ADVERTISEMENT

ತಿರುಪತಿಯಲ್ಲಿ ಬೆಂಗಳೂರಿನ ಮಕ್ಕಳ ರಕ್ಷಣೆ

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2017, 19:30 IST
Last Updated 2 ನವೆಂಬರ್ 2017, 19:30 IST
ನಮಿತ್, ನಮ್ರತಾ
ನಮಿತ್, ನಮ್ರತಾ   

ಬೆಂಗಳೂರು: ಭೂಪಸಂದ್ರ ಮುಖ್ಯರಸ್ತೆಯಿಂದ ಅ.25ರಂದು ಅಪಹರಣವಾಗಿದ್ದ ನಮ್ರತಾ (7) ಹಾಗೂ ನಮಿತ್ (4) ಎಂಬ ಇಬ್ಬರು ಮಕ್ಕಳು ತಿರುಪತಿಯಲ್ಲಿ ಪತ್ತೆಯಾಗಿದ್ದಾರೆ.

ಸಂಜಯನಗರ ಪೊಲೀಸರು ಗುರುವಾರ ಬೆಳಗಿನ ಜಾವ ಮಕ್ಕಳನ್ನು ನಗರಕ್ಕೆ ಕರೆತಂದು ಪೋಷಕರ ಸುಪರ್ದಿಗೆ ಒಪ್ಪಿಸಿದ್ದಾರೆ. ಅಪಹರಣಕಾರ ವಿನೋದ್ (26) ತಲೆಮರೆಸಿಕೊಂಡಿದ್ದಾನೆ.

ಹೀಗೆ ಅಪಹರಿಸಿದ್ದ: ನಮ್ರತಾ ಹಾಗೂ ನಮಿತ್ ಅವರ ಅಜ್ಜ ನಾಗರಾಜು ಭೂಪಸಂದ್ರ ಮುಖ್ಯರಸ್ತೆಯಲ್ಲಿ ಎಳನೀರು ಮಾರುತ್ತಾರೆ. ಅ.25ರ ಬೆಳಿಗ್ಗೆ ಮಕ್ಕಳು ತಾತನ ಬಳಿ ಹೋಗಿದ್ದರು. 11.30ರ ಸುಮಾರಿಗೆ ಸಮೀಪದ ಗುಜರಿ ಅಂಗಡಿಗೆ ಬಂದಿದ್ದ ವಿನೋದ್, ತಿಂಡಿ ಕೊಡಿಸುವ ಆಮಿಷವೊಡ್ಡಿ ಅವರಿಬ್ಬರನ್ನೂ ಕರೆದುಕೊಂಡು ಹೋಗಿದ್ದ ಎಂದು ಪೊಲೀಸರು ಹೇಳಿದ್ದಾರೆ.

ADVERTISEMENT

ಭೂಪಸಂದ್ರ ಬಸ್ ನಿಲ್ದಾಣ ಸಮೀಪದ ಬೇಕರಿಯಲ್ಲಿ ತಿಂಡಿ ಕೊಡಿಸಿದ ಆತ, ನಂತರ ಮಕ್ಕಳನ್ನು ಆಟೊದಲ್ಲಿ ಯಶವಂತಪುರಕ್ಕೆ ಕರೆದೊಯ್ದಿದ್ದ. ಅಲ್ಲಿಂದ ರೈಲಿನಲ್ಲಿ ತಿರುಪತಿಗೆ ಕರೆದುಕೊಂಡು ಹೋಗಿದ್ದ. ಇತ್ತ ಸಂಜೆಯಾದರೂ ಮಕ್ಕಳು ಕಾಣಿಸದಿದ್ದಾಗ ತಂದೆ ಪ್ರಶಾಂತ್ ಅವರು ಸಂಜಯನಗರ ಠಾಣೆಗೆ ದೂರು ಕೊಟ್ಟಿದ್ದರು. ಪೊಲೀಸರು ಸಿ.ಸಿ ಟಿ.ವಿ ಕ್ಯಾಮೆರಾ ಪರಿಶೀಲಿಸಿದಾಗ, ಮಕ್ಕಳನ್ನು ವಿನೋದ್ ಕರೆದುಕೊಂಡು ಹೋಗಿರುವುದು ಗೊತ್ತಾಗಿತ್ತು. ಹೀಗಾಗಿ ಅಪಹರಣ ಪ್ರಕರಣ ದಾಖಲಿಸಿಕೊಂಡು ತನಿಖೆ ಪ್ರಾರಂಭಿಸಿದ್ದರು.

