ಬೆಂಗಳೂರು: `ಬಿಬಿಎಂಪಿ ವ್ಯಾಪ್ತಿಯಲ್ಲಿ ಈವರೆಗೆ ತೆರಿಗೆ ಪಾವತಿಸದಿರುವ 3.50 ಲಕ್ಷ ಆಸ್ತಿದಾರರನ್ನು ಜಿಐಎಸ್ ವ್ಯವಸ್ಥೆಯಡಿ ಪತ್ತೆ ಹಚ್ಚಿ ನೋಟಿಸ್ ನೀಡಿ, ದಂಡಸಹಿತ ತೆರಿಗೆ ವಸೂಲಿ ಮಾಡಲಾಗುವುದು~ ಸಚಿವ ಆರ್. ಅಶೋಕ ಹೇಳಿದರು.
ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಕಾನೂನು ಕೋಶ, ತ್ಯಾಜ್ಯ ವಿಲೇವಾರಿ, ಎಂಜಿನಿಯರ್ ವಿಭಾಗದ ಕಾರ್ಯವೈಖರಿ ಕುರಿತು ಸೋಮವಾರ ಪರಿಶೀಲನೆ ನಡೆಸಿದ ನಂತರ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
`ಜಿಯಾಗ್ರಾಫಿಕಲ್ ಇನ್‌ಫರ್ಮೇಶನ್ ಸಿಸ್ಟಮ್ (ಜಿಐಎಸ್) ವ್ಯವಸ್ಥೆಯಡಿ ನಗರದಲ್ಲಿರುವ ಎಲ್ಲ ಆಸ್ತಿಗಳ ವಿವರವನ್ನು ಸಂಗ್ರಹಿಸಿ ದಾಖಲಿಸಲಾಗುವುದು. ತೆರಿಗೆ ಪಾವತಿಸದವರಿಗೆ ನೋಟಿಸ್ ನೀಡಲಾಗುವುದು. ಇದಕ್ಕಾಗಿ ಒಬ್ಬ ಅಧಿಕಾರಿಯನ್ನೇ ನೇಮಿಸಲಾಗುವುದು. ಇದರಿಂದ ರೂ 250 ಕೋಟಿ ಆದಾಯ ನಿರೀಕ್ಷಿಸಲಾಗಿದೆ~ ಎಂದರು.
`ತ್ಯಾಜ್ಯ ವಿಲೇವಾರಿ ಪ್ರಕ್ರಿಯೆಗೆ ಹೊಸ ಟೆಂಡರ್ ಆಹ್ವಾನಿಸಲು ನಿರ್ಧರಿಸಲಾಗಿದೆ. ಆದರೆ ಕೆಲ ಗುತ್ತಿಗೆದಾರರು ನ್ಯಾಯಾಲಯದ ಮೊರೆ ಹೋಗಿದ್ದಾರೆ. ಹಾಗಾಗಿ ತಡೆಯಾಜ್ಞೆ ನೆರವುಗೊಳಿಸುವ ನಿಟ್ಟಿನಲ್ಲಿ ಸೂಕ್ತ ಪ್ರಯತ್ನ ನಡೆಸುವಂತೆ ಕಾನೂನು ಕೋಶಕ್ಕೆ ಸೂಚಿಸಲಾಗಿದೆ~ ಎಂದು ಹೇಳಿದರು.
