ADVERTISEMENT

ತಿಂಗಳಲ್ಲಿ 80 ಸಾವಿರ ಮೀಟರ್‌ಗಳ ಬದಲು

ಕಾವೇರಿ ನೀರಿನ ಸೋರಿಕೆಯ ಪ್ರಮಾಣ ಕಡಿಮೆ ಮಾಡಲು ಕ್ರಮ

ಮಂಜುನಾಥ್ ಹೆಬ್ಬಾರ್‌
Published 20 ಜನವರಿ 2016, 20:12 IST
Last Updated 20 ಜನವರಿ 2016, 20:12 IST
ತಿಂಗಳಲ್ಲಿ 80 ಸಾವಿರ ಮೀಟರ್‌ಗಳ ಬದಲು
ತಿಂಗಳಲ್ಲಿ 80 ಸಾವಿರ ಮೀಟರ್‌ಗಳ ಬದಲು   

ಬೆಂಗಳೂರು: ಕಾವೇರಿ ನೀರಿನ ಸೋರಿಕೆ ಪ್ರಮಾಣವನ್ನು ಕಡಿಮೆ ಮಾಡಲು  ನೀರಿನ ಮೀಟರ್‌ಗಳನ್ನು (ಜಲಮಾಪನ) ಬದಲಿಸಲು ಜಲಮಂಡಲಿ ಮುಂದಾಗಿದೆ.

ನಗರದಲ್ಲಿ 8 ಲಕ್ಷ ಗೃಹ ಬಳಕೆದಾರರು ಇದ್ದಾರೆ. ಸುಮಾರು 1 ಲಕ್ಷ ಸಾವಿರ ವಾಣಿಜ್ಯ ಬಳಕೆದಾರರು ಇದ್ದಾರೆ.  ಈ ಪೈಕಿ 3.30 ಲಕ್ಷ ಗೃಹ ಬಳಕೆದಾರರು ಈಗಲೂ ಸಿಂಗಲ್‌ ಜೆಟ್‌ ಮೀಟರ್‌ಗಳನ್ನು ಹೊಂದಿದ್ದಾರೆ. ಸಿಂಗಲ್‌ ಜೆಟ್‌ ಮೀಟರ್‌ಗಳನ್ನು ಬದಲಿಸಿ ಮಲ್ಟಿ ಜೆಟ್‌ ಮೀಟರ್‌ಗಳನ್ನು ಅಳವಡಿಸಲು ಮಂಡಳಿ ನಿರ್ಧರಿಸಿದೆ. 80 ಸಾವಿರ ಮೀಟರ್‌ಗಳನ್ನು ತಿಂಗಳೊಳಗೆ ಬದಲಿಸಲಿದೆ.

‘ಬೆಂಗಳೂರು ದಕ್ಷಿಣ, ಪಶ್ಚಿಮ ಹಾಗೂ ಕೇಂದ್ರ ವಿಭಾಗಗಳಲ್ಲಿ ‘ಲೆಕ್ಕಕ್ಕೆ ಸಿಗದ ನೀರಿನ ನಿಯಂತ್ರಣ ಯೋಜನೆ’  ಜಾರಿಯಲ್ಲಿದೆ. ಈ ಮೂರು ವಿಭಾಗಗಳಲ್ಲಿ 2.5 ಲಕ್ಷ ಸಿಂಗಲ್‌ ಜೆಟ್‌ ನೀರಿನ ಮೀಟರ್‌ಗಳು ಇವೆ. ಈ ಮೀಟರ್‌ಗಳನ್ನು  ಯೋಜನೆಯ ಗುತ್ತಿಗೆ ವಹಿಸಿಕೊಂಡ ಕಂಪೆನಿಯೇ ಬದಲಿಸಬೇಕಿದೆ. ಹೀಗಾಗಿ  ಉಳಿದ 80 ಸಾವಿರ ಮೀಟರ್‌ಗಳನ್ನು ಬದಲಿಸಲಾಗುತ್ತಿದೆ. ಒಂದು ತಿಂಗಳಲ್ಲಿ ಈ ಕಾರ್ಯ ಪೂರ್ಣಗೊಳಿಸುವಂತೆ ಎಂಜಿನಿಯರ್‌ಗಳಿಗೆ ಸೂಚನೆ ನೀಡಲಾಗಿದೆ’ ಎಂದು ಜಲಮಂಡಳಿಯ ಮುಖ್ಯ ಎಂಜಿನಿಯರ್‌ (ನಿರ್ವಹಣೆ) ಕೆಂಪರಾಮಯ್ಯ ತಿಳಿಸಿದರು.

