ADVERTISEMENT

ತಾಳ್ಮೆ ಕಳೆದುಕೊಂಡಿದ್ದರೆ ಘಟನೆ ಇನ್ನಷ್ಟು ಗಂಭೀರ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2012, 19:30 IST
Last Updated 14 ಮಾರ್ಚ್ 2012, 19:30 IST

ಬೆಂಗಳೂರು: `ಮಾಧ್ಯಮ ಪ್ರತಿನಿಧಿಗಳ ಮೇಲಿನ ವಕೀಲರ ಹಲ್ಲೆಯ ಸಂದರ್ಭದಲ್ಲಿ ಪೊಲೀಸರು ತಮ್ಮ ತಾಳ್ಮೆ ಕಳೆದುಕೊಂಡಿದ್ದರೆ ಘಟನೆಯು ಇನ್ನಷ್ಟು ಗಂಭೀರ ಸ್ವರೂಪ ಪಡೆಯುತ್ತಿತ್ತು~ ಎಂದು ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಶಂಕರ ಬಿದರಿ ಹೇಳಿದರು.

`ಬ್ರಾಡ್‌ಕಾಸ್ಟ್ ಎಡಿಟರ್ಸ್‌ ಅಸೋಸಿಯೇಷನ್~ ನೇಮಿಸಿರುವ ಎನ್.ಕೆ.ಸಿಂಗ್ ನೇತೃತ್ವದ ಸತ್ಯ ಶೋಧನಾ ಸಮಿತಿಯ ಮುಂದೆ ಬುಧವಾರ ತಮ್ಮ ಹೇಳಿಕೆ ನೀಡಿದ ಅವರು, `ಘಟನೆಯ ಸಂದರ್ಭದಲ್ಲಿ ಪೊಲೀಸರ ಪ್ರದರ್ಶಿಸಿದ ತಾಳ್ಮೆಯನ್ನೇ ವಕೀಲರು ದೌರ್ಬಲ್ಯ ಎಂಬಂತೆ ನೋಡುವುದು ಸರಿಯಲ್ಲ. ಮಾರ್ಚ್ 2 ರಂದು ನಗರ ಸಿವಿಲ್ ನ್ಯಾಯಾಲಯಕ್ಕೆ ಪೊಲೀಸರನ್ನು ರಕ್ಷಣಾ ಕಾರ್ಯಕ್ಕಾಗಿ ನೇಮಿಸಲಾಗಿತ್ತೇ ವಿನಾ ಬೇರಾಗುವುದೇ ಉದ್ದೇಶವೂ ಇರಲಿಲ್ಲ. ಆದರೆ ವಕೀಲರು ನ್ಯಾಯಾಲಯದ ಪ್ರವೇಶಕ್ಕೇ ಆಕ್ಷೇಪ ವ್ಯಕ್ತ ಪಡಿಸಿದ್ದು ಸರಿಯಲ್ಲ~ ಎಂದು ಅವರು ಸಮಿತಿಗೆ ತಿಳಿಸಿದರು.

`ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕಾನೂನು ಪರಿಪಾಲನೆಗೆ ಎಲ್ಲರ ಸಹಕಾರವೂ ಅಗತ್ಯವಾಗಿರುತ್ತದೆ. ಘಟನೆ ಸಂದರ್ಭದಲ್ಲಿ ಪೊಲೀಸರೊಂದಿಗೂ ವಕೀಲರು ಸಹನೆ ಮೀರಿ ವರ್ತಿಸಿದ್ದಾರೆ. ಕೆಲವು ಘಟನೆಗಳಲ್ಲಿ ಪೊಲೀಸರು ತಾಳ್ಮೆ ಕಳೆದುಕೊಳ್ಳದಂತೆ ವರ್ತಿಸಬೇಕಾಗುತ್ತದೆ. ಇದು ಪೊಲೀಸರ ಅಸಹಾಯಕತೆಯಲ್ಲ~ ಎಂದು ಅವರು ಹೇಳಿಕೆ ನೀಡಿದರು.

ಪತ್ರಕರ್ತರಾದ ವಿಶ್ವೇಶ್ವರ ಭಟ್, ಮಹೇಂದ್ರ ಮಿಶ್ರಾ ಹಾಗೂ ವಿವಿಧ ಖಾಸಗಿ ಚಾನೆಲ್‌ಗಳ ಕ್ಯಾಮೆರಾಮನ್‌ಗಳು ಮತ್ತು ವರದಿಗಾರರು ಮಾರ್ಚ್ 2 ಘಟನೆಯ ಬಗ್ಗೆ ಸಮಿತಿಯ ಮುಂದೆ ಹೇಳಿಕೆ ದಾಖಲಿಸಿದರು. ವಕೀಲರ ಹಲ್ಲೆ ಯಾವ ರೀತಿಯಿಂದಲೂ ಸಮರ್ಥನೀಯವಲ್ಲ. ವಕೀಲರ ನ್ಯಾಯಾಲಯ ಬಹಿಷ್ಕಾರದ ಕ್ರಮವೂ ಅಮಾನವೀಯ ಎಂದರು.

ಘಟನೆಯ ಸಂಬಂಧ ವಕೀಲರ ಪರವಾಗಿ ಪ್ರಮೀಳಾ ನೇಸರ್ಗಿ ಅವರೂ ಮಂಗಳವಾರ ಸಮಿತಿಯ ಮುಂದೆ ಹೇಳಿಕೆ ನೀಡಿದ್ದಾರೆ. `ಮಾರ್ಚ್ 2 ರಂದು ಪತ್ರಕರ್ತರೇ ಮೊದಲು ವಕೀಲರ ಮೇಲೆ ಹಲ್ಲೆ ಮಾಡಿದ್ದು ಘಟನೆಗೆ ಮುಖ್ಯ ಕಾರಣ. ಆದರೆ ಮಾಧ್ಯಮಗಳು ಸತ್ಯವನ್ನು ಮರೆ ಮಾಚುತ್ತಿವೆ~ ಎಂದು ಅವರು ಸಮಿತಿಯ ಮುಂದೆ ದೂರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.