ADVERTISEMENT

ದಾನಿಗಳಿಂದ ದೇಣಿಗೆ ಸಂಗ್ರಹಿಸಲು ತೀರ್ಮಾನ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2011, 19:30 IST
Last Updated 22 ಸೆಪ್ಟೆಂಬರ್ 2011, 19:30 IST

ಬೆಂಗಳೂರು: ಕ್ಯಾನ್ಸರ್‌ಪೀಡಿತ ಬಡ ಮಕ್ಕಳ ಚಿಕಿತ್ಸೆಗಾಗಿ 25 ಕೋಟಿ ರೂಪಾಯಿಗಳ ನಿಧಿ ಸ್ಥಾಪಿಸಿರುವ ಸರ್ಕಾರ, ಮುಂದಿನ ಮೂರು ತಿಂಗಳಲ್ಲಿ ಈ ನಿಧಿಗೆ ದಾನಿಗಳಿಂದ ನೆರವು ಸಂಗ್ರಹಿಸಲು ನಿರ್ಧರಿಸಿದೆ.

ನಗರದ ಕಿದ್ವಾಯಿ ಗಂಥಿ ಸಂಸ್ಥೆಯಲ್ಲಿ ಗುರುವಾರ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ಪ್ರಕಟಿಸಿದ ವೈದ್ಯಕೀಯ ಶಿಕ್ಷಣ ಸಚಿವ ಎಸ್.ಎ. ರಾಮದಾಸ್, ಕ್ಯಾನ್ಸರ್‌ಪೀಡಿತ ಬಡ ಮಕ್ಕಳ ಕಿಮೋಥೆರಪಿ ಚಿಕಿತ್ಸಾ ವೆಚ್ಚವನ್ನು ಭರಿಸಲು ಪೋಷಕರಿಗೆ ಸಾಧ್ಯವಾಗುತ್ತಿಲ್ಲ. ಅಂತಹ ಕುಟುಂಬಗಳ ನೆರವಿಗೆ ಧಾವಿಸುವ ಉದ್ದೇಶದಿಂದ ಈ ನಿಧಿ ಸ್ಥಾಪಿಸಲಾಗಿದೆ ಎಂದು ಹೇಳಿದರು.

ನಿಧಿಗೆ ಪ್ರಾರಂಭಿಕ ಕೊಡುಗೆಯಾಗಿ ತಾವು ಟ್ರಸ್ಟಿಯಾಗಿರುವ `ಆಸರೆ~ ಸಂಸ್ಥೆಯಿಂದ ಐದು ಲಕ್ಷ ರೂಪಾಯಿ ಚೆಕ್ ಅನ್ನು ಸಚಿವರು ಸಲ್ಲಿಸಿದರು. ಕಳೆದ ನಾಲ್ಕು ವರ್ಷಗಳಿಂದ ಸಂಸ್ಥೆಯು ಬಡ ಜನರ ನೆರವಿಗೆ ಸ್ಪಂದಿಸುತ್ತಿದೆ ಎಂದು ಸಚಿವರು ತಿಳಿಸಿದರು.

ಚಿಕಿತ್ಸಾ ಕೇಂದ್ರ ಸ್ಥಾಪನೆ:
ಮಕ್ಕಳನ್ನು ಕಾಡುತ್ತಿರುವ ರಕ್ತಹೀನತೆ ಕಾಯಿಲೆ `ತ್ಯಾಲಸೇಮಿಯಾ~ ಚಿಕಿತ್ಸೆಗಾಗಿ ನಗರದ ಇಂದಿರಾಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆಯಲ್ಲಿ ಇಟಲಿಯ `ಕ್ಯೂರ್-2 ಚಿಲ್ಡ್ರನ್~ ಸಂಸ್ಥೆಯೊಂದಿಗೆ ವಿಶೇಷ ಚಿಕಿತ್ಸಾ ಕೇಂದ್ರವನ್ನು ಕೂಡ ಸ್ಥಾಪಿಸಲು ನಿರ್ಧರಿಸಲಾಗಿದೆ ಎಂದು ಅವರು ಪ್ರಕಟಿಸಿದರು.

