್ಲಿ ಕಲಿಕೆಯೆಡೆಗೆ ಅತೀವ ಆಸಕ್ತಿಯಿದೆ. ಆದರೆ ಮೂಲ ಸೌಕರ್ಯದ ಕೊರತೆ, ಸ್ವಚ್ಛತೆ ಕೊರತೆ ಮತ್ತು ಅವ್ಯವಸ್ಥೆಯಿಂದ ಹದಗೆಟ್ಟಿರುವ ಶಾಲಾ ಪರಿಸರವು ಮಕ್ಕಳು ಮತ್ತು ಶಿಕ್ಷಕರನ್ನು ಚಿಂತೆಗೀಡು ಮಾಡಿದೆ.

ಮಾಣಿಪ್ಪಾಡಿ ನೇತೃತ್ವದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಅಶ್ವತ್ಥನಾರಾಯಣ ಗೌಡ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನಗರ ಜಿಲ್ಲೆಯ ಉಪನಿರ್ದೇಶಕ ರಮೇಶ್ ಸೇರಿದಂತೆ ವಿವಿಧ ಅಧಿಕಾರಿಗಳೊಂದಿಗೆ ಶಾಲೆಯ ಮೈದಾನ, ಕೊಠಡಿಗಳನ್ನು ತಪಾಸಣೆ ನಡೆಸಿ, ಕೂಡಲೇ ಕ್ರಮ ತೆಗೆದುಕೊಳ್ಳುವಂತೆ ಸೂಚಿಸಿದರು.

 ತಪಾಸಣೆ ವೇಳೆಯಲ್ಲಿ ಶೌಚಾಲಯದ ಕೊಠಡಿಯನ್ನು ಇಬ್ಭಾಗ ಮಾಡಿ ಅದರ ಒಂದು ಭಾಗದಲ್ಲಿ ಅಂಗನವಾಡಿ ಶಾಲೆ ನಡೆಸುತ್ತಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಮಾಣಿಪ್ಪಾಡಿ ಇದನ್ನು ಶಾಲೆಯ ಕೊಠಡಿಗೆ ವರ್ಗಾಯಿಸುವಂತೆ ಆದೇಶ ನೀಡಿದರು.

ಈ ಬಗ್ಗೆ `ಪ್ರಜಾವಾಣಿ~ಯೊಂದಿಗೆ ಮಾತನಾಡಿದ ಮಾಣಿಪ್ಪಾಡಿ, `ಬೇಸಿಗೆ ಶಿಬಿರವನ್ನು ಆಯೋಜಿಸುವ ಸಲುವಾಗಿಯೇ `ಸಂರಕ್ಷಣಾ~ ಸರ್ಕಾರೇತರ ಸಂಸ್ಥೆ ಜೊತೆ ಈ ಶಾಲೆಗೆ ಭೇಟಿ ನೀಡಿದ್ದೆವು. ಆಗ ಇಲ್ಲಿನ ಅವ್ಯವಸ್ಥೆ ಗಮನಕ್ಕೆ ಬಂದಿದ್ದು, ಈ ಹಿನ್ನೆಲೆಯಲ್ಲಿ ಮತ್ತೆ ತಪಾಸಣೆ ಕೈಗೊಂಡಿದ್ದೇನೆ. ಇಲ್ಲಿನ ಅವ್ಯವಸ್ಥೆಯನ್ನು ಕಂಡು ನಿಜಕ್ಕೂ ಆಶ್ಚರ್ಯಗೊಂಡೆ. ಕನಿಷ್ಠ ಸೌಲಭ್ಯಗಳು ಇಲ್ಲದೇ ಮಕ್ಕಳು ಶಾಲೆಯಲ್ಲಿ ಕಲಿಯುತ್ತಿರುವುದು ವ್ಯವಸ್ಥೆಗೆ ಹಿಡಿದ ಕನ್ನಡಿ~ ಎಂದು ಆಕ್ರೋಶ ವ್ಯಕ್ತಪಡಿಸಿದರು.

