ADVERTISEMENT

ದರೋಡೆ ಪ್ರಕರಣ: ಜಮೀರ್ ತನಿಖೆಗೆ ತಡೆ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2011, 19:30 IST
Last Updated 3 ಮಾರ್ಚ್ 2011, 19:30 IST

ಬೆಂಗಳೂರು: ಕೆಂಗೇರಿ ಸಮೀಪ ಕಳೆದ ಅ.30ರಂದು ನಡೆದಿದ್ದ 50 ಲಕ್ಷ ರೂಪಾಯಿ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೆಡಿಎಸ್ ಶಾಸಕ ಜಮೀರ್ ಅಹಮ್ಮದ್ ಖಾನ್ ಅವರ ವಿರುದ್ಧ ದಾಖಲಾದ ದೂರಿನ ಅನ್ವಯ ನಡೆಯುತ್ತಿರುವ ಮುಂದಿನ ಪ್ರಕ್ರಿಯೆಗೆ ಹೈಕೋರ್ಟ್ ಗುರುವಾರ ತಡೆ ನೀಡಿದೆ.

ಫೆ. 3ರಂದು ತಮ್ಮ ವಿರುದ್ಧ ತಯಾರಿಸಿದ್ದ ಆರೋಪಪಟ್ಟಿ ರದ್ದತಿಗೆ ಕೋರಿ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಕೆ.ಎನ್. ಕೇಶವನಾರಾಯಣ ನಡೆಸಿದರು.ತಾವು ಯಾವುದೇ ತಪ್ಪು ಎಸಗಿಲ್ಲ. ರಾಜಕೀಯ ದುರುದ್ದೇಶದಿಂದ ತಮ್ಮ ವಿರುದ್ಧ ಈ ಪ್ರಕರಣ ದಾಖಲು ಮಾಡಲಾಗಿದೆ ಎಂದು ಅರ್ಜಿಯಲ್ಲಿ ಖಾನ್ ತಿಳಿಸಿದ್ದಾರೆ.

ಚನ್ನಪಟ್ಟಣದ ಅಕ್ಕಿ ವ್ಯಾಪಾರಿ ಜಿಯಾವುಲ್ಲಾ ಖಾನ್ ಗೋರಿ ಎಂಬುವವರು ಚನ್ನಪಟ್ಟಣದಿಂದ ಬೆಂಗಳೂರಿಗೆ ಕಾರಿನಲ್ಲಿ ಬರುತ್ತಿದ್ದರು. ಅವರನ್ನು ಇನ್ನೊಂದು ಕಾರಿನಲ್ಲಿ ಹಿಂಬಾಲಿಸಿದ ಖಾನ್ ಹಾಗೂ ಇತರರು ಕೆಂಗೇರಿ ಬಳಿಯ ಜಯರಾಮ್‌ದಾಸ್ ಕೈಗಾರಿಕಾ ಪ್ರದೇಶದಲ್ಲಿ ಅಡ್ಡಗಟ್ಟಿದ್ದರು. ಮಾರಕಾಸ್ತ್ರಗಳಿಂದ ಜಿಯಾವುಲ್ಲಾ ಅವರನ್ನು ಬೆದರಿಸಿ ಹಣ ದರೋಡೆ ಮಾಡಿ ಪರಾರಿಯಾಗಿದ್ದರು ಎಂಬುದು ಆರೋಪ. ಈ ಪ್ರಕರಣದಲ್ಲಿ ಖಾನ್ 13ನೇ ಆರೋಪಿಯಾಗಿದ್ದಾರೆ.

ಮೈಲಾರಪ್ಪ: ವಿಚಾರಣೆ ಮುಂದೂಡಿಕೆ

ಬೆಂಗಳೂರು ವಿ.ವಿ ದೂರ ಶಿಕ್ಷಣ ವಿಭಾಗದ ನಿರ್ದೇಶಕರಾಗಿದ್ದ ಪ್ರೊ.ಬಿ.ಸಿ. ಮೈಲಾರಪ್ಪ ಅವರ ವಿರುದ್ಧ ವಿಶ್ವವಿದ್ಯಾಲಯದ ಅಕಾಡೆಮಿ ಕೌನ್ಸಿಲ್‌ನ ಮಾಜಿ ಸದಸ್ಯ ಎಲ್.ವಾಸುದೇವಮೂರ್ತಿ ಅವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ಗುರುವಾರ ಮುಂದೂಡಿದೆ.

‘ಮೈಲಾರಪ್ಪನವರು ನಿರ್ದೇಶಕರಾಗಿದ್ದ ವೇಳೆ ಕೋಟ್ಯಂತರ ರೂಪಾಯಿ ಅವ್ಯವಹಾರ ಮಾಡಿರುವ ಆರೋಪ ಹೊತ್ತ ಹಿನ್ನೆಲೆಯಲ್ಲಿ, ಈ ವಿವಾದವನ್ನು ಸಿಐಡಿಗೆ ಒಪ್ಪಿಸಿ ವಿವಿಯ ಸಿಂಡಿಕೇಟ್ 2007ರಲ್ಲಿ ನಿರ್ಣಯ ತೆಗೆದುಕೊಂಡಿತ್ತು. ಅಲ್ಲಿಯವರೆಗೆ ಅವರನ್ನು ಅಮಾನತಿನಲ್ಲಿ ಇಡುವಂತೆಯೂ ಸೂಚಿಸಲಾಗಿತ್ತು.

ಆದರೆ ಈ ನಿರ್ಣಯವನ್ನು 2008ರಲ್ಲಿ ಉನ್ನತ ಶಿಕ್ಷಣ ಸಚಿವರು ರದ್ದು ಮಾಡಿದ್ದಾರೆ. ಅಷ್ಟೇ ಅಲ್ಲದೇ ಮೈಲಾರಪ್ಪ ವಿರುದ್ಧ ದಾಖಲಾಗಿರುವ ಪ್ರಥಮ ಮಾಹಿತಿ ವರದಿಯನ್ನು ಕೂಡ ಸಚಿವರು ಹಿಂದಕ್ಕೆ ಪಡೆದಿದ್ದಾರೆ. ಇದು ಸರಿಯಲ್ಲ’ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

ಈ ಬಗ್ಗೆ ಹೆಚ್ಚಿನ ಮಾಹಿತಿ ಕೇಳಿದ ಮುಖ್ಯ ನ್ಯಾಯಮೂರ್ತಿ ಜೆ.ಎಸ್.ಕೇಹರ್ ಹಾಗೂ ನ್ಯಾಯಮೂರ್ತಿ ಎ.ಎಸ್.ಬೋಪಣ್ಣ ಅವರನ್ನು ಒಳಗೊಂಡ ವಿಭಾಗೀಯ ಪೀಠ ವಿಚಾರಣೆ ಮುಂದೂಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.