ADVERTISEMENT

ದಂಡುಪಾಳ್ಯ ತಂಡದ ಐವರಿಗೆ ಗಲ್ಲು

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2011, 19:30 IST
Last Updated 7 ಏಪ್ರಿಲ್ 2011, 19:30 IST

ಬೆಂಗಳೂರು: ನಗರದ ಬಸವನಗುಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಮಹಿಳೆಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದಂಡು ಪಾಳ್ಯ ತಂಡದ ಐದು ಮಂದಿಗೆ ಗಲ್ಲು ಶಿಕ್ಷೆ ವಿಧಿಸಿ ಇಲ್ಲಿನ ವಿಶೇಷ ನ್ಯಾಯಾಲಯ ಗುರುವಾರ ಆದೇಶ ನೀಡಿದೆ.

ವೆಂಕಟೇಶ. ದೊಡ್ಡಹನುಮ, ನಲ್ಲತಿಮ್ಮ, ಮುನಿಕೃಷ್ಣ ಮತ್ತು ಲಕ್ಷ್ಮಿ ಶಿಕ್ಷೆಗೆ ಗುರಿಯಾದವರು. ಈ ಐದೂ ಮಂದಿಗೆ ಈ ಹಿಂದೆ ಹದಿನಾಲ್ಕು ಕೊಲೆ ಪ್ರಕರಣದಲ್ಲಿ ಗಲ್ಲು ಶಿಕ್ಷೆಯಾಗಿದ್ದು ಇದು ಹದಿನೈದನೇ ಪ್ರಕರಣವಾಗಿದೆ.

2000ನೇ ಸಾಲಿನ ಅಕ್ಟೋಬರ್ 22ರಂದು ಮಂಜುಳಾ ಎಂಬುವವರನ್ನು ನಗರದ ಡಿವಿಜಿ ರಸ್ತೆಯ ಅವರ ಮನೆಯಲ್ಲೇ ಈ ತಂಡ ಕೊಲೆ ಮಾಡಿತ್ತು. ಮಂಜುಳಾ ಅವರ ಪತಿ ವಾಯು ವಿಹಾರಕ್ಕೆಂದು ಲಾಲ್‌ಬಾಗ್‌ಗೆ ಹೋದ ನಂತರ ಮನೆಯೊಳಗೆ ನುಗ್ಗಿದ್ದ ತಂಡ ಭೀಕರವಾಗಿ ಅವರನ್ನು ಹತ್ಯೆಗೈದಿತ್ತು, ಈ ಬಗ್ಗೆ ಬಸವನಗುಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಬೆಂಗಳೂರು ನಗರ ಸೇರಿದಂತೆ ವಿವಿಧ ನಗರಗಳಲ್ಲಿ ನಡೆದ ಮೂವತ್ತಕ್ಕೂ ಹೆಚ್ಚು ಕೊಲೆ ಪ್ರಕರಣಗಳಲ್ಲಿ ಈ ತಂಡ ಭಾಗಿಯಾಗಿತ್ತು. ಒಂಟಿ ಮಹಿಳೆಯರು ಇರುವ ಮನೆಯನ್ನು ದುಷ್ಕರ್ಮಿಗಳು  ಗುರುತಿಸುತ್ತಿದ್ದರು. ಮನೆಯೊಳಗೆ ನುಗ್ಗುತ್ತಿದ್ದ ಅವರು ಕತ್ತು ಸೀಳಿ ಕೊಲೆ ಮಾಡಿ ಆಭರಣ, ಹಣ ದೋಚುತ್ತಿದ್ದರು. ಈ ತಂಡದ ಕೃತ್ಯವನ್ನು ಭೇದಿಸಲು ವಿಶೇಷ ತಂಡವನ್ನು ರಚಿಸಲಾಗಿತ್ತು.

ಅಪಘಾತ-ಶಿಕ್ಷೆ: ಪಾದಚಾರಿಗೆ ಕಾರು ಡಿಕ್ಕಿ ಹೊಡೆಸಿ ಆತನ ಸಾವಿಗೆ ಕಾರಣನಾಗಿದ್ದ ಚಾಲಕನಿಗೆ ನಗರದ ಐದನೇ ಸಂಚಾರಿ ಏಳು ತಿಂಗಳ ಕಠಿಣ ಶಿಕ್ಷೆ ಮತ್ತು ಏಳು ಸಾವಿರ ರೂಪಾಯಿ ದಂಡ ವಿಧಿಸಿ ಆದೇಶ ನೀಡಿದೆ.

ಜಯಮಹಲ್ ಬಡಾವಣೆಯ ನಿವಾಸಿ ರಘುನಾಥ್ ಪಾಸ್ವಾನ್ ಶಿಕ್ಷೆಗೆ ಗುರಿಯಾದವರು. ಹಲಸೂರುಗೇಟ್ ಪೊಲೀಸ್ ಠಾಣೆ ಸಮೀಪ 2009, ನ 17ರಂದು ರಸ್ತೆ ದಾಟುತ್ತಿದ್ದ ಹನುಮಂತಪ್ಪ ಅವರಿಗೆ ಕಾರು ಡಿಕ್ಕಿ ಹೊಡೆಸಿದ್ದ ರಘುನಾಥ್ ವಾಹನ ಸಮೇತ ಪರಾರಿಯಾಗಿದ್ದರು.  ಆರೋಪಿಯನ್ನು ಪತ್ತೆ ಮಾಡಿದ್ದ ಹಲಸೂರುಗೇಟ್ ಸಂಚಾರ ಠಾಣೆಯ ಇನ್‌ಸ್ಪೆಕ್ಟರ್ ಪ್ರಭಾಕರ ಬಯರಿ ಅವರು ಆತನ ವಿರುದ್ಧ ಆರೋಪಪಟ್ಟಿ ಸಲ್ಲಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.