ರಾಜ್ಯದಲ್ಲಿ ಈ ಕಾಯಿಲೆಯಿಂದ ಬಳಲುತ್ತಿರುವ ಎರಡು ಸಾವಿರ ಮಂದಿ ಮಕ್ಕಳಿದ್ದಾರೆ. ಈ ಮಕ್ಕಳ ಚಿಕಿತ್ಸೆಗೆ ಪ್ರತಿ ತಿಂಗಳು ಎರಡು ಸಾವಿರ ರೂಪಾಯಿ ಖರ್ಚಾಗಲಿದೆ. ಈ ಕಾಯಿಲೆಗೆ ಪ್ರತಿ ಮೂರು ಅಥವಾ ನಾಲ್ಕು ವಾರಗಳಿಗೆ ಬದಲಿ ರಕ್ತವನ್ನು ನೀಡಬೇಕು.

ಜತೆಗೆ ಕಬ್ಬಿಣದ ಅಂಶವನ್ನು ಕಡಿಮೆ ಮಾಡಲು ಔಷಧಿ ನೀಡಬೇಕು. ರೋಗಿಯ ಜೀವಿತಾವಧಿವರೆಗೆ ಈ ಚಿಕಿತ್ಸೆ ನೀಡುವ ಅಗತ್ಯವಿದೆ ಎಂದು ಸಚಿವರು ವಿವರಿಸಿದರು. ಈ ಕಾಯಿಲೆಯನ್ನು ಗುಣಪಡಿಸಲು ಅಸ್ತಿ ಮಜ್ಜೆಯ ಕಸಿ ಮಾಡಬೇಕಾಗುತ್ತದೆ.

ಇದಕ್ಕೆ ಸುಮಾರು 5ರಿಂದ 7 ಲಕ್ಷ ರೂಪಾಯಿ ಖರ್ಚಾಗಲಿದೆ ಎಂದ ಅವರು, ಈ ವಿಶೇಷ ಚಿಕಿತ್ಸಾ ಕೇಂದ್ರ ಸ್ಥಾಪನೆಗೆ ಎಷ್ಟು ನೆರವು ನೀಡಬೇಕು ಎಂಬುದರ ಬಗ್ಗೆ ಆಡಳಿತ ಮಂಡಳಿ ಸಭೆಯಲ್ಲಿ ನಿರ್ಧರಿಸಲಾಗುವುದು.
ಈ ಸಂಬಂಧ ಇಟಲಿ ಕಂಪೆನಿಯ ಜತೆ ಮಾತುಕತೆ ನಡೆದಿದ್ದು, ಅದರೊಂದಿಗೆ ಸರ್ಕಾರ ಒಪ್ಪಂದಕ್ಕೆ ಸಹಿ ಹಾಕಲಿದೆ ಎಂದು ಹೇಳಿದರು.

ಜಿಲ್ಲಾಸ್ಪತ್ರೆಗಳಲ್ಲಿ ಜನರಿಕ್ ಡ್ರಗ್ ಹೌಸ್ ಸ್ಥಾಪನೆ:
ರಾಜ್ಯದ ಎಲ್ಲಾ ಜಿಲ್ಲಾಸ್ಪತ್ರೆಗಳಲ್ಲಿ ಒಂದೇ ಕಡೆ ಜನರಿಕ್ ಡ್ರಗ್ ಹೌಸ್, ವಿಶ್ರಾಂತಿ ಕೊಠಡಿ ಹಾಗೂ ಫುಡ್ ಕೋರ್ಟ್‌ಗಳನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ. ಬೆಂಗಳೂರಿನ ವಿಕ್ಟೋರಿಯಾ, ಬೌರಿಂಗ್, ವಾಣಿವಿಲಾಸ್ ಸೇರಿದಂತೆ ಆರು ಆಸ್ಪತ್ರೆಗಳಲ್ಲಿ ಈ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ.

