ADVERTISEMENT

ತಾಯಿ–ಮಗ ಸಾವು: ಇನ್‌ಸ್ಪೆಕ್ಟರ್ ವಶಕ್ಕೆ

ಇನ್‌ಸ್ಪೆಕ್ಟರ್ ತಂಗಿಯ ಪ್ರೀತಿಸುತ್ತಿದ್ದ ಕಂಡಕ್ಟರ್

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2018, 20:18 IST
Last Updated 6 ಮಾರ್ಚ್ 2018, 20:18 IST
ಮೋನೇಶ್
ಮೋನೇಶ್   

ಬೆಂಗಳೂರು: ಪೊಲೀಸ್ ಇನ್‌ಸ್ಪೆಕ್ಟರ್‌ವೊಬ್ಬರ ತಂಗಿಯನ್ನು ಪ್ರೀತಿ ಮಾಡುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಕಂಡಕ್ಟರ್‌, ತನ್ನ ತಾಯಿಯೊಂದಿಗೆ ಅದೇ ಇನ್‌ಸ್ಪೆಕ್ಟರ್ ಒಡೆತನದ ಅಪಾರ್ಟ್‌ಮೆಂಟ್ ಸಮುಚ್ಚಯದಿಂದ ಬಿದ್ದು ಮೃತಪಟ್ಟಿದ್ದಾರೆ.

ಕಾಡುಗೋಡಿಯ ಬೆಳತ್ತೂರಿನಲ್ಲಿ ಈ ದುರ್ಘಟನೆ ನಡೆದಿದ್ದು, ಯಾದಗಿರಿ ಜಿಲ್ಲೆಯ ಶಹಾಪುರ ತಾಲ್ಲೂಕಿನ ಮೋನೇಶ್ (34) ಹಾಗೂ ಸುಂದರಮ್ಮ (60) ಮೃತರು. ಮಂಗಳವಾರ ಬೆಳಿಗ್ಗೆ 5.30ರ ಸುಮಾರಿಗೆ ಐದನೇ ಮಹಡಿಯಿಂದ ಬಿದ್ದಿದ್ದಾರೆ. ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೋ ಅಥವಾ ಯಾರಾದರೂ ತಳ್ಳಿ ಹತ್ಯೆಗೈದಿದ್ದಾರೋ ಎಂಬುದು ಇನ್ನೂ ಖಚಿತವಾಗಿಲ್ಲ. ಈ ನಿಟ್ಟಿನಲ್ಲಿ ಹಿರಿಯ ಅಧಿಕಾರಿಗಳು ಇನ್‌ಸ್ಪೆಕ್ಟರ್ ಚಂದ್ರಪ್ಪ ಅವರನ್ನು ವಿಚಾರಣೆ ನಡೆಸುತ್ತಿದ್ದಾರೆ.

ಮೊದಲು ಕಾಡುಗೋಡಿ ಠಾಣೆಯಲ್ಲೇ ಕರ್ತವ್ಯ ನಿರ್ವಹಿಸುತ್ತಿದ್ದ ಚಂದ್ರಪ್ಪ, 2017ರ ಜೂನ್‌ನಲ್ಲಿ ಕೋಲಾರಕ್ಕೆ (ಜಿಲ್ಲಾ ವಿಶೇಷ ದಳ) ವರ್ಗವಾಗಿದ್ದರು. ಸೋಮವಾರವಷ್ಟೇ ಅವರನ್ನು ತುಮಕೂರು ಜಿಲ್ಲಾ ವಿಶೇಷ ದಳಕ್ಕೆ ವರ್ಗಾಯಿಸಿ ಗೃಹಇಲಾಖೆ ಆದೇಶಿಸಿತ್ತು. ಅವಿವಾಹಿತರಾಗಿದ್ದ ಅವರು, ಬೆಳತ್ತೂರಿನ ‘ಎಂಪ್ರೆಸ್’ ಅಪಾರ್ಟ್‌ಮೆಂಟ್‌ನಲ್ಲಿ ತಂಗಿಯೊಂದಿಗೆ ನೆಲೆಸಿದ್ದರು.

