ADVERTISEMENT

ದಸರಾ ಕ್ರೀಡಾ ಕೂಟ ಆರಂಭ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2011, 19:05 IST
Last Updated 15 ಸೆಪ್ಟೆಂಬರ್ 2011, 19:05 IST

ಬೆಂಗಳೂರು:  `ಕ್ರೀಡೆಯಲ್ಲಿ ಪಾಲ್ಗೊಳ್ಳುವುದಿಂದ ದೈಹಿಕ ಸಾಮರ್ಥ್ಯ ಮತ್ತು ಸ್ಪರ್ಧಾ ಮನೋಭಾವವು ಇಮ್ಮಡಿಯಾಗುತ್ತದೆ. ಇದರಿಂದ ವ್ಯಕ್ತಿ ಉತ್ತಮ ಬೌದ್ದಿಕ ಮತ್ತು ಸಾಮಾಜಿಕ ಜೀವನವನ್ನು ರೂಪಿಸಿಕೊಳ್ಳಬಹುದು~ ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಎಂ.ಕೆ.ಅಯ್ಯಪ್ಪ ಅಭಿಪ್ರಾಯಪಟ್ಟರು.

ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿಯು ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಸಹಯೋಗದೊಂದಿಗೆ ನಗರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ನಗರ ವಿಭಾಗ ಮಟ್ಟದ ದಸರಾ ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು.

`ಕ್ರೀಡಾಕೂಟಗಳು ಜೀವನದ ಬೆಳವಣಿಗೆಯಲ್ಲಿ ಮಹತ್ತರ ಪಾತ್ರ ವಹಿಸುವುದರಿಂದ ಯುವಕರು ಹೆಚ್ಚು ಉತ್ಸುಹಕರಾಗಿ ಭಾಗವಹಿಸಬೇಕು~ ಎಂದು ಕರೆ ನೀಡಿದರು.

ನಗರ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸಿ.ಮರಿಯಪ್ಪ, `ಯುವಜನಾಂಗದಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು ಪ್ರದರ್ಶಿಸಲು ಇಂತಹ ಕ್ರೀಡಾಕೂಟಗಳು ವೇದಿಕೆಯಾಗಿದ್ದು, ಸ್ಪರ್ಧಿಗಳು ಇನ್ನೂ ಉನ್ನತ ಅವಕಾಶ ಪಡೆಯಲಿ~ ಎಂದು ಹಾರೈಸಿದರು.

ಚಂದಾಪುರದ ಚಿನ್ಮಯ ಯುವಜನ ಸಂಘ ಮತ್ತು ಟಿ.ನರಸೀಪುರ ಬಡಾವಣೆಯ ಮಾರ್ಗದರ್ಶಿ ಯುವತಿ ಮಂಡಳಿಗೆ 2009-10ನೇ ಸಾಲಿನ ಸಾಂಘಿಕ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರಶಸ್ತಿಯು 10 ಸಾವಿರ ರೂಪಾಯಿಯನ್ನು ಒಳಗೊಂಡಿದೆ. ಕೂಟದಲ್ಲಿ ಸುಮಾರು 300 ಕ್ರೀಡಾಳುಗಳು ಭಾಗವಹಿಸಿದ್ದರು.

ಪಾಲಿಕೆಯ ಸದಸ್ಯ ರಂಗಣ್ಣ, ಕರ್ನಾಟಕ ಅಥ್ಲೆಟಿಕ್ ಸಂಸ್ಥೆಯ ಕಾರ್ಯದರ್ಶಿ ಕೆ.ಸತ್ಯನಾರಾಯಣ, ಯುವಜನ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಸಿ.ಯು.ಈರಪ್ಪ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.