ADVERTISEMENT

ದುರಸ್ತಿ ಮಾಡುವಲ್ಲಿ ಬಿಎಂಆರ್‌ಸಿಎಲ್ ವಿಫಲ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2011, 19:30 IST
Last Updated 7 ನವೆಂಬರ್ 2011, 19:30 IST
ದುರಸ್ತಿ ಮಾಡುವಲ್ಲಿ ಬಿಎಂಆರ್‌ಸಿಎಲ್ ವಿಫಲ
ದುರಸ್ತಿ ಮಾಡುವಲ್ಲಿ ಬಿಎಂಆರ್‌ಸಿಎಲ್ ವಿಫಲ   

ಬೆಂಗಳೂರು: `ನಮ್ಮ ಮೆಟ್ರೊ~ ರೈಲು ಸೇವೆಯನ್ನು ನೀಡುವಲ್ಲಿ ನಗರದ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದ್ದ ಬಿಎಂಆರ್‌ಸಿಎಲ್, ರೀಚ್- 1ನೇ ಮಾರ್ಗದ ಯೋಜನೆಗಾಗಿ ಬಳಸಿಕೊಂಡಿದ್ದ ವಿವಿಧ ರಸ್ತೆಗಳನ್ನು ದುರಸ್ತಿಗೊಳಿಸುವಲ್ಲಿ ವಿಫಲವಾಗಿದೆ.

ರೀಚ್- 1ರ ಮಾರ್ಗದ ರಸ್ತೆಗಳಲ್ಲಿ ಸ್ಲ್ಯಾಬ್ ಅಳವಡಿಕೆ ಕಾಮಗಾರಿ ಬಹುತೇಕ ಮುಗಿದಿದೆ. ಯೋಜನೆಗಾಗಿ ರಸ್ತೆಗಳಲ್ಲಿ ಗುಂಡಿ ಅಗೆದಿದ್ದ ಬಿಎಂಆರ್‌ಸಿಎಲ್ ಆ ಗುಂಡಿಗಳನ್ನು ಮುಚ್ಚಿಲ್ಲ. ಅಲ್ಲದೇ ಕಾಮಗಾರಿಯಿಂದ ರಸ್ತೆಗಳು ಹಾಳಾಗಿದ್ದು, ಅವುಗಳ ದುರಸ್ತಿಗೆ ಕ್ರಮ ಕೈಗೊಳ್ಳದಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.

ಮಾಗಡಿ ರಸ್ತೆ, ವಿಜಯನಗರ, ಗಾಯಿತ್ರಿನಗರ, ಪಶ್ಚಿಮ ಕಾರ್ಡ್ ರಸ್ತೆ, ಯಶವಂತಪುರ, ಜಯನಗರ ಹಾಗೂ ಕನಕಪುರ ರಸ್ತೆಗಳಲ್ಲಿನ ಕೆಲವೆಡೆ ಸ್ಲ್ಯಾಬ್ ಅಳವಡಿಕೆ ಕಾರ್ಯ ಬಹುತೇಕ ಮುಗಿದಿದೆ. ಆದರೆ ಈ ಪ್ರದೇಶಗಳಲ್ಲಿ ರಸ್ತೆ ದುರಸ್ತಿ ಮಾಡುವ ಗೋಜಿಗೆ ಹೋಗಿಲ್ಲ.

`ಮಾಗಡಿ ಮುಖ್ಯ ರಸ್ತೆಯಲ್ಲಿರುವ ಶೇಷಾದ್ರಿಪುರ ಸ್ವತಂತ್ರ ಕಾಲೇಜಿನ ಮುಂಭಾಗದಲ್ಲಿನ ರಸ್ತೆಗಳು ಗುಂಡಿ ಬಿದ್ದಿವೆ. ರಸ್ತೆ ಕಿತ್ತು ಹೋಗಿದ್ದು, ವಾಹನ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ಈ ಜಾಗದಲ್ಲಿ ಅಂಗಡಿ ಮಾಲೀಕರು ಹಾಗೂ ತರಕಾರಿ ವ್ಯಾಪಾರಿಗಳು ತ್ಯಾಜ್ಯ ಸುರಿಯುತ್ತಿದ್ದಾರೆ. ಪರಿಣಾಮ ಸುತ್ತಲಿನ ಪ್ರದೇಶ ನಾರುತ್ತಿದೆ.

