
ಬೆಂಗಳೂರು: `ದಲಿತರು ಸಕ್ರಿಯವಾಗಿ ರಾಜಕಾರಣದಲ್ಲಿ ತೊಡಗಿಸಿಕೊಳ್ಳುವ ಮೂಲಕ ರಾಜಕೀಯ ಅಧಿಕಾರ ಪಡೆಯಬೇಕು. ಆಗ ದಲಿತರ ಅಭಿವೃದ್ಧಿ ಸಾಧ್ಯ ಎಂದು' ಲೋಕ ಜನಶಕ್ತಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷೆ ಪ್ರಭಾವತಿ ಹೇಳಿದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿಯು ದಲಿತ ಚಳವಳಿಗಾರ ಪ್ರೊ.ಬಿ.ಕೃಷ್ಣಪ್ಪ ಅವರ ಜನ್ಮದಿನದ ಅಂಗವಾಗಿ `ದಲಿತರು ಮತ್ತು ರಾಜಕಾರಣ ಹಾಗೂ ಮುಂದಿನ ಸವಾಲುಗಳು' ವಿಷಯ ಕುರಿತು ಭಾನುವಾರ ನಗರದಲ್ಲಿ ಆಯೋಜಿಸಿದ್ದ ಚರ್ಚಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, `ದಲಿತರು ರಾಜಕೀಯ ಅಧಿಕಾರ ಪಡೆಯುವಲ್ಲಿ ಹಣ ಬಲ, ತೋಳ್ಬಲದ ಸವಾಲನ್ನು ಎದುರಿಸಬೇಕಾಗುತ್ತದೆ. ಅದನ್ನು ಮೀರಿ ಜನಬಲದ ಸಹಕಾರದಿಂದ ಅವರು ಅಧಿಕಾರಕ್ಕೆ ಬರಬೇಕು. ಅಂಬೇಡ್ಕರ್ ಆಶಯದ ಸಮ ಸಮಾಜ ನಿರ್ಮಾಣವಾಗಬೇಕಾದರೆ ಚಳವಳಿಗಳು ಜೀವಂತವಾಗಿರಬೇಕು' ಎಂದು ಅವರು ನುಡಿದರು.
`ದಲಿತ ಸಮುದಾಯದಿಂದ ಆಯ್ಕೆಯಾದವರು ದಲಿತರ ಏಳಿಗೆ, ದಲಿತ ಮಹಿಳೆಯರ ಮೇಲಿನ ದೌರ್ಜನ್ಯವನ್ನು ತಡೆಯುವಲ್ಲಿ ಜವಾಬ್ದಾರಿಯುತವಾಗಿ ಕಾರ್ಯ ನಿರ್ವಹಿಸಬೇಕು. ಮಹಿಳೆಯರು ಹೆಚ್ಚು ಹೆಚ್ಚು ರಾಜಕೀಯದಲ್ಲಿ ಭಾಗವಹಿಸುವಂತೆ ಮಾಡಲು ಅವರಲ್ಲಿ ಅರಿವು ಮೂಡಿಸಬೇಕು' ಎಂದು ಅವರು ಹೇಳಿದರು.
ವಿಧಾನ ಪರಿಷತ್ ಮಾಜಿ ಸದಸ್ಯ ಎಲ್.ಹನುಮಂತಯ್ಯ ಮಾತನಾಡಿ, `ದಲಿತ ಸಮುದಾಯದ ವ್ಯಕ್ತಿ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲ್ಲುವ ಪರಿಸ್ಥಿತಿ ನಿರ್ಮಾಣವಾಗಬೇಕು. ದಲಿತರು ರಾಜ್ಯದ ರಾಜಕಾರಣಬದಲಿಸುವ ಶಕ್ತಿಯಾಗಿ ಬೆಳೆಯಬೇಕು' ಎಂದರು.
ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಆರ್.ಮೋಹನ್‌ರಾಜ್, ಪದಾಧಿಕಾರಿಗಳಾದ ಗ್ಯಾನಪ್ಪ ಬಡಿಗೇರ್, ಡಿ. ಸಿದ್ದರಾಜು ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.