`ತ್ಯಾಜ್ಯ ವಿಲೇವಾರಿ ಮಾಡುವವರು ರಸ್ತೆಯಲ್ಲಿ ಬಿದ್ದಿರುವ ಸಣ್ಣ ಪ್ರಮಾಣದ ಮಣ್ಣು, ಕಲ್ಲಿನ ರಾಶಿಯನ್ನು ಸಾಗಿಸುವುದಿಲ್ಲ. ಇದರಿಂದ ಜನರಿಗೆ ತೊಂದರೆಯಾಗುತ್ತದೆ. 250 ಕೆ.ಜಿ.ಗಿಂತಲೂ ಕಡಿಮೆ ತೂಕದ ಕಲ್ಲು, ಮಣ್ಣು, ಇತರೆ ಸಾಮಗ್ರಿಗಳನ್ನು ತ್ಯಾಜ್ಯವೆಂದು ಪರಿಗಣಿಸುವಂತೆ ಕ್ರಮ ಕೈಗೊಳ್ಳಲಾಗುವುದು~ ಎಂದರು.
`ಗುತ್ತಿಗೆದಾರರು ಕಸವನ್ನು ತೆರವುಗೊಳಿಸದಿದ್ದಲ್ಲಿ ಅವರಿಗೆ ಮಾಸಿಕ ಬಿಲ್ ಪಾವತಿ ಮೊತ್ತದಲ್ಲಿ ಶೇ 1ರಷ್ಟು ಹಣವನ್ನು ದಂಡ ರೂಪದಲ್ಲಿ ಪಡೆಯಲಾಗುವುದು. ಮತ್ತೊಮ್ಮೆ ಇದೇ ದೂರು ಬಂದರೆ ಶೇ 10ರಷ್ಟರವರೆಗೆ ದಂಡ ವಸೂಲಿ ಮಾಡಲಾಗುವುದು. ಆ ನಂತರವೂ ಸಮರ್ಪಕವಾಗಿ ಕಾರ್ಯ ನಿರ್ವಹಿಸದಿದ್ದರೆ ಗುತ್ತಿಗೆಯನ್ನು ರದ್ದುಪಡಿಸಲಾಗುವುದು. ಒಂದೊಮ್ಮೆ ಗುತ್ತಿಗೆದಾರರು ನ್ಯಾಯಾಲಯದ ಮೊರೆ ಹೋಗುವುದಾದರೆ ಇಂತಿಷ್ಟು ಹಣವನ್ನು ಠೇವಣಿ ಇಡುವ ಬಗ್ಗೆಯೂ ಚಿಂತಿಸಲಾಗಿದೆ~ ಎಂದು ಮಾಹಿತಿ ನೀಡಿದರು.
`ತ್ಯಾಜ್ಯ ವಿಲೇವಾರಿ ಕಾರ್ಯವನ್ನು ಸಮರ್ಪಕವಾಗಿ ನಿರ್ವಹಿಸದ ಮೂವರು ಅಧಿಕಾರಿಗಳನ್ನು ಆ ಸ್ಥಾನದಿಂದ ತೆರವುಗೊಳಿಸಿ ಜವಾಬ್ದಾರಿಯುತವಲ್ಲದ ಕೆಲಸಕ್ಕೆ ನಿಯೋಜಿಸಲಾಗುವುದು. ನಗರದ ನಾಲ್ಕು ದಿಕ್ಕುಗಳಲ್ಲಿ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಿಸಲು ಉದ್ದೇಶಿಸಲಾಗಿದ್ದು, ಭೂಮಿ ಗುರುತಿಸುವ ಜವಾಬ್ದಾರಿಯನ್ನು ನಿವೃತ್ತ ಸಹಾಯಕ ಆಯುಕ್ತರು ಇಲ್ಲವೇ ತಹಶೀಲ್ದಾರ್‌ಗೆ ವಹಿಸಲಾಗುವುದು~ ಎಂದರು.