`ಅವ್ಯವಸ್ಥೆಯನ್ನು ಸರಿಪಡಿಸುವಂತೆ ಆಯಾ ಅಧಿಕಾರಿಗಳಿಗೆ ಹದಿನೈದು ದಿನಗಳ ಕಾಲಾವಕಾಶ ನೀಡಲಾಗಿದೆ. ಬಿಬಿಎಂಪಿ ಸದಸ್ಯರು ಮತ್ತು ಶಾಸಕರು ಸಹ ಶಾಲೆಯ ಸ್ಥಿತಿಯನ್ನು ನಿರ್ಲಕ್ಷ್ಯಿಸಿದ್ದಾರೆ. ಕೂಡಲೇ ಅವರನ್ನು ಸಂಪರ್ಕಿಸಿ, ಮಾಹಿತಿ ಪಡೆಯುವೆ~ ಎಂದರು.

ಶಾಲೆಯ ಮುಖ್ಯ ಶಿಕ್ಷಕಿ ಸಾಯಿರಾಬಾನು, `ಸರ್ಕಾರವು ಶಾಲೆಗೆ ಉತ್ತಮ ರೀತಿಯ ಸೌಲಭ್ಯ ನೀಡಿದೆ. ಆದರೆ ಈ ಸೌಲಭ್ಯಗಳನ್ನು ಪದೇ ಪದೇ ಸ್ಥಳೀಯರು ಹಾಳು ಮಾಡುತ್ತಿದ್ದಾರೆ. ಮನೆ ನಿರ್ಮಾಣದ ತ್ಯಾಜ್ಯ ಮತ್ತು ಇತರೆ ತ್ಯಾಜ್ಯಗಳನ್ನು ಬೇರೆಡೆ ಸುರಿಯಲು ಸ್ಥಳಾವಕಾಶವಿಲ್ಲವೆಂದು  ಶಾಲೆಯ ಮೈದಾನದಲ್ಲಿ ಸುರಿಯುತ್ತಿದ್ದಾರೆ~ ಎಂದು ಅಳಲು ತೋಡಿಕೊಂಡರು. 

`ಸಂಜೆ 4 ಗಂಟೆಯ ನಂತರ ತರಗತಿಗಳನ್ನು ನಡೆಸಲು ಸಾಧ್ಯವಿಲ್ಲ. ಸ್ಥಳೀಯರು ಶಾಲೆಯ ಜಗಲಿಯಲ್ಲಿ ಬಂದು ಕೂರುತ್ತಾರೆ. ಕೆಲವು ಪುಂಡರು ಮೊಬೈಲ್‌ನಲ್ಲಿ ವಿದ್ಯಾರ್ಥಿನಿಯರ ಭಾವಚಿತ್ರ ತೆಗೆಯುತ್ತಾರೆ. ಇದರಿಂದ ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸಲು ಹೆದರುತ್ತಾರೆ. ಇಂತಹ ಸ್ಥಿತಿಯಲ್ಲೂ ಪಾಠ ಮಾಡಬೇಕಿರುವ ಅನಿವಾರ್ಯತೆ ಎದುರಾಗಿದೆ~ ಎಂದು ದೂರಿದರು.

ಸ್ಥಳೀಯ ನಿವಾಸಿ ನೂಮನ್, `ಕಳೆದ ಹತ್ತು ವರ್ಷಗಳಿಂದ ಈ ಶಾಲೆ ಇದೇ ಪರಿಸ್ಥಿತಿಯಲ್ಲಿದೆ. ಸರ್ಕಾರಿ ಅಧಿಕಾರಿಗಳು ಬರುತ್ತಾರೆ, ತಪಾಸಣೆ ಮಾಡುತ್ತಾರೆ. ಮತ್ತೇ ತೆರಳುತ್ತಾರೆ. ಅಲ್ಲಿಗೆ ಅದರ ಕತೆ ಮುಗಿಯುತ್ತದೆ. ಕಡು ಬಡವರ ಮಕ್ಕಳು ಈ ಶಾಲೆಯಲ್ಲಿ ಓದುತ್ತಿದ್ದಾರೆ. ಶೌಚಾಲಯ ದುರಸ್ತಿ ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಬಿಡುಗಡೆಯಾಗುವ ಹಣವು ಮುಖ್ಯ ಶಿಕ್ಷಕಿಯ ಖಜಾನೆ ಸೇರುತ್ತಿದೆ~ ಎಂದು ಆರೋಪಿಸಿದರು.

ಅನೈತಿಕ ಚಟುವಟಿಕೆಗಳ ತಾಣ ಈ ಶಾಲೆಯ ಆವರಣ!
ತಪಾಸಣೆ ಮುಗಿದ ಬಳಿಕ ಅವ್ಯವಸ್ಥೆಯನ್ನು ಸಾಕ್ಷೀಕರಿಸುವಂತೆ ಹಲವು ಚಿತ್ರಣ ಕಂಡುಬಂತು. ಈ ಬಡಾವಣೆಯಲ್ಲಿ ವಾಸಿಸುವ ಯುವಕರು ಶಾಲಾ ಕಂಪೌಂಡ್ ಏರಿ ಅಲ್ಲಲ್ಲಿ ಮೂತ್ರ ವಿಸರ್ಜನೆ ಮಾಡುವ ದೃಶ್ಯ ಸಾಮಾನ್ಯವಾಗಿತ್ತು.
 
ಶೌಚಾಲಯಗಳಲ್ಲಿ ಮದ್ಯದ ಬಾಟಲಿಗಳು ಚೆಲ್ಲಾಪಿಲ್ಲಿಯಾಗಿ ಬಿದ್ದುಕೊಂಡಿದ್ದವು. ಇನ್ನು ಕೆಲವರು ಈ ಭಾಗದಲ್ಲಿ ವಿಶ್ರಾಂತಿ ತೆಗೆದುಕೊಳ್ಳಲು ಸೂಕ್ತ ಉದ್ಯಾನವಿಲ್ಲ ಹಾಗಾಗಿ ಈ ಶಾಲೆಗೆ ಆಗಮಿಸುತ್ತಿದ್ದೇನೆ ಎಂದು ಉಡಾಫೆಯ ಉತ್ತರ ನೀಡಿದರು.

`ಅಂಗನವಾಡಿ ಶಾಲೆಯಲ್ಲಿ ಕಲಿಯುತ್ತಿರುವ ಪುಟ್ಟ ಮಕ್ಕಳು ಶೌಚಾಲಯದ ವಾಸನೆ ಕುಡಿದು ಕೆಲವೊಮ್ಮೆ ವಾಂತಿ ಮಾಡಿಕೊಳ್ಳುತ್ತಾರೆ. ಮೊದಲೆಲ್ಲಾ 60 ಮಂದಿ ಮಕ್ಕಳು ಬರುತ್ತಿದ್ದ ಈ ಅಂಗನವಾಡಿಯಲ್ಲಿ ಈಗ ಕೇವಲ ಮೂವತ್ತು ಮಂದಿಯಿದ್ದಾರೆ. ನೈರ್ಮಲ್ಯ ಕೊರತೆ ಕಾರಣದಿಂದ ಆಗಾಗ ಮಕ್ಕಳು ಅನಾರೋಗ್ಯಕ್ಕೀಡಾಗುತ್ತಿದ್ದಾರೆ~ ಎಂದು ಅಂಗನವಾಡಿಯ ಶಿಕ್ಷಕಿಯೊಬ್ಬರು ಹೇಳಿದರು.

`ಮಧ್ಯರಾತ್ರಿ 10 ಗಂಟೆಯ ನಂತರ ಸ್ಥಳೀಯರಿಂದ ಅನೈತಿಕ ಚಟುವಟಿಕೆಗಳು ನಡೆಯುತ್ತಿವೆ. ಇದನ್ನು ಪುಷ್ಠೀಕರಿಸಲು ಶಾಲೆಯ ಶೌಚಾಲಯ ಮತ್ತು ಮೈದಾನಗಳಲ್ಲಿ ಉಪಯೋಗಿಸಿ ಬಿಸಾಡಿದ ಕಾಂಡೋಮ್‌ಗಳು ದೊರೆಯುತ್ತಿವೆ.

ಮಾದಕ ವ್ಯಸನಿಗಳಿಗೂ ಇದು ಪ್ರಿಯವಾದ ತಾಣವಾಗಿದೆ. ಶಿಕ್ಷಣ ಮತ್ತು ನೈತಿಕತೆ ಬೋಧಿಸಬೇಕಾದ ಶಾಲೆಗೆ ಯಾವ ಭದ್ರತೆಯಿಲ್ಲವೇ?~ ಎಂದು ಸ್ಥಳೀಯ ನಿವಾಸಿ ಅಂಜುಮನ್ ಪ್ರಶ್ನಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.