ADVERTISEMENT

ದಿಣ್ಣೂರಿನ ಗುಂಡಿಗಳು; ಭೈರಸಂದ್ರದ ‘ಭೈರವ’ರು!

ಎಂ.ಸಿ.ಮಂಜುನಾಥ
Published 24 ಡಿಸೆಂಬರ್ 2013, 20:04 IST
Last Updated 24 ಡಿಸೆಂಬರ್ 2013, 20:04 IST

ಬೆಂಗಳೂರು: ಯಾರಾದರೂ ಅಪ್ಪಿ–ತಪ್ಪಿ ಈ ಮಾರ್ಗ ದಲ್ಲಿ ಬಂದರೆ ಗಂಟೆಗಟ್ಟಲೇ ದೂಳು ಕುಡಿಯುವುದು ಅನಿವಾರ್ಯ. ತುಸು ಮಳೆಬಂದರೂ ಈ ಭಾಗದ ರಸ್ತೆಗಳು ಹೊಂಡಗಳಾಗಿ ಪರಿವರ್ತನೆ ಆಗುತ್ತವೆ. ಅಪಘಾತಕ್ಕೆ ಮುಕ್ತ ಆಹ್ವಾನ ನೀಡುತ್ತವೆ....ಜೆ.ಸಿ.ನಗರ, ಸುಲ್ತಾನಪಾಳ್ಯ, ದಿಣ್ಣೂರು ಮುಖ್ಯರಸ್ತೆ, ದೇವರಜೀವನಹಳ್ಳಿ, ಕಾವಲಭೈರಸಂದ್ರ ಭಾಗದ ರಸ್ತೆಗಳ ಸ್ಥಿತಿ ಇದು.

ದಿಣ್ಣೂರಿನಲ್ಲಿ ಗುಂಡಿಗಳೇ ತುಂಬಿದ್ದರೆ, ಕಾವಲಭೈರ­ಸಂದ್ರದ ರಸ್ತೆಗಳೇ ‘ಭೈರವ’ ರೂಪ ತಾಳಿ ಕುಳಿತಿವೆ. ಈ ರಸ್ತೆಗಳಲ್ಲಿ ಬಿದ್ದಿರುವ ದೊಡ್ಡ ಪ್ರಮಾಣದ ಗುಂಡಿಗಳು ಸವಾರರನ್ನು ಬಲಿ ಪಡೆಯಲು ಕಾಯುತ್ತಿವೆ. ರಸ್ತೆಗಳ ಸಮರ್ಪಕ ನಿರ್ವಹಣೆ ಬಗ್ಗೆ ಬಿಬಿಎಂಪಿ ಅಧಿಕಾರಿಗಳಿಗೆ ಹಾಗೂ ಸ್ಥಳೀಯ ಜನಪ್ರತಿನಿಧಿಗಳಿಗೆ ಸಲ್ಲಿಸಿದ ಮನವಿ ಪತ್ರಗಳು ಕಸದಬುಟ್ಟಿ ಸೇರಿವೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜೆ.ಸಿ.ನಗರ ಸಮೀಪದ ಮುನಿರೆಡ್ಡಿಪಾಳ್ಯ ಬಸ್‌ ನಿಲ್ದಾಣದಿಂದ ದೂರದರ್ಶನ ಕೇಂದ್ರದ ಮುಂಭಾಗ­ದವರೆಗೂ ಸವಾರರಿಗೆ ಗುಂಡಿಗಳ ದರ್ಶನವಾಗುತ್ತದೆ. ಈ ರಸ್ತೆಯಲ್ಲಿ ವಾಹನಗಳು ತೆವಳುತ್ತಲೇ ಸಾಗಬೇಕು.

