ADVERTISEMENT

ತೆರಿಗೆ ವಸೂಲಿಗಾರರ ವರ್ಗ: ನಿರ್ಧಾರ

​ಪ್ರಜಾವಾಣಿ ವಾರ್ತೆ
Published 25 ಜೂನ್ 2013, 19:39 IST
Last Updated 25 ಜೂನ್ 2013, 19:39 IST

ಬೆಂಗಳೂರು: `ಆಸ್ತಿ ತೆರಿಗೆ ಸಂಗ್ರಹದಲ್ಲಿ ಅವ್ಯವಹಾರ ತಡೆಗಟ್ಟಲು ಮೂರು ವರ್ಷಕ್ಕಿಂತ ಹೆಚ್ಚು ಅವಧಿಗೆ ಒಂದೇ ಸ್ಥಳದಲ್ಲಿ ಕಾರ್ಯ ನಿರ್ವಹಿಸುತ್ತಿರುವ ತೆರಿಗೆ ವಸೂಲಿಗಾರರ ವರ್ಗಾವಣೆಯೂ ಸೇರಿದಂತೆ ಹಲವು ಸುಧಾರಣಾ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ' ಎಂದು ಬಿಬಿಎಂಪಿ ಆಯುಕ್ತ ಎಂ.ಲಕ್ಷ್ಮೀನಾರಾಯಣ ಅವರು ತಿಳಿಸಿದರು.

ಮಂಗಳವಾರ ನಡೆದ ಬಿಬಿಎಂಪಿ ಸಾಮಾನ್ಯ ಸಭೆಯಲ್ಲಿ ತೆರಿಗೆ ಹಣದ ದುರ್ಬಳಕೆ ವಿಷಯವಾಗಿ ಸದಸ್ಯರು ಅಸಮಾಧಾನ ಹೊರಹಾಕಿದ ಹಿನ್ನೆಲೆಯಲ್ಲಿ ಈ ಸ್ಪಷ್ಟನೆ ನೀಡಿದರು. `ಬಿಬಿಎಂಪಿ ಕಂದಾಯ ವಿಭಾಗದಲ್ಲಿ 729 ತೆರಿಗೆ ವಸೂಲಿಗಾರರು ಇದ್ದು, ಒಂದೇ ಸ್ಥಳದಲ್ಲಿ ಮೂರು ವರ್ಷಕ್ಕಿಂತ ಅಧಿಕ ಕಾಲ ಇರುವವರ ಪಟ್ಟಿಯನ್ನು ತಯಾರಿಸಿ, ಅಂಥವರನ್ನು ವರ್ಗ ಮಾಡಲಾಗುತ್ತದೆ' ಎಂದು ಹೇಳಿದರು.

`ಆಸ್ತಿ ತೆರಿಗೆ ತುಂಬಿಸಿಕೊಳ್ಳಲು ಸುಮಾರು 12 ಬ್ಯಾಂಕ್‌ಗಳ ಜತೆ ಮಾತುಕತೆ ನಡೆಸಲಾಗಿದೆ. ಆನ್‌ಲೈನ್ ಮೂಲಕ ತೆರಿಗೆ ತುಂಬುವ ವ್ಯವಸ್ಥೆಯನ್ನು ಇನ್ನಷ್ಟು ಸರಳಗೊಳಿಸಲಾಗಿದ್ದು, ಹೊಸ ಸಾಫ್ಟ್‌ವೇರ್ ಬಳಕೆ ಮಾಡಲಾಗುತ್ತಿದೆ. ಕೇವಲ ತೆರಿಗೆ ಸಂಗ್ರಹ ಕೇಂದ್ರಗಳಾದ ಬಿಬಿಎಂಪಿ ವ್ಯಾಪ್ತಿಯ ಎಲ್ಲ 280 ನಾಗರಿಕ ಸಹಾಯ ಕೇಂದ್ರಗಳನ್ನು ಬಂದ್ ಮಾಡಲಾಗುತ್ತದೆ' ಎಂದು ಹೇಳಿದರು.

`ಚೆಕ್‌ಗಳ ಸ್ವೀಕೃತಿಯನ್ನು ಸ್ಥಗಿತಗೊಳಿಸಲಾಗಿದ್ದು, ಆನ್‌ಲೈನ್ ಅಲ್ಲದೆ ಪೇ ಆರ್ಡರ್ ಅಥವಾ ಡಿ.ಡಿ ಮೂಲಕ ತೆರಿಗೆ ತುಂಬಲು ಅವಕಾಶ ಕಲ್ಪಿಸಲಾಗಿದೆ' ಎಂದು ತಿಳಿಸಿದರು.

`ನಾಗರಿಕ ಸೇವಾ ಕೇಂದ್ರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸಿಬ್ಬಂದಿಯನ್ನು ಕಂದಾಯ ವಿಭಾಗದಲ್ಲಿ ಬೇರೆ ಕೆಲಸಗಳಿಗೆ ನಿಯೋಜನೆ ಮಾಡಲಾಗುವುದು. ಪ್ರತಿ ವಾರ್ಡ್‌ಗೆ ಒಂದರಂತೆ ಇರುವ ಬಿಬಿಎಂಪಿ ಕಚೇರಿಗಳಲ್ಲಿ ತೆರಿಗೆ ಸ್ವೀಕೃತಿ ಸೇರಿದಂತೆ ಎಲ್ಲ ಸೇವೆಗಳನ್ನು ಒದಗಿಸಲಾಗುವುದು' ಎಂದರು.

