ADVERTISEMENT

ತುಕ್ಕು ಹಿಡಿಯುತ್ತಿರುವ ಸರ್ಕಾರಿ ಹಾಸ್ಟೆಲ್‌ಗಳು

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2012, 18:30 IST
Last Updated 5 ಫೆಬ್ರುವರಿ 2012, 18:30 IST

ಬೆಂಗಳೂರು: `1955-56ನೇ ಸಾಲಿನಲ್ಲಿ ನಾನೊಬ್ಬ ಇಲ್ಲಿನ ಹಳೇ ವಿದ್ಯಾರ್ಥಿ. ಇಲ್ಲೊಂದು `ಸಂಸ್ಕೃತಿ~ ಕಲಿತಿದ್ದೇನೆ. ಮುಂದೆ ಸಮಾಜ ಕಲ್ಯಾಣ ಸಚಿವನಾಗಿ ಅದನ್ನೇ ಅಳವಡಿಸಿಕೊಂಡೆ. ಆದರೆ ಈಗ ಸರ್ಕಾರಿ ವಿದ್ಯಾರ್ಥಿ ನಿಲಯಗಳು ತುಕ್ಕು ಹಿಡಿಯುತ್ತಿವೆ~ ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಕಳವಳ ವ್ಯಕ್ತಪಡಿಸಿದರು.

ಈಡಿಗರ ವಿದ್ಯಾರ್ಥಿ ನಿಲಯದ ಹಳೇ ವಿದ್ಯಾರ್ಥಿಗಳ ಸಂಘದ ವತಿಯಿಂದ ಭಾನುವಾರ ನಡೆದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಚಿನ್ನದ ಪದಕಗಳ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

`ಈ ವಿದ್ಯಾರ್ಥಿ ನಿಲಯದಿಂದ ನಾನು ಎಷ್ಟೇ ದೊಡ್ಡ ಅಧಿಕಾರಕ್ಕೆ ಏರಿದರೂ ಸಮಾಜವಾದದ `ಕುರ್ಚಿ~ಯನ್ನು ಮರೆಯಲಿಲ್ಲ. ಆದರೆ ವಿದ್ಯಾರ್ಥಿ ನಿಲಯಗಳಲ್ಲಿ ಈಗೀಗ ಪರಿಶ್ರಮವೂ ಇಲ್ಲ, ನಿಸ್ವಾರ್ಥ ಸೇವೆಯೂ ಇಲ್ಲ. ವಿದ್ಯಾಭ್ಯಾಸವೂ ಇಲ್ಲ, ಆರ್ಥಿಕ ಸ್ಥಿತಿಯೂ ಚೆನ್ನಾಗಿಲ್ಲ~ ಎಂದರು

ಶಾಸಕ ದಿನೇಶ್ ಗುಂಡೂರಾವ್ ಮಾತನಾಡಿ `ದೇಶದ ಭವಿಷ್ಯವೇ ಯುವ ಸಮುದಾಯ. ಮಾನವ ಸಂಪನ್ಮೂಲದ ಸಮರ್ಥ ಬಳಕೆಗೆ ಅವರಿಗೆ ಸೂಕ್ತ ಮಾರ್ಗದರ್ಶನ ಇಂತಹ ವಿದ್ಯಾರ್ಥಿ ನಿಲಯಗಳ ಮೂಲಕ ಸಿಗಬೇಕು~ ಎಂದರು.

ಪ್ರದೇಶ ಆರ್ಯ ಈಡಿಗರ ಸಂಘದ ಅಧ್ಯಕ್ಷ ಜೆ.ಪಿ.ನಾರಾಯಣ ಸ್ವಾಮಿ ಮಾತನಾಡಿ, `ಇಂದು ರಾಜಕಾರಣ ಹದಗೆಟ್ಟಿದೆ. ಅದಕ್ಕೆ ನಾವೂ ಕಾರಣ. ಜವಾಬ್ದಾರಿಯಿಂದ ಎಲ್ಲರೂ ಮತದಾನ ಮಾಡಿದರೆ ಇಂತಹ ಅನಿಷ್ಟಗಳನ್ನು ಹೋಗಲಾಡಿಸಬಹುದು. ಅಂತಹ ಸಮಾಜ ನಿರ್ಮಿಸಬೇಕು. ಈ ನಿಟ್ಟಿನಲ್ಲಿ ಯುವಕರ ಜವಾಬ್ದಾರಿ ದೊಡ್ಡದು~ ಎಂದರು.