ಇಷ್ಟೆಲ್ಲಾ ಅವ್ಯವಸ್ಥೆಗಳಿದ್ದರೂ ಬಿಬಿಎಂಪಿ ಅಥವಾ ಬಿಎಂಆರ್‌ಸಿಎಲ್ ಗಮನ ಹರಿಸಿಲ್ಲ~ ಎಂದು ಕಾಲೇಜಿನ ಪ್ರಾಧ್ಯಾಪಕ ಎಸ್.ಎಲ್.ನಾಗೇಂದ್ರ ದೂರುತ್ತಾರೆ.

ಮಹಾಕವಿ ಕುವೆಂಪು ರಸ್ತೆ (ಕಾರ್ಡ್ ರಸ್ತೆ ಜಂಕ್ಷನ್, ಮೋದಿ ಆಸ್ಪತ್ರೆ ರಸ್ತೆ ಮತ್ತು ಮಲ್ಲೇಶ್ವರ), ನಾಗವಾರ ವೃತ್ತ, ಹರಿಶ್ಚಂದ್ರ ಘಾಟ್ ರಸ್ತೆಗಳಲ್ಲಿ ಬಹುತೇಕ ಯೋಜನೆ ಮುಗಿದಿದೆ. ಆದರೆ ಬ್ಯಾರಿಕೇಡ್ ಹಾಗೂ ಇತರೆ ಸಾಮಗ್ರಿಗಳನ್ನು ತೆರವು ಮಾಡಿಲ್ಲ. ಇದರಿಂದ ಸ್ಥಳೀಯರಿಗೆ ತೊಂದರೆಯಾಗುತ್ತಿದೆ. ಪಾಲಿಕೆ ಸದಸ್ಯರಾಗಲೀ, ನಗರಾಭಿವೃದ್ಧಿ ಸಚಿವರಾಗಲೀ ಇತ್ತ ಗಮನ ನೀಡಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.

`ನಮ್ಮ ಮೆಟ್ರೊ~ ಯೋಜನೆಗಾಗಿ ಬಳಸಿಕೊಳ್ಳಲಾದ ರಸ್ತೆಗಳನ್ನು ದುರಸ್ತಿಗೊಳಿಸುವ ಸಂಬಂಧ ಬಿಬಿಎಂಪಿ ಹಾಗೂ ಬಿಎಂಆರ್‌ಸಿಎಲ್ ನಡುವೆ ಒಪ್ಪಂದವಾಗಿತ್ತು. ಅಲ್ಲದೆ ರಸ್ತೆಗಳ ಕಾಮಗಾರಿ ಪೂರ್ಣಗೊಳಿಸುವುದು ಬಿಎಂಆರ್‌ಸಿಎಲ್‌ನ ಜವಾಬ್ದಾರಿ.

ಈಗಾಗಲೇ ಬಯ್ಯಪ್ಪನಹಳ್ಳಿ ಹಾಗೂ ಎಂ.ಜಿ.ರಸ್ತೆ ನಡುವಿನ ಮಾರ್ಗಗಳಲ್ಲಿ ದುರಸ್ತಿ ಕಾರ್ಯ ನಡೆಯುತ್ತಿದೆ. ಬಿಎಂಆರ್‌ಸಿಎಲ್ ರಸ್ತೆ ದುರಸ್ತಿಗೊಳಿಸಲು ವಿಫಲವಾದಲ್ಲಿ ಬಿಬಿಎಂಪಿ ವತಿಯಿಂದಲೇ ದುರಸ್ತಿ ಮಾಡಲಾಗುವುದು ಎಂದು ಪಾಲಿಕೆ ಆಯುಕ್ತ ಸಿದ್ದಯ್ಯ ತಿಳಿಸಿದ್ದಾರೆ. ಆದರೆ ಈ ಬಗ್ಗೆ ಬಿಎಂಆರ್‌ಸಿಎಲ್ ಅಧಿಕಾರಿಗಳು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.