‘ಈ ಮೊದಲು ಗೃಹ ಬಳಕೆಗಳಿಗೆ ಸಿಂಗಲ್ ಜೆಟ್‌ ಮೀಟರ್‌ಗಳನ್ನು ಅಳವಡಿಸಲಾಗುತ್ತಿತ್ತು. 2008ರಿಂದ ಹೊಸ ಸಂಪರ್ಕಗಳಿಗೆ ಮಲ್ಟಿ ಜೆಟ್‌ ಮೀಟರ್‌ಗಳನ್ನು ಬಳಸಲು ಆರಂಭಿಸಲಾಯಿತು. ನೀರಿನ ಸೋರಿಕೆ ತಡೆಗಟ್ಟಲು ಹಳೆಯ ಮೀಟರ್‌ಗಳನ್ನು ಈಗ ಬದಲಿಸಲಾಗುತ್ತಿದೆ’ ಎಂದು ಅವರು ಹೇಳಿದರು.

‘ಎಲ್ಲ ಮೀಟರ್‌ಗಳ ಬದಲಿಸಿದ ಬಳಿಕ ದಿನಕ್ಕೆ 2 ಕೋಟಿ ಲೀಟರ್‌ ನೀರು ಉಳಿತಾಯವಾಗಲಿದೆ’ ಎಂದು ಅವರು ವಿವರಿಸಿದರು. ‘ಮೀಟರ್‌ ಬದಲಿಸುವ ಸಂದರ್ಭದಲ್ಲಿ ಮಂಡಳಿ ಗ್ರಾಹಕರಿಂದ ಯಾವುದೇ ಶುಲ್ಕ ವಸೂಲಿ ಮಾಡುವುದಿಲ್ಲ. ಪ್ರತಿ ತಿಂಗಳು ಮಂಡಳಿ ‘ಜಲಮಾಪನ ಸೇವಾ ಶುಲ್ಕ’ ವಸೂಲಿ ಮಾಡುತ್ತಿದೆ. ಈ ಹಣವನ್ನು ಬಳಸಿ ಮೀಟರ್‌ಗಳನ್ನು ಮಂಡಳಿ ಬದಲಿಸಲಿದೆ’ ಎಂದು ಅವರು ಸ್ಪಷ್ಟಪಡಿಸಿದರು.

ಮಲ್ಟಿ ಜೆಟ್‌ ಮೀಟರ್‌ಗಳೆಂದರೆ....
ಸಿಂಗಲ್‌ ಜೆಟ್‌ ಮೀಟರ್‌ನಲ್ಲಿ ನೀರಿನ ಹರಿವಿನ ಪ್ರಮಾಣ ನಿಖರವಾಗಿ ಗೊತ್ತಾಗುವುದಿಲ್ಲ. ಉದಾಹರಣೆಗೆ ಮನೆಗೆ 100 ಲೀಟರ್‌ ನೀರು ಪೂರೈಕೆಯಾದರೆ 2–3 ಲೀಟರ್‌ ನೀರು ಲೆಕ್ಕಕ್ಕೆ ಸಿಗುವುದಿಲ್ಲ. ಇದರಿಂದ ಮಂಡಳಿಗೆ ನೀರಿನ ಆದಾ ಯದಲ್ಲಿ ಖೋತಾ ಆಗುತ್ತದೆ. ಮೀಟರ್‌ ಹಳೆಯದಾಗುತ್ತಾ ಬಂದಂತೆ ಮಾಪನ ಸಾಮರ್ಥ್ಯ ಕಡಿಮೆಯಾಗುತ್ತದೆ. ಏಳೆಂಟು ವರ್ಷ ಗಳಲ್ಲಿ ಇದನ್ನು ಬದಲಿಸಬೇಕಾ ಗುತ್ತದೆ. ಆದರೆ, ಮಲ್ಟಿ ಜೆಟ್ ಮೀಟರ್‌  ಹಾಗಲ್ಲ. ಈ ಮೀಟರ್‌ ನೀರಿನ ಹರಿವಿನ ನಿಖರ ಮಾಪನ ಮಾಡು ತ್ತದೆ. ಇದರ  ಆಯಸ್ಸು ಸಹ ಜಾಸ್ತಿ. ಇದನ್ನು ಗೃಹ ಬಳಕೆದಾರರು ಹಾಗೂ ಸಣ್ಣ ಪ್ರಮಾಣದ ವಾಣಿಜ್ಯ ಬಳಕೆ ದಾರರ ನೀರಿನ ಮಾಪನಕ್ಕೆ ಬಳಸಲಾಗುತ್ತದೆ ಎಂದು ಜಲಮಂಡ ಳಿಯ ಅಧಿಕಾರಿಗಳು ಮಾಹಿತಿ ನೀಡಿದರು.

ಅಂಕಿ ಅಂಶಗಳು (₹ ಗಳಲ್ಲಿ)
800 ಸಿಂಗಲ್‌ ಜೆಟ್‌ ಮೀಟರ್ ಬೆಲೆ
900 ಮಲ್ಟಿ ಜೆಟ್ ಮೀಟರ್‌ ಬೆಲೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.