ADVERTISEMENT

ದರೋಡೆ ಯತ್ನ: ದುಷ್ಕರ್ಮಿಗಳನ್ನು ಹಿಡಿದ ಜನರು

​ಪ್ರಜಾವಾಣಿ ವಾರ್ತೆ
Published 14 ಜುಲೈ 2013, 19:27 IST
Last Updated 14 ಜುಲೈ 2013, 19:27 IST

ಬೆಂಗಳೂರು: ನಗರದ ಮ್ಯೂಸಿಯಂ ರಸ್ತೆಯಲ್ಲಿ ಶನಿವಾರ ರಾತ್ರಿ ವ್ಯಕ್ತಿಯೊಬ್ಬರ ಎಡಗೈಗೆ 12ಕ್ಕೂ ಹೆಚ್ಚು ಬಾರಿ ಚಾಕುವಿನಿಂದ ಇರಿದು ದರೋಡೆ ಮಾಡಲೆತ್ನಿಸಿದ ದುಷ್ಕರ್ಮಿಗಳನ್ನು ಸಾರ್ವಜನಿಕರೇ ಹಿಡಿದು ಕಬ್ಬನ್‌ಪಾರ್ಕ್ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.

ಅಶೋಕನಗರದ ಹರೀಶ್ (19) ಮತ್ತು ಕಾನೂನಿನ ಎದುರು ಸಂಘರ್ಷಕ್ಕೆ ಒಳಗಾದ ಇಬ್ಬರು ಈ ಕೃತ್ಯ ಎಸಗಿದ್ದು, ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕ್ವೀನ್ಸ್ ವೃತ್ತದ ಹೋಟೆಲ್ ಒಂದರಲ್ಲಿ ಕೆಲಸ ಮಾಡುವ ಮಣಿಪುರ ಮೂಲದ ಸ್ಯಾಂಗ್ಫೊ , ರಾತ್ರಿ ಒಂಬತ್ತು ಗಂಟೆ ಸುಮಾರಿಗೆ ಈಜಿಪುರದಿಂದ ಬಿಎಂಟಿಸಿ ಬಸ್‌ನಲ್ಲಿ ಬಂದು ರೆಸಿಡೆನ್ಸಿ ರಸ್ತೆಯಲ್ಲಿ ಇಳಿದರು. ನಂತರ ಅವರು ಮ್ಯೂಸಿಯಂ ರಸ್ತೆ ಮಾರ್ಗವಾಗಿ ಹೋಟೆಲ್‌ಗೆ ನಡೆದು ಹೋಗುತ್ತಿದ್ದಾಗ ಅವರನ್ನು ಅಡ್ಡಗಟ್ಟಿದ ಆರೋಪಿಗಳು ಹಣ ದೋಚಲು ಯತ್ನಿಸಿದ್ದಾರೆ. ಅವರು ಪ್ರತಿರೋಧ ತೋರಿದಾಗ ಆರೋಪಿಗಳು ಕೈಗೆ ಚಾಕುವಿನಿಂದ ಇರಿದಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಈ ವೇಳೆ ಸ್ಯಾಂಗ್ಫೊ ಅವರ ಚೀರಾಟ ಕೇಳಿದ ಸಾರ್ವಜನಿಕರು ಆರೋಪಿಗಳನ್ನು ಹಿಡಿದು ಠಾಣೆಗೆ ಕರೆದುಕೊಂಡು ಬಂದರು. ಗಾಯಾಳು ಸ್ಯಾಂಗ್ಪೊ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.