ಡಾಂಬರ್‌ ಕಿತ್ತು ಹೋಗಿರುವುದರಿಂದ ಸವಾರರಿಗೆ ದೂಳಿನ ಸ್ನಾನ ಖಚಿತ. ಮಳೆಗಾಲದಲ್ಲಿ ನೀರಿನಿಂದ ಮುಚ್ಚಿ ಹೋಗುವ ಗುಂಡಿಗಳು, ವಾಹನದೊಂದಿಗೆ ಸವಾರರನ್ನು ಕೆಳಗೆ ಬೀಳಿಸುತ್ತವೆ. ಹಾಗೇ ಮುಂದೆ ಸಾಗಿದರೆ ಆರ್‌.ಟಿ.ನಗರದ ರಸ್ತೆ ಸ್ವಲ್ಪ ಮಟ್ಟಿಗೆ ಚೆನ್ನಾಗಿದೆ. ಆದರೆ, ಆರ್.ಟಿ.ನಗರ ಪೊಲೀಸ್‌ ಠಾಣೆಯಿಂದ ಬಲ ತಿರುವು ಪಡೆದಾಗ ಸುಲ್ತಾನಪಾಳ್ಯದಿಂದ ಮತ್ತೆ ನರಕ ಆರಂಭವಾಗುತ್ತದೆ. ಸುಲ್ತಾನಪಾಳ್ಯ ಬಸ್‌ ನಿಲ್ದಾಣದ ಮುಂಭಾಗವೇ ಬಿದ್ದಿರುವ ದೊಡ್ಡ ಹಳ್ಳ ಒಂದು ವರ್ಷದಿಂದಲೂ ಹಾಗೆಯೇ ಇದೆ.

ಇಲ್ಲಿಂದ ಮುಂದೆ ಸಾಗುವ ವಾಹನಗಳು ಆಮೆಗತಿಯಲ್ಲೇ ಹೋಗಬೇಕು. ಕಾರಣ ದಿಣ್ಣೂರು ರಸ್ತೆಯ ತಗ್ಗು ದಿಣ್ಣೆಗಳು ಸವಾರರನ್ನು ಸ್ವಾಗತಿಸುತ್ತವೆ. ಸುಲ್ತಾನ ಪಾಳ್ಯ–ದಿಣ್ಣೂರು ರಸ್ತೆ ಮಾರ್ಗದ ಎರಡು ಕಿಲೋ ಮೀಟರ್‌ ಅಂತರದಲ್ಲಿ 20 ರಿಂದ 25 ಗುಂಡಿಗಳು ಕಣ್ಣಿಗೆ ರಾಚುತ್ತವೆ. ಅಲ್ಲದೇ ಈ ರಸ್ತೆ ಹೆಚ್ಚು ವಿಸ್ತಾರವಾಗಿರದ ಕಾರಣ ಬೆಳಿಗ್ಗೆ ಹಾಗೂ ಸಂಜೆ ವೇಳೆ ವಾಹನಗಳ ಓಡಾಟ ಹೆಚ್ಚಿದ್ದು, ಸಂಚಾರ ಅಸ್ತವ್ಯಸ್ತ ವಾಗುತ್ತದೆ. ಇದರಿಂದಾಗಿ ಸಣ್ಣಪುಟ್ಟ ಅಪಘಾತಗಳು ಸಂಭವಿಸಿ ಸವಾರರು ಪರಸ್ಪರ ಕಿತ್ತಾಡುವುದು ಸಾಮಾನ್ಯವಾಗಿದೆ.

ಈ ರಸ್ತೆಯಲ್ಲಿ ಪಾದಚಾರಿ ಮಾರ್ಗ ಕೂಡ ಇಲ್ಲದಿರುವುದರಿಂದ ಪಾದಚಾರಿಗಳು ಕಿರಿದಾದ ಮಣ್ಣಿನ ರಸ್ತೆಯಲ್ಲೇ ಓಡಾಡಬೇಕಿದೆ. ಶಾಲೆಗೆ ಹೋಗುವ ಮಕ್ಕಳು, ಉದ್ಯೋಗಿಗಳು, ರಸ್ತೆ ಪಕ್ಕದ ಮಳಿಗೆಗಳ ವರ್ತಕರು ಇಲ್ಲಿ ನಿತ್ಯವೂ ಸಮಸ್ಯೆ ಎದುರಿಸುತ್ತಿದ್ದಾರೆ. ‘ದಿಣ್ಣೂರು ರಸ್ತೆ ಸಂಪೂರ್ಣವಾಗಿ ಹಾಳಾಗಿದೆ. ಇಲ್ಲಿನ ಕೌಸರ್‌ನಗರದಲ್ಲಿ ಬಿದ್ದಿರುವ ದೊಡ್ಡ ಗುಂಡಿಯಿಂದ ಕಳೆದ ಒಂದೂವರೆ ತಿಂಗಳಿನಲ್ಲಿ ನಾಲ್ಕು ಬೈಕ್‌ಗಳು ಅಪಘಾತಕ್ಕೀಡಾಗಿವೆ.