ADVERTISEMENT

ಪ್ರೇಮ ವಿವಾದ: ಮೋನೇಶ್ ವಿವಾಹಿತ ರಾಗಿದ್ದು, ಪತ್ನಿ–ಇಬ್ಬರು ಮಕ್ಕಳು ಹಾಗೂ ತಾಯಿ ಜತೆ ಶಹಾಪುರದಲ್ಲಿ ವಾಸವಿದ್ದರು. 4 ವರ್ಷಗಳ ಹಿಂದೆ ಯಾದಗಿರಿಯಲ್ಲಿ ಬಿ.ಇಡಿ ವ್ಯಾಸಂಗ ಮಾಡುತ್ತಿದ್ದ ಚಂದ್ರಪ್ಪ ಅವರ ತಂಗಿ, ಮೋನೇಶ್ ನಿರ್ವಾಹಕರಾಗಿದ್ದ ಬಸ್ಸಿ ನಲ್ಲೇ ನಿತ್ಯ ಓಡಾಡುತ್ತಿದ್ದರು. ಹೀಗಾಗಿ, ಪರಸ್ಪರರ ನಡುವೆ ಸ್ನೇಹ ಬೆಳೆದು ಕ್ರಮೇಣ ಅದು ಪ್ರೀತಿಗೆ ತಿರುಗಿತ್ತು. ಈ ವಿಚಾರ ತಿಳಿದ ಚಂದ್ರಪ್ಪ, ತಂಗಿಗೆ ಬುದ್ಧಿ ಹೇಳಿದ್ದರು. ಸೋದರಿಯ ತಂಟೆಗೆ ಬರದಂತೆ ಮೋನೇಶ್‌ಗೂ ಎಚ್ಚರಿಕೆ ನೀಡಿದ್ದರು ಎಂದು ತಿಳಿದು ಬಂದಿದೆ.

ಪದವಿ ಮುಗಿಸಿಕೊಂಡು ಎರಡು ವರ್ಷಗಳ ಹಿಂದೆ ನಗರಕ್ಕೆ ಮರಳಿದ ಯುವತಿ, ಅಣ್ಣನೊಂದಿಗೆ ಫ್ಲ್ಯಾಟ್‌ನಲ್ಲಿ ಉಳಿದುಕೊಂಡಿದ್ದರು. ಆ ನಂತರ ಕೂಡ ಪರಸ್ಪರರ ಪ್ರೀತಿ ಮುಂದುವರಿದಿತ್ತು. ಆಗ ಚಂದ್ರಪ್ಪ, ಮೋನೇಶ್‌ ಪತ್ನಿಗೆ ವಿಷಯ ತಿಳಿಸಿದರೆ ಪರಿಸ್ಥಿತಿ ಸರಿ ಹೋಗಬಹುದೆಂದು ಎರಡು ಬಾರಿ ಯಾದಗಿರಿಗೂ ಹೋಗಿ ಕುಟುಂಬ ಸದಸ್ಯರ ಜತೆ ಮಾತುಕತೆ ನಡೆಸಿದ್ದರು.

ಇದೇ ಸಂದರ್ಭದಲ್ಲಿ ಮೋನೇಶ್ ಅವರನ್ನೂ ಭೇಟಿಯಾಗಿ, ‘ನೀನು ವಿವಾಹಿತ. ಮಕ್ಕಳೂ ಇದ್ದಾರೆ. ಸರ್ಕಾರಿ ಕೆಲಸವಿದೆ. ಚೆನ್ನಾಗಿ ಬದುಕು. ನನ್ನ ತಂಗಿಯನ್ನು ಮರೆತುಬಿಡು. ಇಲ್ಲವಾದರೆ, ಪರಿಸ್ಥಿತಿ ನೆಟ್ಟಗಿರುವುದಿಲ್ಲ’ ಎಂದು ಎಚ್ಚರಿಸಿದ್ದರು. ಆ ಬೆದರಿಕೆಗೆ ಅವರು ಬಗ್ಗಿರಲಿಲ್ಲ. ಇತ್ತ ಅಣ್ಣನ ವರ್ತನೆಯಿಂದ ಬೇಸರಗೊಂಡ ತಂಗಿ, ಎರಡು ಬಾರಿ ಮನೆ ಬಿಟ್ಟು ಹೋಗಿ ಮೋನೇಶ್ ಜತೆಗಿದ್ದರು. ಆಗ ಕೂಡ ಚಂದ್ರಪ್ಪ ಬುದ್ಧಿ ಹೇಳಿ ತಂಗಿಯನ್ನು ಮನೆಗೆ ಕರೆದುಕೊಂಡು ಬಂದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಮತ್ತೆ ನಾಪತ್ತೆಯಾದ ತಂಗಿ: ಚಂದ್ರಪ್ಪ ತಂಗಿ ಫೆ.17ರಂದು ಪುನಃ ಮನೆ ಬಿಟ್ಟು ಹೋದರು. ವಾರ ಕಳೆದರೂ ಮನೆಗೆ ವಾಪಸಾಗದಿದ್ದಾಗ ಗಾಬರಿಗೊಂಡ ಅವರು, ಸೋದರಿ ನಾಪತ್ತೆ ಸಂಬಂಧ ಕಾಡುಗೋಡಿ ಠಾಣೆಗೆ ಫೆ.25ರಂದು ದೂರು ಕೊಟ್ಟಿದ್ದರು.