ತ್ಯಾಜ್ಯ ಸಾಗಣೆ ಹಣ ಉಳಿತಾಯ:
`ತ್ಯಾಜ್ಯವನ್ನು ವಿಂಗಡಣಾ ಕೇಂದ್ರಗಳಿಂದ ಸಂಗ್ರಹಿಸಿದ ಬಳಿಕ ಅದರ ಸಾಗಣೆಯನ್ನು ಖಾಸಗಿ ಸಂಸ್ಥೆಗೆ ವಹಿಸುವ ಸಂಬಂಧ ಟೆಂಡರ್ ಆಹ್ವಾನಿಸಲಾಗಿದೆ. ಈ ವ್ಯವಸ್ಥೆಯಲ್ಲಿ ಖಾಸಗಿ ಸಂಸ್ಥೆಯು ತ್ಯಾಜ್ಯವನ್ನು ವಿಲೇವಾರಿ ಘಟಕಕ್ಕೆ ಸಾಗಿಸಿ ಅದರ ಪುನರ್ ಬಳಕೆಗೆ ಮುಂದಾಗಲಿದೆ. ಇದರಿಂದ ಪಾಲಿಕೆಗೆ ತ್ಯಾಜ್ಯ ಸಾಗಣೆ ವೆಚ್ಚ ಉಳಿತಾಯವಾಗಲಿದೆ~ ಎಂದು ಸಚಿವರು ಹೇಳಿದರು.
`ನಗರದಲ್ಲಿ ಸುಮಾರು 25,000 ಕಿ.ಮೀ. ಉದ್ದದ ಮಾರ್ಗದಲ್ಲಿ ಅಕ್ರಮವಾಗಿ ಆಪ್ಟಿಕಲ್ ಫೈಬರ್ ಕೇಬಲ್ ಅಳವಡಿಸಿರುವ ಶಂಕೆ ಇದೆ. ಹಾಗಾಗಿ ಸಿಂಗಪುರದಿಂದ ವಿಶೇಷ ಯಂತ್ರವನ್ನು ತರಲಾಗುತ್ತಿದೆ. ಅಕ್ರಮವಾಗಿ ಅಳವಡಿಸಲಾದ ಕೇಬಲ್‌ಗಳನ್ನು ಈ ಯಂತ್ರದಿಂದ ಪತ್ತೆ ಹಚ್ಚಿ, ಅಕ್ರಮ ಕೇಬಲ್‌ಗಳನ್ನು ತೆರವುಗೊಳಿಸಲಾಗುವುದು~ ಎಂದರು.
`ಹಾಗೆಯೇ ಪಾಲಿಕೆಯು ವಿವಿಧ ಹಣಕಾಸು ಸಂಸ್ಥೆಗಳಿಂದ ಸಾಲ ಪಡೆದಿದ್ದು, ಕಡಿಮೆ ಬಡ್ಡಿ ದರದಲ್ಲಿ ಸಾಲ ಪಡೆದು ದುಬಾರಿ ಬಡ್ಡಿದರದ ಸಾಲವನ್ನು ಮರುಪಾವತಿ ಮಾಡುವಂತೆ ಸೂಚಿಸಲಾಗಿದೆ~ ಎಂದು ಹೇಳಿದರು.
ಒಬಾಮರಿಂದಲೂ ಒತ್ತಡ
`ಒಂದೊಮ್ಮೆ ಕೆಲವು ಅಧಿಕಾರಿಗಳನ್ನು ವರ್ಗಾವಣೆ ಮಾಡಿದರೆ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಅವರಿಂದಲೂ ಒತ್ತಡ ಹೇರುವವರು ಬಿಬಿಎಂಪಿಯಲ್ಲಿದ್ದಾರೆ!~.
ಪಾಲಿಕೆ ಅಧಿಕಾರಿಗಳು ಬೀರುವ ಒತ್ತಡದ ಬಗ್ಗೆ ಈ ರೀತಿಯ ಪ್ರತಿಕ್ರಿಯೆ ನೀಡಿದ್ದೂ ಬೇರಾರೂ ಅಲ್ಲ, ರಾಜ್ಯದ ಗೃಹ ಸಚಿವರು ಹಾಗೂ ಬೆಂಗಳೂರು ಉಸ್ತುವಾರಿ ಸಚಿವರೂ ಆಗಿರುವ ಆರ್. ಅಶೋಕ.
ಪಾಲಿಕೆಯಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, `ತ್ಯಾಜ್ಯ ವಿಲೇವಾರಿಯನ್ನು ಸಮರ್ಪಕವಾಗಿ ನಿರ್ವಹಿಸುವಲ್ಲಿ ವಿಫಲರಾಗಿರುವ ಮೂವರು ಅಧಿಕಾರಿಗಳನ್ನು ವರ್ಗಾಯಿಸಲಾಗುವುದು~ ಎಂದರು.
ಆ ಅಧಿಕಾರಿಗಳ ಹೆಸರು ಬಹಿರಂಗಪಡಿಸುವಂತೆ ಪ್ರಶ್ನಿಸಿದಾಗ, `ನಾನೇನಾದರೂ ಈಗಲೇ ಹೆಸರು ಹೇಳಿದರೆ ಸ್ವಲ್ಪ ಹೊತ್ತಿನಲ್ಲೇ ಒತ್ತಡ ಹೇರುವ ಕರೆಗಳು ಬರುತ್ತವೆ. ನನ್ನ ಮೇಲಿರುವವರಿಂದಲೂ ಒತ್ತಡ ಬರುತ್ತದೆ. ಹಾಗಾಗಿ ನಾನು ಹೆಸರು ಹೇಳುವುದಿಲ್ಲ. ವರ್ಗಾವಣೆ ಬಳಿಕ ಪಾಲಿಕೆಯೇ ಮಾಹಿತಿ ನೀಡಲಿದೆ~ ಎಂದು ಸಚಿವರು ಜಾರಿಕೊಂಡರು.
ಪತ್ರಿಕಾಗೋಷ್ಠಿಯುದ್ದಕ್ಕೂ ಹಲವು ಪ್ರಶ್ನೆಗಳಿಗೆ ಸಚಿವರು ನೀಡಿದ ಉತ್ತರ `ಗೊತ್ತಿಲ್ಲ~. ಬಿಬಿಎಂಪಿಯಲ್ಲಿ 4,000 ಮಂದಿ ಪೌರ ಕಾರ್ಮಿಕರ ನೇಮಕ ಪ್ರಕ್ರಿಯೆ ಬಗ್ಗೆ ಕೇಳಿದ ಪ್ರಶ್ನೆಗೆ, ಗೊತ್ತಿಲ್ಲ ಎಂದರು.
ಪಾಲಿಕೆ ಮಾಡಿರುವ ಒಟ್ಟು ಸಾಲವೆಷ್ಟು ಎಂದಾಗ, `ಗೊತ್ತಿಲ್ಲ, ಕೇಳಿ ಹೇಳುತ್ತೇನೆ~ ಎಂದರು. ಕೆಲ ನಿಮಿಷಗಳಲ್ಲೇ ಅಲ್ಲಿಗೆ ಬಂದ ಅಧಿಕಾರಿ, `ಪಾಲಿಕೆಯು ಒಟ್ಟು 3,000 ಕೋಟಿ ರೂಪಾಯಿ ಸಾಲ ಪಡೆದಿದೆ~ ಎಂದರು. ಆಗ ಕೋಪಗೊಂಡ ಸಚಿವರು, `ಅವರು ಕೇಳಿದ ಕೂಡಲೇ ಮಾಹಿತಿ ಕೊಡ್ತಿರಲ್ರೀ...~ ಎಂದು ಗದರಿದರು.
ಅಕ್ರಮ ಓಎಫ್‌ಸಿ ಕೇಬಲ ಪತ್ತೆಗೆ ಬಳಸಲಿರುವ ವಿಶೇಷ ಯಂತ್ರದ ಕಾರ್ಯವೈಖರಿ ಬಗ್ಗೆಯೂ ಗೊತ್ತಿಲ್ಲ ಎಂಬ ಉತ್ತರವನ್ನೇ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.