ADVERTISEMENT

ದೇವಸ್ಥಾನ ವಾರ್ಡ್-19 ಮಂದಿ ನಾಮಪತ್ರ

​ಪ್ರಜಾವಾಣಿ ವಾರ್ತೆ
Published 13 ಜೂನ್ 2011, 19:30 IST
Last Updated 13 ಜೂನ್ 2011, 19:30 IST

ಬೆಂಗಳೂರು: ಬಿಬಿಎಂಪಿಯ ಬನಶಂಕರಿ ದೇವಸ್ಥಾನ ವಾರ್ಡ್‌ನ ಉಪಚುನಾವಣೆಗೆ ನಾಮಪತ್ರ ಸಲ್ಲಿಸುವ ಅವಧಿ ಸೋಮವಾರ ಮುಕ್ತಾಯಗೊಂಡಿದ್ದು, 19 ಮಂದಿ ನಾಮಪತ್ರ ಸಲ್ಲಿಸಿದ್ದಾರೆ. ಒಟ್ಟು 26 ನಾಮಪತ್ರಗಳು ಸಲ್ಲಿಕೆಯಾಗಿವೆ.

ಜೆಡಿಎಸ್ ಪಕ್ಷವು ಈ ಹಿಂದೆ ಇದೇ ವಾರ್ಡ್ ಪ್ರತಿನಿಧಿಸುತ್ತಿದ್ದ ಮಹಮ್ಮದ್ ಅಲಿ ಅವರ ಸಹೋದರ ಮಹಮ್ಮದ್ ಅಕ್ಬರ್ ಅವರನ್ನು ಕಣಕ್ಕಿಳಿಸಿದರೆ, ಬಿಜೆಪಿಯಿಂದ ಎ.ಎಚ್. ಬಸವರಾಜು ಸ್ಪರ್ಧೆಗಿಳಿದಿದ್ದಾರೆ. ಕಾಂಗ್ರೆಸ್‌ನಿಂದ ಅನ್ಸರ್ ಪಾಷಾ ನಾಮಪತ್ರ ಸಲ್ಲಿಸಿದ್ದಾರೆ. ಜೆಡಿಎಸ್ ಬಂಡಾಯ ಅಭ್ಯರ್ಥಿಯಾಗಿ ಆದಿಶೇಷ ನಾಮಪತ್ರ ಸಲ್ಲಿಸಿದ್ದಾರೆ.

ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಸೇರಿದ ಬನಶಂಕರಿ ದೇವಸ್ಥಾನ ವಾರ್ಡ್ ಉಪ ಚುನಾವಣೆ ಸಚಿವ ಆರ್. ಅಶೋಕ ಅವರಿಗೆ ಪ್ರತಿಷ್ಠೆಯಾಗಿ ಪರಿಣಮಿಸಿದೆ. ಹಾಗಾಗಿ ಪಾಲಿಕೆ ವಿರೋಧ ಪಕ್ಷದ ಮಾಜಿ ನಾಯಕ ಎ.ಎಚ್. ಬಸವರಾಜು ಅವರನ್ನು ಕಣಕ್ಕಿಳಿಸಿದೆ. ಜೆಡಿಎಸ್ ತನ್ನ ಸ್ಥಾನ ಉಳಿಸಿಕೊಳ್ಳಲು ತೀವ್ರ ಕಸರತ್ತು ನಡೆಸಿದ್ದು, ಅನುಕಂಪದ ಮತಗಳನ್ನು ಸೆಳೆಯುವ ಉದ್ದೇಶದಿಂದ ಮಹಮ್ಮದ್ ಅಕ್ಬರ್ ಅವರನ್ನು ಸ್ಪರ್ಧೆಗಿಳಿಸಿದೆ.

ADVERTISEMENT

ಆರೋಪಿಯೂ ಸ್ಪರ್ಧೆ!: ಬಿಬಿಎಂಪಿ ಸದಸ್ಯ ಮಹಮ್ಮದ್ ಅಲಿ ಕೊಲೆ ಪ್ರಕರಣದ ಆರೋಪಿಗಳಲ್ಲಿ ಒಬ್ಬನಾದ ಅಫ್ಸರ್ ಖಾನ್ ಎಂಬಾತ ಸೋಮವಾರ ನಾಮಪತ್ರ ಸಲ್ಲಿಸಿದ್ದಾನೆ. ಸದ್ಯ ಆತ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿದ್ದಾನೆ ಎಂದು ಮೂಲಗಳು ತಿಳಿಸಿವೆ. ನಾಮಪತ್ರ ಪರಿಶೀಲನೆ ಜೂನ್ 14ರಂದು ನಡೆಯಲಿದೆ. ನಾಮಪತ್ರ ಹಿಂಪಡೆಯಲು 16 ಕೊನೆಯ ದಿನ. ಇದೇ 26ರಂದು ಮತದಾನ ನಡೆಯಲಿದ್ದು, 29ರಂದು ಮತ ಎಣಿಕೆ ಕಾರ್ಯ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.