ADVERTISEMENT

ಹಾಗೇ ಮುಂದೆ ಸಾಗಿದರೆ ದೇವರಜೀವನಹಳ್ಳಿಯಲ್ಲಿ ರಸ್ತೆಗಳು ವಾಹನ ಸಂಚಾರಕ್ಕೆ ಸವಾಲಿನಂತೆ ಎದುರಾಗುತ್ತವೆ. ಹಾಳಾದ ರಸ್ತೆಗಳಲ್ಲಿ ಆಟೊ ಓಡಿಸುವುದರಿಂದ ನಿತ್ಯ ಮೈನೋವು ತಪ್ಪಿದ್ದಲ್ಲ. ಗುಂಡಿ ಬಿದ್ದ ರಸ್ತೆಗಳ ಕಾರಣದಿಂದ ಬೆನ್ನುಹುರಿಯ ಸಮಸ್ಯೆ ಹೆಚ್ಚಾಗಿದೆ’ ಎಂಬುದು ಆಟೊ ಚಾಲಕ ಇಜಾಜ್‌ ಪಾಷಾ ಅವರ ಅಳಲು.

‘ರಸ್ತೆಗಳನ್ನು ದುರಸ್ತಿಗೊಳಿಸುವಂತೆ ಸ್ಥಳೀಯ ಶಾಸಕರಿಗೆ ಹಾಗೂ ಬಿಬಿಎಂಪಿ ಅಧಿಕಾರಿಗಳಿಗೆ ಆಟೊ ಚಾಲಕರ ಸಂಘದಿಂದ ಬಹಳಷ್ಟು ಬಾರಿ ಮನವಿ ಮಾಡಿದ್ದೇವೆ. ಆದರೆ, ನಿತ್ಯ ಈ ರಸ್ತೆಗಳಲ್ಲೇ ಸಂಚರಿಸುವ ಜನಪ್ರತಿನಿಧಿಗಳು ಇಲ್ಲಿಯ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಆದಷ್ಟು ಬೇಗ ಈ ರಸ್ತೆಗಳನ್ನು ದುರಸ್ತಿಗೊಳಿಸಬೇಕು. ಅದು ಸಾಧ್ಯವಾಗ ದಿದ್ದರೆ, ಗುಂಡಿಗಳನ್ನಾದರೂ ಮುಚ್ಚಿಸಲು ಕ್ರಮ ತೆಗೆದುಕೊಳ್ಳಬೇಕು’ ಎಂದು ಮನವಿ ಮಾಡಿದರು.

‘ಬೆಳಗಿನ ಟ್ರಿಪ್‌ನಲ್ಲಿ ಸ್ಥಳೀಯ ಮಕ್ಕಳನ್ನು ಆರ್‌.ಟಿ.ನಗರದ ಶಾಲೆಗಳಿಗೆ ಕರೆದುಕೊಂಡು ಹೋಗುತ್ತೇನೆ. ಸಂಚಾರ ದಟ್ಟಣೆ ಕಾರಣದಿಂದ ಆರಂಭದಲ್ಲಿ ಮಕ್ಕಳನ್ನು ಸರಿಯಾದ ಸಮಯಕ್ಕೆ ಶಾಲೆಗೆ ತಲುಪಿಸುವುದು ಸಾಧ್ಯವಾಗುತ್ತಿರಲಿಲ್ಲ. ಜನಪ್ರತಿನಿಧಿಗಳು ಸಮಸ್ಯೆಯನ್ನು ಪರಿಹರಿಸುವುದಿಲ್ಲ ಎಂದು ಗೊತ್ತಾಗಿದೆ. ಹೀಗಾಗಿ ನಾನೇ ಪರ್ಯಾಯ ಮಾರ್ಗ ಕಂಡುಕೊಂಡಿದ್ದು, ನಿಗದಿತ ಸಮಯಕ್ಕಿಂತ 15 ನಿಮಿಷ ಮುಂಚೆಯೇ ಮಕ್ಕಳನ್ನು ಕರೆದುಕೊಂಡು ಹೋಗುತ್ತಿದ್ದೇನೆ’ ಎಂದು ಕಾವಲ್‌ಭೈರಸಂದ್ರದ ಆಟೊ ಚಾಲಕ ಲೋಕೇಶ್‌ ಹೇಳಿದರು.