ಪರಿಚಿತನೇ ಎದುರಾದ: ಈ ಮೊದಲು ನಗರದ ಹಳೇ ಗುಡ್ಡದಹಳ್ಳಿಯಲ್ಲಿದ್ದ ವೆಂಕಟೇಶ್ ಎಂಬ ಗಾರೆ ಮೇಸ್ತ್ರಿ, ಕುಟುಂಬ ಸದಸ್ಯರ ಜತೆ ಹತ್ತು ವರ್ಷಗಳಿಂದ ತಿರುಪತಿಯಲ್ಲಿ ನೆಲೆಸಿದ್ದಾರೆ. ವಿನೋದ್ ಸಹ ಹಳೇ ಗುಡ್ಡದಹಳ್ಳಿ ನಿವಾಸಿಯಾಗಿದ್ದರಿಂದ ವೆಂಕಟೇಶ್ ಅವರಿಗೆ ಆತನ ಪರಿಚಯವಿತ್ತು.

ಅ.26ರ ಸಂಜೆ ಮಕ್ಕಳನ್ನು ಕರೆದುಕೊಂಡು ತಿರುಪತಿ ದೇವಾಲಯಕ್ಕೆ ಹೋಗಿದ್ದ ವಿನೋದ್‌ಗೆ ವೆಂಕಟೇಶ್ ಅವರೇ ಎದುರಾಗಿದ್ದರು. ‘ಇಲ್ಲಿ ಏನು ಮಾಡುತ್ತಿದ್ದೀಯೋ. ಈ ಮಕ್ಕಳು ಯಾರು’ ಎಂದು ಆತನನ್ನು ಪ್ರಶ್ನಿಸಿದಾಗ, ‘ಇವರು ನನ್ನ ಮಕ್ಕಳು. ಹೆಂಡತಿ ಸತ್ತು ಹೋದ ಬಳಿಕ ಇಲ್ಲಿಗೆ ಬಂದೆ’ ಎಂದು ಸುಳ್ಳು ಹೇಳಿದ್ದ. ಅನುಮಾನಗೊಂಡು ಅವರು ಮಕ್ಕಳನ್ನು ವಿಚಾರಿಸಿದಾಗ ವಾಸ್ತವ ಗೊತ್ತಾಗಿತ್ತು. ಆ ಕೂಡಲೇ ವಿನೋದ್ ಅಲ್ಲಿಂದ ಓಡಿ ಹೋಗಿದ್ದ. ನಂತರ ವೆಂಕಟೇಶ್ ಅವರು ಮಕ್ಕಳನ್ನು ತಮ್ಮ ಮನೆಗೆ ಕರೆದುಕೊಂಡು ಹೋಗಿದ್ದರು.

ವಾಟ್ಸ್‌ಆ್ಯಪ್ ನೆರವು: ಮಕ್ಕಳು ಸಿಗದೆ ಕಂಗಾಲಾಗಿದ್ದ ಪ್ರಶಾಂತ್ ಅವರು ತಮಗೆ ಗೊತ್ತಿರುವ ಎಲ್ಲರಿಗೂ ವಾಟ್ಸ್‌ಆ್ಯಪ್ ಮೂಲಕ ಮಕ್ಕಳ ಫೋಟೊ ಹಾಗೂ ವಿವರ ಕಳುಹಿಸಿದ್ದರು. ಅಲ್ಲದೆ, ತಮ್ಮ ಪರಿಚಿತರಿಗೂ ಈ ಸಂದೇಶ ಹಾಗೂ ಫೋಟೊ ರವಾನಿಸಿ ಮಕ್ಕಳ ಪತ್ತೆಗೆ ಸಹಕರಿಸುವಂತೆ ಕೋರಿದ್ದರು.