ಪುರಸ್ಕಾರ: 2010-11ನೇ ಸಾಲಿನ ಪ್ರತಿಭಾವಂತ ವಿದ್ಯಾರ್ಥಿಗಳಾದ ಹರ್ಷಿತಾ (ಎಸ್‌ಎಸ್‌ಎಲ್‌ಸಿ), ಆದಿತ್ಯ ಕೃಷ್ಣ (ಪಿಯುಸಿ), ಲಕ್ಷ್ಮಿ ಸಿದ್ಧ ನಾಯಕ್ (ಬಿಎಸ್ಸಿ), ಹರೀಶ್‌ಕುಮಾರ್ (ಬಿಇ), ಲತಾ ರಾಮಚಂದ್ರ ನಾಯಕ್ (ಎಂಎಸ್ಸಿ), ಪ್ರಹ್ಲಾದ ಆರ್. (ಎಂಟೆಕ್), ಡಾ.ಕವನ ವೆಂಕಟಪ್ಪ (ಎಂಡಿ) ಅವರಿಗೆ ಚಿನ್ನದ ಪದಕ ನೀಡಿ ಪುರಸ್ಕರಿಸಲಾಯಿತು.
 
ವಿವಿಧ ದತ್ತಿ ನಿಧಿಗಳ ಮೂಲಕ ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು.
ಕಾಗೋಡು ತಿಮ್ಮಪ್ಪ, ನಿವೃತ್ತ ಅಧಿಕಾರಿ ಆಂಜನಪ್ಪ, ನಿವೃತ್ತ ಎಂಜಿನಿಯರ್ ಇ.ಎನ್.ಕೃಷ್ಣಪ್ಪ, ವೈದ್ಯರಾದ ಡಾ. ರಾಮರಾಜು, ಪತ್ರಕರ್ತ ಬಾಲಕೃಷ್ಣ ಪುತ್ತಿಗೆ, ಅನ್ನ ದಾಸೋಹದ ದಾನಿ ಸಿ.ಟಿ.ವೆಂಕಟಪ್ಪ ಅವರನ್ನು ಸನ್ಮಾನಿಸಲಾಯಿತು. ನಳಿನಾಕ್ಷಿ ಸಣ್ಣಪ್ಪ ಅವರು ರೂ 5,000 ಮೊತ್ತದ ಪುಸ್ತಕಗಳನ್ನು ವಿದ್ಯಾರ್ಥಿ ನಿಲಯಕ್ಕೆ ಕೊಡಗೆಯಾಗಿ ನೀಡಿದರು.

ಟಿ.ನರಸಿಂಹ ಸ್ವಾಮಿ ಅವರು ಬರೆದ `ಸತ್ಯದರಿವು~ ಪುಸ್ತಕವನ್ನು ಸರ್ವೋದಯ ಶಿಕ್ಷಣ ಸಂಸ್ಥೆ ಅಧ್ಯಕ್ಷರಾದ ವಿ.ನಾರಾಯಣ ಸ್ವಾಮಿ ಬಿಡುಗಡೆ ಮಾಡಿದರು. ಸಂಘದ ಸಂಸ್ಥಾಪಕ ಅಧ್ಯಕ್ಷರ ಭಾವಚಿತ್ರಗಳನ್ನು ದಿನೇಶ್ ಗುಂಡೂರಾವ್ ಅನಾವರಣ ಮಾಡಿದರು. ಎಚ್.ಎಲ್.ಶಿವಾನಂದ, ಕೆ.ಎ.ರಾಮಕೃಷ್ಣಮೂರ್ತಿ ಮತ್ತಿತರರು ಮಾತನಾಡಿದರು. ವಿದ್ಯಾರ್ಥಿ ನಿಲಯದ ಹಳೆ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಆರ್.ಕೃಷ್ಣಪ್ಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ನಾಗಪ್ಪ ವರದಿ ಮಂಡಿಸಿದರು. ಉಪಾಧ್ಯಕ್ಷ ಇ.ವಿ. ಸತ್ಯನಾರಾಯಣ ಸ್ವಾಗತಿಸಿದರು. ವಿ.ಭದ್ರಪ್ಪ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.