ಕ್ಷಣಕ್ಷಣವೂ ಪ್ರಯಾಣ ಸವಾಲು
‘ಕಾವಲ್‌ಭೈರಸಂದ್ರ ಬಸ್‌ ನಿಲ್ದಾಣದ ಮುಂಭಾಗದ ರಸ್ತೆಯಲ್ಲೇ ವಿಸ್ತಾರವಾದ ಗುಂಡಿ ಇದೆ. ಬೈಕ್‌ ಸವಾರರು ಕೂಡ ಈ ಗುಂಡಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಕಾವಲ್‌ ಭೈರಸಂದ್ರ– ಆರ್‌.ಟಿ.ನಗರ ಮಾರ್ಗದ ಬಿಎಂಟಿಸಿ ಬಸ್‌ಗಳಲ್ಲಿ ಯಾವಾಗಲೂ ಪ್ರಯಾಣಿಕರ ದಟ್ಟಣೆ ಹೆಚ್ಚಿರುತ್ತದೆ. ಹೆಜ್ಜೆ ಹೆಜ್ಜೆಗೂ ಸಿಗುವ ಗುಂಡಿಗಳ ನಡುವೆ 20 ನಿಮಿಷ ಪ್ರಯಾಣ ಮಾಡುವುದು ನಿಜಕ್ಕೂ ದುಸ್ಸಾಹಸ’ ಎಂಬುದು ಬಿಎಂಟಿಸಿ ನಿರ್ವಾಹಕ ಎಚ್‌.ಎಲ್.ಗೋವಿಂದಪ್ಪ ಅವರ ಅಭಿಪ್ರಾಯ.

ದೂಳಿನಿಂದ ಆರೋಗ್ಯ ಹದಗೆಟ್ಟಿದೆ
‘ಆರು ವರ್ಷಗಳಿಂದ ಟೈರ್‌ ಮಾರಾಟ ಮಳಿಗೆ ನಡೆಸುತ್ತಿದ್ದೇನೆ. ಆಗಿನಿಂದಲೂ ಈ ರಸ್ತೆಗಳಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ. ಮೂರು ವರ್ಷಗಳ ಹಿಂದೆ ಈ ರಸ್ತೆಯ ಮೇಲೆ ಡಾಂಬಾರ್‌ ಲೇಪಿಸಿದ್ದು ಬಿಟ್ಟರೆ ಮತ್ತೆ ದುರಸ್ತಿ ಕಾಣಲಿಲ್ಲ. ಇಲ್ಲಿ ಮಳಿಗೆ ಆರಂಭಿಸಿ ಹೊಗೆ ಹಾಗೂ ರಸ್ತೆಯ ದೂಳು ಕುಡಿಯುವುದು ಅನಿವಾರ್ಯವಾಗಿದೆ. ಈಗ ಆರೋಗ್ಯ ಸಂಪೂರ್ಣ ಹದಗೆಟ್ಟಿದ್ದು ವ್ಯಾಪಾರ ಮುಂದುವರಿಸುವುದು ಸಾಧ್ಯವಾಗುತ್ತಿಲ್ಲ’ ಎಂದು ಕೌಸರ್‌ನಗರದಲ್ಲಿ ಟೈರ್‌ ಅಂಗಡಿ ಇಟ್ಟುಕೊಂಡಿರುವ  55 ವರ್ಷದ ಅಸ್ಲಾಂ ನೋವು ತೋಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.