ಅತ್ತ, ವೆಂಕಟೇಶ್ ಅವರು ಮಕ್ಕಳ ಪೂರ್ವಾಪರ ತಿಳಿಯಲು ಸ್ಥಳೀಯ ಪೊಲೀಸರನ್ನೂ ಸಂಪರ್ಕಿಸಿದ್ದರು. ಆದರೆ, ಪ್ರಯೋಜನವಾಗಿರಲಿಲ್ಲ. ಆದರೆ, ‘ನಮ್ಮ ಮನೆ ಹೆಬ್ಬಾಳ ಹತ್ತಿರ ಇದೆ’ ಎಂದು ನಮ್ರತಾ ಅ.31ರ ರಾತ್ರಿ ತಿಳಿಸಿದ್ದಳು.

ಮೂಲತಃ ಬೆಂಗಳೂರಿನವರೇ ಆಗಿದ್ದರಿಂದ ವೆಂಕಟೇಶ್ ಅವರಿಗೆ ಹೆಬ್ಬಾಳದ ಪರಿಚಯವಿತ್ತು. ಆ ಕೂಡಲೇ ಅವರು ಕೊಡಿಗೇಹಳ್ಳಿಯಲ್ಲಿ ನೆಲೆಸಿರುವ ಸಂಬಂಧಿ ಅವಿನಾಶ್‌ಗೆ ಕರೆ ಮಾಡಿ, ‘ಹೆಬ್ಬಾಳದ ಇಬ್ಬರು ಮಕ್ಕಳು ತಿರುಪತಿಯಲ್ಲಿ ಸಿಕ್ಕಿವೆ. ಈ ಬಗ್ಗೆ ಪೊಲೀಸರಿಗೆ ವಿಷಯ ತಿಳಿಸು’ ಎಂದಿದ್ದರು.

ಆಗ ಅವಿನಾಶ್ ಅವರು ತಮ್ಮ ವಾಟ್ಸ್‌ಆ್ಯಪ್‌ಗೂ ಬಂದಿದ್ದ ಮಕ್ಕಳಿಬ್ಬರ ಫೋಟೊ ಹಾಗೂ ವಿವರವನ್ನು ವೆಂಕಟೇಶ್‌ ಅವರಿಗೆ ರವಾನಿಸಿದ್ದರು. ‘ನನ್ನ ಬಳಿ ಇರುವುದು ಇವೇ ಮಕ್ಕಳು. ಆ ವಿನೋದ್ ಇಲ್ಲಿಗೆ ಕರೆದುಕೊಂಡು ಬಂದಿದ್ದ’ ಎಂದು ಹೇಳಿದ್ದರು. ನಂತರ ಪೋಷಕರನ್ನು ಸಂಪರ್ಕಿಸಿ ಮಕ್ಕಳು ತಮ್ಮ ಬಳಿ ಇರುವುದಾಗಿ ತಿಳಿಸಿದ್ದರು.

ನ.1ರ ಬೆಳಿಗ್ಗೆಯೇ ತಿರುಪತಿಗೆ ತೆರಳಿದ ಸಂಜಯನಗರ ಠಾಣೆಯ ಎಎಸ್‌ಐ ಶಿವಮೂರ್ತಿ ಹಾಗೂ ಕಾನ್‌ಸ್ಟೆಬಲ್ ನಾಗಣ್ಣ, ಮಕ್ಕಳನ್ನು ಕರೆದುಕೊಂಡು ನಗರಕ್ಕೆ ಮರಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.