ತಂಗಿಯನ್ನು ಮೋನೇಶ್ ಕರೆದುಕೊಂಡು ಹೋಗಿರಬಹುದೆಂಬ ಅನುಮಾನದ ಮೇಲೆ ಶುಕ್ರವಾರ ಮಧ್ಯಾಹ್ನ ಶಹಾಪುರಕ್ಕೆ ಹೋಗಿದ್ದರು. ಮನೆ ಹತ್ತಿರ ಹೋಗಿ ವಿಚಾರಿಸಿದಾಗ, ತಮಗೇನೂ ಗೊತ್ತಿಲ್ಲ ಎಂದು ಮೋನೇಶ್ ಹೇಳಿದ್ದರು. ಆಗ ಜೋರು ಗಲಾಟೆ ಮಾಡಿದ್ದ ಚಂದ್ರಪ್ಪ, ‘ತಂಗಿ ಸಿಗುವವರೆಗೂ ನನ್ನ ಮನೆಯಲ್ಲೇ ಇರುವಂತೆ ಬಾ’ ಎಂದಿದ್ದರು. ಅದಕ್ಕೆ ಒಪ್ಪದಿದ್ದಾಗ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ಹೋಗಿತ್ತು.

ಕೊನೆಗೆ ತಾಯಿ–ಮಗ ಇಬ್ಬರನ್ನೂ ಕಾರಿನಲ್ಲಿ ಕರೆದುಕೊಂಡು ತಮ್ಮ ಫ್ಲ್ಯಾಟ್‌ನಲ್ಲಿ ಕೂಡಿಟ್ಟಿದ್ದರು. ನಾಲ್ಕು ದಿನಗಳಿಂದ ಅಲ್ಲೇ ಇದ್ದ ಇಬ್ಬರೂ, ಬೆಳಿಗ್ಗೆ ಕಟ್ಟಡದಿಂದ ಬಿದ್ದಿದ್ದಾರೆ. ಅಪಾ ರ್ಟ್‌ಮೆಂಟ್ ಸಮುಚ್ಚಯದ ಸೆಕ್ಯುರಿಟಿ ಗಾರ್ಡ್‌ ಪೊಲೀಸ್ ನಿಯಂತ್ರಣ ಕೊಠ ಡಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ದೌಡಾಯಿಸಿದ ಕಾಡುಗೋಡಿ ಠಾಣೆ ಪೊಲೀಸರು, ಮೃತರ ಕುಟುಂಬ ಸದಸ್ಯರಿಗೆ ವಿಷಯ ತಿಳಿಸಿ ದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ವೈದೇಹಿ ಆಸ್ಪತ್ರೆಗೆ ಕಳುಹಿಸಿದ್ದಾರೆ.