ಆಸ್ಪತ್ರೆಯ ಹಾಸಿಗೆಗಳ ಸಂಖ್ಯೆಯ ಆಧಾರದ ಮೇರೆಗೆ ಡ್ರಗ್ ಹೌಸ್, ವಿಶ್ರಾಂತಿ ಕೊಠಡಿ ಹಾಗೂ ಫುಡ್ ಕೋರ್ಟ್‌ಗಳ ವಿನ್ಯಾಸಕ್ಕೆ ಅನುಮೋದನೆ ನೀಡಿ ಹಣ ಬಿಡುಗಡೆ ಮಾಡಲಾಗುವುದು ಎಂದು ಸಚಿವ ರಾಮದಾಸ್ ತಿಳಿಸಿದರು.

ಮಗುವೊಂದರ ಸಾವಿಗೆ ಕಾರಣರಾದ ವಾಣಿವಿಲಾಸ ಆಸ್ಪತ್ರೆಯ ವೈದ್ಯ ಡಾ. ನರಸಿಂಹಮೂರ್ತಿ ವಿರುದ್ಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗಿದೆ. ಕೆಲಸದ ಅವಧಿಯಲ್ಲಿ ಈ ವೈದ್ಯ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡಿರುವುದು ದೃಢಪಟ್ಟಿದ್ದು, ಹಾಜರಾತಿ ಪುಸ್ತಕದಲ್ಲಿ ಸಹಿ ತಿದ್ದಲು ಕೂಡ ಪ್ರಯತ್ನ ನಡೆಸಿದ್ದಾರೆ.

ಇಲಾಖೆ ತನಿಖೆಯಿಂದಲೂ ಲೋಪವೆಸಗಿರುವುದು ದೃಢಪಟ್ಟಿರುವುದರಿಂದ ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗುವುದು ಎಂದರು. ಇದೇ ಸಂದರ್ಭದಲ್ಲಿ ಸಚಿವರು ತಮ್ಮ ಇಲಾಖೆಯ ಒಂದು ವರ್ಷದ ಸಾಧನೆ ಹಾಗೂ ಕಾರ್ಯ ಯೋಜನೆಯ ಕೈಪಿಡಿಯನ್ನು ಬಿಡುಗಡೆ ಮಾಡಿದರು.

ವಿಶ್ವವಿದ್ಯಾಲಯ ಸ್ಥಾಪನೆಗೆ ನಿರ್ಧಾರ
ರಾಜ್ಯದಲ್ಲಿ ಪ್ಯಾರಾ ಮೆಡಿಕಲ್ ಹಾಗೂ ನರ್ಸಿಂಗ್ ವಿಶ್ವವಿದ್ಯಾಲಯ ಸ್ಥಾಪನೆಗೆ ಶೀಘ್ರ ಚಾಲನೆ ನೀಡಲಾಗುವುದು ಎಂದು ಸಚಿವ ಎಸ್.ಎ. ರಾಮದಾಸ್ ತಿಳಿಸಿದರು.

ವಿಶ್ವವಿದ್ಯಾಲಯ ಸ್ಥಾಪನೆಗೆ ಕರಡು ಪ್ರತಿ ಸಿದ್ಧವಿದೆ. ನವೆಂಬರ್‌ವರೆಗೂ ಕಾಯದೆ ಸುಗ್ರೀವಾಜ್ಞೆ ಮೂಲಕ ವಿವಿ ಸ್ಥಾಪನೆಗೆ ಚಾಲನೆ ನೀಡಲು ರಾಜ್ಯಪಾಲರು ಕೂಡ ಸಲಹೆ ಮಾಡಿದ್ದಾರೆ. ಆದಷ್ಟು ಶೀಘ್ರ ಈ ಬಗ್ಗೆ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.