`ಸ್ವಯಂಘೋಷಿತ ಆಸ್ತಿ ತೆರಿಗೆ (ಎಸ್‌ಎಎಸ್) ಪದ್ಧತಿ ಅಡಿಯಲ್ಲಿ ಪ್ರತಿವರ್ಷವೂ ಆಸ್ತಿಯ ವಿವರ ಸಲ್ಲಿಕೆ ಪ್ರಕ್ರಿಯೆಯನ್ನು ತೆಗೆದು ಹಾಕಲಾಗಿದೆ. ಆಸ್ತಿಯಲ್ಲಿ ಏನಾದರೂ ಮಾರ್ಪಾಡುಗಳು ಇದ್ದರೆ ಆಗ ಮಾತ್ರ ವಿವರಣೆ ನೀಡಬೇಕು. ಈ ವಿಷಯವಾಗಿ ಬುಧವಾರವೇ ಸುತ್ತೋಲೆಯನ್ನು ಹೊರಡಿಸಲಾಗುವುದು' ಎಂದು ಹೇಳಿದರು.

`ಎರವಲು ಸೇವೆ ಮೇಲೆ ಬಂದವರನ್ನು ಇಲ್ಲವೆ ಹಂಗಾಮಿ ನೌಕರರನ್ನು ಇನ್ನುಮುಂದೆ ಹಣಕಾಸು ನಿರ್ವಹಣೆಗೆ ನಿಯೋಜನೆ ಮಾಡುವುದಿಲ್ಲ. ಕಂದಾಯ ವಿಭಾಗದಲ್ಲಿ ಬಿಬಿಎಂಪಿ ಕಾಯಂ ನೌಕರರಷ್ಟೇ ಕಾರ್ಯ ನಿರ್ವಹಿಸಲಿದ್ದಾರೆ' ಎಂದು ಮಾಹಿತಿ ನೀಡಿದರು.

`ಹೇರೋಹಳ್ಳಿ ಕಂದಾಯ ಉಪ ವಿಭಾಗದಲ್ಲಿ ಸಂಗ್ರಹಿಸಲಾದ ಆಸ್ತಿ ತೆರಿಗೆಯಲ್ಲಿ ರೂ1.66 ಲಕ್ಷ ಮೊತ್ತವನ್ನು ತೆರಿಗೆ ವಸೂಲಿಗಾರ ಎಂ.ಜೆ. ಕಾರ್ತಿಕ್ ದುರುಪಯೋಗ ಮಾಡಿಕೊಂಡಿದ್ದಾರೆ. ಅವರನ್ನು ಈಗಾಗಲೇ ಅಮಾನತು ಮಾಡಲಾಗಿದ್ದು, ತಾವರೆಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಸಂತೋಷ್ ಎಂಬ ಮತ್ತೊಬ್ಬ ನೌಕರನ ಮೇಲೂ ಕ್ರಮ ಕೈಗೊಳ್ಳಲಾಗಿದೆ' ಎಂದು ವಿವರಿಸಿದರು.

ಆಡಳಿತ ಪಕ್ಷದ ನಾಯಕ ಎನ್. ನಾಗರಾಜ್, `ಬಿಬಿಎಂಪಿ ವ್ಯಾಪ್ತಿಯಲ್ಲಿ ತೆರಿಗೆ ಸಂಗ್ರಹ ವಿಚಾರದಲ್ಲಿ ಮೇಲಿಂದ ಮೇಲೆ ಹಗರಣಗಳು ಹೊರಬೀಳುತ್ತಿದ್ದು, ಸಮಗ್ರ ತನಿಖೆ ನಡೆಯಬೇಕು. ಒಂದೇ ಕಡೆ ಬೇರೂರಿದ ಕಂದಾಯ ವಿಭಾಗದ ಸಿಬ್ಬಂದಿಯನ್ನು ಸರದಿ ಆಧಾರದ ಮೇಲೆ ವರ್ಗ ಮಾಡಬೇಕು' ಎಂದು ಒತ್ತಾಯಿಸಿದರು.

`ತೆರಿಗೆ ಸಂಗ್ರಹ ನಿರೀಕ್ಷಿತ ಪ್ರಮಾಣದಲ್ಲಿ ಆಗದೇ ಇರುವುದರಿಂದ ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳುವುದು ಕಷ್ಟವಾಗಿದೆ. ಜಲ ಮಂಡಳಿ ನಗರದ ಬಹುತೇಕ ರಸ್ತೆಗಳನ್ನು ಹಾಳು ಮಾಡಿದ್ದು, ರಸ್ತೆಗಳ ದುರಸ್ತಿಗೆ ಕೂಡಲೇ ಕ್ರಮ ಜರುಗಿಸಬೇಕಿದೆ' ಎಂದು ಜೆಡಿಎಸ್ ಮುಖಂಡ ಟಿ.ತಿಮ್ಮೇಗೌಡ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.