ಮದುವೆ ಆಗಿದ್ದರು: ‘ಮೋನೇಶ್ ಅವರನ್ನು ಪ್ರೀತಿ ಮಾಡುತ್ತಿರುವುದಾಗಿ ಹಾಗೂ ಅವರನ್ನೇ ವಿವಾಹವಾಗು ವುದಾಗಿ ಯುವತಿ ಅಣ್ಣನ ಬಳಿ ಹೇಳಿ ಕೊಂಡಿದ್ದರು. ಆದರೆ, ಮೋನೇಶ್‌ಗೆ ಈಗಾಗಲೇ ವಿವಾಹವಾಗಿದ್ದರಿಂದ ತಂಗಿಯ ನಿರ್ಧಾರವನ್ನು ಚಂದ್ರಪ್ಪ ಒಪ್ಪಿ ರಲಿಲ್ಲ. ಅವರ ವಿರೋಧದ ನಡುವೆಯೇ ಯುವತಿ 2015ರಲ್ಲಿ ಪ್ರಿಯಕರನನ್ನು ವಿಜಯಪುರದಲ್ಲಿ ವಿವಾಹವಾಗಿದ್ದರು. ಇದರಿಂದ ಕೆರಳಿದ್ದ ಅವರು, ಸೋದರಿಯ ಕುತ್ತಿಗೆಯಲ್ಲಿದ್ದ ತಾಳಿ ಕಿತ್ತೆಸೆದು ಇಬ್ಬರನ್ನೂ ಬೇರ್ಪಡಿಸಿದ್ದರು’ ಎಂದು ಪೊಲೀಸರು ಹೇಳಿದ್ದಾರೆ.

ಅನುಮಾನ: ‘ಮಹಡಿಯ ಅಂಚಿನಲ್ಲಿ ನಾಲ್ಕೂವರೆ ಅಡಿ ಎತ್ತರದ ಗ್ರಿಲ್ ಹಾಕಲಾಗಿದೆ. 60 ವರ್ಷದ ಸುಂದರಮ್ಮ ಅವರು ಅದನ್ನು ಹತ್ತಿ ಹಾರುವುದಕ್ಕೆ ಸಾಧ್ಯವೇ ಇಲ್ಲ. ಮೋನೇಶ್ ಅವರೇ ಮೊದಲು ತಾಯಿಯನ್ನು ಕೆಳಗೆ ತಳ್ಳಿ, ನಂತರ ತಾವೂ ಹಾರಿರಬಹುದು. ಇಲ್ಲವೇ, ಅವರಿಬ್ಬರನ್ನೂ ಯಾರೋ ಕೆಳಗೆ ಹೊತ್ತುಹಾಕಿರಬಹುದು. ಎಲ್ಲ ಆಯಾಮಗಳಲ್ಲೂ ತನಿಖೆ ನಡೆಸುತ್ತಿದ್ದೇವೆ’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಪೊಲೀಸ್ ನಿರ್ಲಕ್ಷ್ಯ
‘ತಂಗಿ ನಾಪತ್ತೆಯಾದ ಬಗ್ಗೆ ಫೆ.25ರಂದೇ ದೂರು ಕೊಟ್ಟಿದ್ದ ಚಂದ್ರಪ್ಪ, ಮೋನೇಶ್ ಹಾಗೂ ಅವರ ತಾಯಿಯೇ ಕರೆದುಕೊಂಡು ಹೋಗಿದ್ದಾರೆ ಎಂದು ದೂರಿನಲ್ಲಿ ಹೇಳಿದ್ದರು. ಪೊಲೀಸರು ಶಹಾಪುರಕ್ಕೆ ತೆರಳಿ ಅವರಿಬ್ಬರನ್ನೂ ವಿಚಾರಣೆ ಮಾಡಬಹುದಿತ್ತು.  ಅವರು ಆ ಕೆಲಸ ಮಾಡದ ಕಾರಣಕ್ಕೆ ಚಂದ್ರಪ್ಪ ಅವರೇ ಹೋಗಿ ತಾಯಿ–ಮಗನನ್ನು ಕರೆದುಕೊಂಡು ಬಂದಿದ್ದಾರೆ. ಪ್ರಕರಣವನ್ನು ನಿರ್ಲಕ್ಷಿಸಿದ ಸಿಬ್ಬಂದಿ ವಿರುದ್ಧ ಕ್ರಮ ಜರುಗಿಸಲಾಗುವುದು’ ಎಂದು ಹಿರಿಯ ಅಧಿಕಾರಿಗಳು ತಿಳಿಸಿದರು.

