ADVERTISEMENT

ದೇವಾಲಯ ಪ್ರವೇಶ ಮುಕ್ತ ವಾತಾವರಣವಿಲ್ಲ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2012, 19:30 IST
Last Updated 25 ಏಪ್ರಿಲ್ 2012, 19:30 IST

ಬೆಂಗಳೂರು: `ಸಮಾನತೆಯ ಬಗ್ಗೆ ಎಷ್ಟೆಲ್ಲಾ ಮಾತನಾಡಿದರೂ ನಮ್ಮ ದೇಶದಲ್ಲಿ ಇಂದಿಗೂ ಪರಿಶಿಷ್ಟರು ದೇವಾಲಯ ಪ್ರವೇಶಿಸಲು ಮುಕ್ತ ವಾತಾವರಣ ಇಲ್ಲದಿರುವುದು ಸಾಮಾಜಿಕ ಅಸಮತೋಲನವನ್ನು ಎತ್ತಿತೋರುತ್ತಿದೆ~ ಎಂದು ರಾಜ್ಯಪಾಲ ಹಂಸರಾಜ್ ಭಾರದ್ವಾಜ್‌ವಿಷಾದಿಸಿದರು.

ನಗರದಲ್ಲಿ ಬುಧವಾರ ನಡೆದ ಚಾಮರಾಜಪೇಟೆಯ ಯಾಜ್ಞವಲ್ಕ್ಯಾಶ್ರಮದ ಶತಮಾನೋತ್ಸವ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

`ಶೋಷಣೆ, ಅಸಮಾನತೆಗಳು ನಿವಾರಣೆಯಾಗಿ ದೇಶದಲ್ಲಿ ಬಡತನ ನಿರ್ಮೂಲನೆಯಾಗಬೇಕು ಎಂಬುದು ಮಹಾತ್ಮ ಗಾಂಧಿ ಅವರ ಕನಸಾಗಿತ್ತು. ಆದರೆ ಆ ಕನಸು ಇಂದಿಗೂ ಸಾಕಾರಗೊಂಡಿಲ್ಲ.

ಶೋಷಣೆ, ಅಸಮಾನತೆ, ಬಡತನ ಸೇರಿದಂತೆ ಹಲವು ಸಮಸ್ಯೆಗಳು ಇಂದಿಗೂ ದೇಶದಲ್ಲಿ ಉಳಿದುