ADVERTISEMENT

ತರಬೇತಿಗೆ ನಕಾರ: ಪೊಲೀಸ್ ಇಲಾಖೆಗೆ ತಲೆನೋವು

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2013, 19:59 IST
Last Updated 2 ಏಪ್ರಿಲ್ 2013, 19:59 IST

ಬೆಂಗಳೂರು: `ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆ'ಗೆ (ಕೆಎಸ್‌ಐಎಸ್‌ಎಫ್) ನೇಮಕವಾಗಿರುವ 1,731 ಕಾನ್‌ಸ್ಟೆಬಲ್‌ಗಳಿಗೆ ತರಬೇತಿ ನೀಡಲು ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್) ನಿರಾಕರಿಸಿರುವುದು ಪೊಲೀಸ್ ಇಲಾಖೆಗೆ ತಲೆನೋವಾಗಿ ಪರಿಣಮಿಸಿದೆ.

ಎಸ್‌ಐ ದರ್ಜೆಯ 139 ಮಂದಿ ಸಿಬ್ಬಂದಿ ಈಗಾಗಲೇ ಸಿಕಂದರಾಬಾದ್‌ನಲ್ಲಿರುವ ಸಿಐಎಸ್‌ಎಫ್‌ನ `ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಸೆಕ್ಯುರಿಟಿ ಅಕಾಡೆಮಿ'ಯಲ್ಲಿ (ನೀಸಾ) ತರಬೇತಿ ಪಡೆಯುತ್ತಿದ್ದಾರೆ. ಒಂಬತ್ತು ತಿಂಗಳ ಈ ತರಬೇತಿ ಶಿಬಿರ ಕಳೆದ ವಾರದಿಂದ ಆರಂಭವಾಗಿದೆ. ಆದರೆ, `1,731 ಕಾನ್‌ಸ್ಟೆಬಲ್‌ಗಳಿಗೆ ತರಬೇತಿ ನೀಡುವಷ್ಟು ಜಾಗ ನಮ್ಮಲ್ಲಿ ಇಲ್ಲ. ಹೀಗಾಗಿ ಅಷ್ಟೊಂದು ಸಿಬ್ಬಂದಿಗೆ ತರಬೇತಿ ನೀಡಲು ಸಾಧ್ಯವಿಲ್ಲ' ಎಂದು ನೀಸಾ ಅಧಿಕಾರಿಗಳು ಹೇಳಿರುವುದರಿಂದ ಇಲಾಖೆ ಪರ್ಯಾಯ ಮಾರ್ಗಕ್ಕೆ ಮುಂದಾಗಿದೆ.

`ಆಂತರಿಕ ಭದ್ರತಾ ವಿಭಾಗದ ಎಡಿಜಿಪಿ ಅಲೋಕ್ ಮೋಹನ್ ಅವರು ಕಾನ್‌ಸ್ಟೆಬಲ್‌ಗಳ ತರಬೇತಿಗೆ ಅಗತ್ಯವಾದ ಪಠ್ಯಕ್ರಮ ಸಿದ್ಧಪಡಿಸಲು ಸಮಿತಿಯೊಂದನ್ನು ರಚಿಸಿದ್ದಾರೆ. ಒಬ್ಬ ಐಜಿಪಿ ದರ್ಜೆಯ ಅಧಿಕಾರಿ ಹಾಗೂ ಇಬ್ಬರು ಎಸ್ಪಿಗಳು ಈ ಸಮಿತಿಯಲ್ಲಿದ್ದಾರೆ. ಅಧಿಕಾರಿಗಳು ಈಗಾಗಲೇ ಪಠ್ಯಕ್ರಮದ ಸಿದ್ಧತೆಯಲ್ಲಿ ತೊಡಗಿದ್ದಾರೆ' ಎಂದು ಇಲಾಖೆಯ ಮೂಲಗಳು ತಿಳಿಸಿವೆ.

ಈ ಸಂಬಂಧ `ಪ್ರಜಾವಾಣಿ'ಯೊಂದಿಗೆ ಮಾತನಾಡಿದ ರಾಜ್ಯ ಪೊಲೀಸ್ ಮಹಾನಿರ್ದೇಶಕ ಲಾಲ್ ರೋಕುಮ ಪಚಾವ್, `ಕೆಎಸ್‌ಐಎಸ್‌ಎಫ್ ಸಿಬ್ಬಂದಿಗೆ ಬಹುತೇಕ ಪೊಲೀಸ್ ಮಾದರಿಯಲ್ಲೇ ತರಬೇತಿ ನೀಡಬೇಕಾಗುತ್ತದೆ. ಈ ನಿಟ್ಟಿನಲ್ಲಿ ಆಂತರಿಕ ಭದ್ರತಾ ವಿಭಾಗ ಸಿದ್ಧಪಡಿಸುತ್ತಿರುವ ಪಠ್ಯಕ್ರಮವನ್ನು ಪರಿಶೀಸಲಾಗುವುದು' ಎಂದರು.

`ಕೆಎಸ್‌ಐಎಸ್‌ಎಫ್ ಸಿಬ್ಬಂದಿ ಭದ್ರತೆಗೆ ನಿಯೋಜನೆಗೊಂಡರೆ ಸ್ಥಳೀಯ ಪೊಲೀಸರ ಕಾರ್ಯ ಒತ್ತಡ ಕಡಿಮೆಯಾಗಲಿದೆ. ಭಾರತೀಯ ರಿಸರ್ವ್ ಬ್ಯಾಂಕ್, ಕರ್ನಾಟಕ ವಿದ್ಯುತ್ ನಿಗಮ, ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಸೇರಿದಂತೆ ವಿವಿಧ ಸಂಸ್ಥೆಗಳು ಕೆಎಸ್‌ಐಎಸ್‌ಎಫ್ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಿಕೊಳ್ಳಲು ಆಸಕ್ತಿ ತೋರಿವೆ' ಎಂದು ಹಿರಿಯ ಅಧಿಕಾರಿಗಳು ಹೇಳಿದರು.

ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಮಂಗಳೂರು ವಿಮಾನ ನಿಲ್ದಾಣ ಹೊರತುಪಡಿಸಿ ರಾಜ್ಯದ ಯಾವುದೇ ವಿಮಾನ ನಿಲ್ದಾಣದಲ್ಲಿ ಸಿಐಎಸ್‌ಎಫ್ ಸಿಬ್ಬಂದಿ ಭದ್ರತೆಗೆ ಇರುವುದಿಲ್ಲ. ಆದರೆ, ಕೆಎಸ್‌ಐಎಸ್‌ಎಫ್ ಸಿಬ್ಬಂದಿ ಬೆಳಗಾವಿ, ಮೈಸೂರು ಮತ್ತು ಹುಬ್ಬಳ್ಳಿ ವಿಮಾನ ನಿಲ್ದಾಣಗಳಿಗೂ ಭದ್ರತೆ ಒದಗಿಸಲಿದ್ದಾರೆ. ಜತೆಗೆ ರಾಜ್ಯದಲ್ಲಿರುವ ಹತ್ತು ಬಂದರು ಪ್ರದೇಶಗಳಲ್ಲೂ ಕರ್ತವ್ಯ ನಿರ್ವಹಿಸಲಿದ್ದಾರೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.