ADVERTISEMENT

ತಾಜ್ಯ ನೀರು ಸಂಸ್ಕರಣೆಗೆ ನೂತನ ಯೋಜನೆ :ಸಿಂಗಪುರ ಸಂಸ್ಥೆ ಜತೆ ಒಪ್ಪಂದ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2012, 19:30 IST
Last Updated 9 ಅಕ್ಟೋಬರ್ 2012, 19:30 IST

ಬೆಂಗಳೂರು: ನೀರಿನ ಕೊರತೆ ನಿವಾರಿಸುವ ನಿಟ್ಟಿನಲ್ಲಿ ಜಲಮಂಡಳಿಯು ತ್ಯಾಜ್ಯ ನೀರನ್ನು ಸಂಸ್ಕರಿಸಿ ಕುಡಿಯುವ ನೀರಾಗಿ ಬಳಸುವ ನೂತನ ಯೋಜನೆಯನ್ನು ಸಿದ್ದಪಡಿಸಿದೆ. ಈ ನಿಟ್ಟಿನಲ್ಲಿ ಜಲಮಂಡಳಿಯು ಸಿಂಗಪುರ ಮೂಲದ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಂಡಿದೆ.

 ಜಲಮಂಡಳಿ ಅಧ್ಯಕ್ಷ ಗೌರವ್ ಗುಪ್ತ ಹಾಗೂ ಸಿಂಗಪುರ ಕೋ ಆಪರೇಷನ್ ಎಂಟರ್‌ಪ್ರೈಸಸ್‌ನ ಮುಖ್ಯ ಕಾರ್ಯ ನಿರ್ವಾಹಕ ಕಾಂಗ್ ವೈ ಮೂನ್ ಅವರು ಒಂದು ವರ್ಷದ ಅವಧಿಯ ಒಡಂಬಡಿಕೆಗೆ ಮಂಗಳವಾರ ಸಹಿ ಹಾಕಿದರು.

ನಂತರ ಮಾತನಾಡಿದ ಗೌರವ್‌ಗುಪ್ತ `ಕಾವೇರಿ ನದಿಯಿಂದ ನಗರಕ್ಕೆ ಪೂರೈಕೆಯಾಗುವ ನೀರನ್ನು 13 ಟಿಎಂಸಿಗೆ ನಿಗದಿಪಡಿಸಲಾಗಿದೆ. ಕಾವೇರಿ 4ನೇ ಹಂತದ ಎರಡನೇ ಘಟ್ಟದ ಯೋಜನೆ ಅನುಷ್ಠಾನಗೊಂಡರೆ ನಮ್ಮ ನೀರಿನ ಪಾಲು ಮುಗಿಯುತ್ತದೆ. ಹೀಗಾಗಿ ನೀರಿಗಾಗಿ ಪರ್ಯಾಯ ಮೂಲಗಳನ್ನು ಕಂಡುಕೊಳ್ಳುವುದು ಅಗತ್ಯ. ಸಿಂಗಪುರ ರಾಷ್ಟ್ರವು ತ್ಯಾಜ್ಯ ನೀರಿನ ಸಂಸ್ಕರಣೆ ಮತ್ತು ಪುನರ್ಬಳಕೆ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದೆ. ಈ ದೃಷ್ಟಿಯಿಂದ ಸಿಂಗಪುರದ ಸಹಕಾರ ಪಡೆಯಲಾಗಿದೆ~ ಎಂದರು.

ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕೌಶಿಕ್ ಮುಖರ್ಜಿ ಮಾತನಾಡಿ, `ಕಳೆದ ಮೂರು ದಶಕಗಳ ಹಿಂದೆ ಹಾಲಿನ ಬೆಲೆ ನೀರಿಗಿಂತ ದುಬಾರಿ ಇತ್ತು. ಆದರೆ ಈಗ ಪರಿಸ್ಥಿತಿ ಸಂಪೂರ್ಣ ಬದಲಾಗಿದೆ. ನೀರಿನ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.

ಗಲ್ಫ್ ರಾಷ್ಟ್ರಗಳಲ್ಲಿ ಉಪ್ಪು ನೀರನ್ನು ಕುಡಿಯುವ ನೀರಾಗಿ ಪರಿವರ್ತಿಸಲಾಗುತ್ತಿದೆ. ಅದೇ ಮಾದರಿಯಲ್ಲಿ ತ್ಯಾಜ್ಯ ನೀರನ್ನು ಶುದ್ಧ ಕುಡಿಯುವ ನೀರಾಗಿ ಬದಲಿಸಲು ಅವಕಾಶವಿದೆ~ ಎಂದು ಅಭಿಪ್ರಾಯಪಟ್ಟರು.
ನಗರಾಭಿವೃಧಿ ಇಲಾಖೆ ಪ್ರಧಾನ ಕಾರ್ಯದರ್ಶಿ ಅಮಿತಾ ಪ್ರಸಾದ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.