ಅಕ್ರಮ ಬಂಧನ
‘ಚಂದ್ರಪ್ಪ ನಾಲ್ಕು ದಿನಗಳಿಂದ ತಾಯಿ–ಮಗನನ್ನು ಅಕ್ರಮ ಬಂಧನದಲ್ಲಿ ಇಟ್ಟಿದ್ದರು ಎಂಬುದು ಖಚಿತವಾಗಿದೆ. ಹೀಗಾಗಿ, ವಶಕ್ಕೆ ಪಡೆದಿದ್ದೇವೆ. 5ನೇ ಮಹಡಿಯಿಂದ ಬಿದ್ದಿರುವುದರಿಂದ ದೇಹಗಳು ಛಿದ್ರವಾಗಿವೆ. ಮರಣೋತ್ತರ ಪರೀಕ್ಷೆ ವರದಿಗಾಗಿ ಕಾಯುತ್ತಿದ್ದೇವೆ’ ಎಂದು ಹೆಚ್ಚುವರಿ ಪೊಲೀಸ್ ಕಮಿಷನರ್ ಸೀಮಂತ್‌ಕುಮಾರ್ ಸಿಂಗ್ ‘ಪ್ರಜಾವಾಣಿ’ಗೆ ತಿಳಿಸಿದರು.

‌ಶವಗಳ ಎದುರು ಓಡಾಡುತ್ತಿದ್ದರು!
‘ಪ್ರತಿದಿನ ರಾತ್ರಿ 11 ಗಂಟೆಗೆ ಗೇಟ್ ಬಂದ್ ಮಾಡಿ, ಬೆಳಿಗ್ಗೆ 6 ಗಂಟೆಗೆ ತೆರೆಯುತ್ತೇನೆ. ಅಂತೆಯೇ ಮಂಗಳವಾರ ಬೆಳಿಗ್ಗೆ 6 ಗಂಟೆಗೆ ಗೇಟ್ ತೆಗೆಯಲು ಹೋಗುತ್ತಿದ್ದಾಗ ಚಂದ್ರಪ್ಪ ಅತ್ತಿಂದ ಇತ್ತ ಸಿಗರೇಟ್ ಸೇದುತ್ತ ಓಡಾಡುತ್ತಿದ್ದರು. ವಾಯುವಿಹಾರ ಮಾಡುತ್ತಿರಬಹುದು ಎಂದು ನಾನೂ ಸುಮ್ಮನೆ ಹೋದೆ. ಗೇಟ್ ತೆರೆದ ಬಳಿಕ ಮಾತನಾಡಿಸಲು ಹತ್ತಿರ ಹೋದಾಗ, ಮೋನೇಶ್ ಹಾಗೂ ಸುಂದರಮ್ಮ ಸತ್ತು ಬಿದ್ದಿರುವುದು ಕಾಣಿಸಿತು. ಅವರನ್ನು ಕೇಳಿದರೆ, ಯಾವಾಗ ಬಿದ್ದರೋ ಗೊತ್ತಿಲ್ಲ ಎಂದಷ್ಟೇ ಹೇಳಿದರು. ಕೂಡಲೇ ಪೊಲೀಸರಿಗೆ ಕರೆ ಮಾಡಿದೆ’ ಎಂದು ಅಪಾರ್ಟ್‌ಮೆಂಟ್ ಸಮುಚ್ಚಯದ ಸೆಕ್ಯುರಿಟಿ ಗಾರ್ಡ್ ತಿಮ್ಮಣ್ಣ ತಿಳಿಸಿದರು.

*
ತಂಗಿಗೆ ಮೋನೇಶ್ ಜತೆ ಪ್ರೇಮಾಂಕುರವಾದ ವಿಚಾರ ತಿಳಿದ ಚಂದ್ರಪ್ಪ, ಅವರಿಬ್ಬರೂ ಒಟ್ಟಿಗೆ ಓಡಾಡದಂತೆ ನೋಡಿಕೊಳ್ಳಲು ಆರು ಮಂದಿ ಗೃಹರಕ್ಷಕರನ್ನು ಶಹಾಪುರಕ್ಕೆ ಕಳುಹಿಸಿದ್ದರು.
–ಕಾಡುಗೋಡಿ ಪೊಲೀಸರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.