ADVERTISEMENT

ದೆಹಲಿಗೆ ಇಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರ ನೇತೃತ್ವದ ನಿಯೋಗ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2012, 22:00 IST
Last Updated 8 ಡಿಸೆಂಬರ್ 2012, 22:00 IST

ಬೆಂಗಳೂರು: ರಾಷ್ಟ್ರೀಯ ಶಿಕ್ಷಣ ನೀತಿ, ಉದ್ಯೋಗ ನೀತಿ ಹಾಗೂ ಜಲ ನೀತಿಗಳ ಜಾರಿಗೆ ಆಗ್ರಹಿಸಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ನೇತೃತ್ವದಲ್ಲಿ ಭಾನುವಾರ ದೆಹಲಿಗೆ ನಿಯೋಗ ತೆರಳಲಿದೆ ಎಂದು ಪ್ರಾಧಿಕಾರದ ಅಧ್ಯಕ್ಷ `ಮುಖ್ಯಮಂತ್ರಿ' ಚಂದ್ರು ತಿಳಿಸಿದರು.

ಶನಿವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇದೇ 10ರಂದು ರಾಜ್ಯದ ಸಂಸದರ ಭೇಟಿಗೆ ಸಮಯ ನಿಗದಿಯಾಗಿದೆ. ಮೇಲೆ ಪ್ರಸ್ತಾಪಿಸಿರುವ ನೀತಿಗಳ ಜಾರಿಗೆ ಅಧಿವೇಶನದಲ್ಲಿ ಆಗ್ರಹಿಸುವಂತೆ ಸಂಸದರಿಗೆ ಮನವಿ ಮಾಡಲಾಗುವುದು ಎಂದರು.

ಒಂದರಿಂದ ಐದನೇ ತರಗತಿವರೆಗಿನ ಮಕ್ಕಳಿಗೆ  ಕಡ್ಡಾಯವಾಗಿ ಆಯಾ ರಾಜ್ಯಗಳ ಪ್ರಾದೇಶಿಕ ಭಾಷೆಯಲ್ಲಿಯೇ ಶಿಕ್ಷಣ ನೀಡಬೇಕು. ಮಕ್ಕಳ ಕಲಿಕೆಗೂ ಇದು ಪೂರಕ ಎಂಬುದು ತಜ್ಞರ ಅಭಿಪ್ರಾಯ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ `ಸಮಗ್ರ ರಾಷ್ಟ್ರೀಯ ಶಿಕ್ಷಣ ನೀತಿ' ಜಾರಿಗೊಳಿಸುವ ಅಗತ್ಯವಿದೆ ಎಂದು ಪ್ರತಿಪಾದಿಸಿದರು.

ಸಾಹಿತಿಗಳು, ಶಿಕ್ಷಣ ತಜ್ಞರು, ಸಾಂಸ್ಕೃತಿಕ ಸಂಘಟನೆಗಳ ಪದಾಧಿಕಾರಿಗಳು, ಕಾರ್ಮಿಕ ಸಂಘಟನೆಗಳ ಪ್ರತಿನಿಧಿಗಳನ್ನು ಒಳಗೊಂಡ 19 ಜನರು ಈ ನಿಯೋಗದಲ್ಲಿ ಇರುತ್ತಾರೆ. ಹೊರನಾಡ ಕನ್ನಡಿಗರ ಕನ್ನಡ ಸಂಸ್ಕೃತಿ ಉತ್ಸವವನ್ನು ಇದೇ 15ರಂದು ದೆಹಲಿಯಲ್ಲಿ, 16ರಂದು ಉತ್ತರ ಪ್ರದೇಶದ ನೊಯಿಡಾದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

`ಸ್ಥಳೀಯ ಭಾಷಿಕರಿಗೆ ಉದ್ಯೋಗಾವಕಾಶಗಳನ್ನು ಹೆಚ್ಚಿಸುವ ರಾಷ್ಟ್ರೀಯ ಉದ್ಯೋಗ ನೀತಿ ಜಾರಿಗೊಳಿಸಬೇಕು ಎಂದು ಈಗಾಗಲೇ ಸಾಕಷ್ಟು ಬಾರಿ ಮನವಿ ಮಾಡಿದ್ದೇವೆ. ಕೇಂದ್ರದಿಂದ ಇದುವರೆಗೆ ಈ ಸಂಬಂಧ ಯಾವುದೇ  ಕ್ರಮ ಕೈಗೊಂಡಿರುವುದಿಲ್ಲ. ಹಾಗಾಗಿ ಮತ್ತೊಮ್ಮೆ ಮನವಿ ಸಲ್ಲಿಸಲಿದ್ದೇವೆ' ಎಂದು ತಿಳಿಸಿದರು.

ನಿಯೋಗವು ಮೂರು ನೀತಿಗಳ ಜಾರಿಗೆ ಸಂಬಂಧಿಸಿದಂತೆ ಕೇಂದ್ರ ಹಾಗೂ ರಾಜ್ಯ ಉಸ್ತುವಾರಿ ಮಂತ್ರಿಗಳು, ವಿವಿಧ ಇಲಾಖೆಗಳ ಪ್ರಧಾನ ಕಾರ್ಯದರ್ಶಿಗಳನ್ನು ಭೇಟಿ ಮಾಡಿ ಚರ್ಚಿಸಲಿದೆ. ವಿರೋಧ ಪಕ್ಷಗಳ ನಾಯಕರು, ವಿವಿಧ ಪ್ರಾದೇಶಿಕ ಪಕ್ಷಗಳ ಮುಖಂಡರ ಜೊತೆಗೂ ಮಾತುಕತೆ ನಡೆಸಲಾಗುವುದು ಎಂದು ವಿವರಿಸಿದರು.

`ರೈತರ ಹಿತ ಕಾಪಾಡಿ'
`ರಾಜ್ಯದಲ್ಲಿ ನೀರಿನ ಕೊರತೆ ಇದ್ದರೂ ತಮಿಳುನಾಡಿಗೆ ನೀರು ಬಿಡುವಂತೆ ಸುಪ್ರೀಂ ಕೋರ್ಟ್ ಸೂಚಿಸಿದೆ. ಸರ್ಕಾರ ಉರುಳಿದರೂ ಸರಿ ಸಿಎಂ ಜಗದೀಶ ಶೆಟ್ಟರ್ ಅವರು ನೀರು ಬಿಡಬಾರದು. ಸರ್ಕಾರದ ಅವಧಿ  ಪೂರ್ಣಗೊಳ್ಳಲು 4 ತಿಂಗಳು ಬಾಕಿ ಇದೆ, ಅಧಿಕಾರಕ್ಕೆ ಅಂಟಿಕೊಳ್ಳುವ ಅಗತ್ಯವಿಲ್ಲ'.

- `ಮುಖ್ಯಮಂತ್ರಿ' ಚಂದ್ರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT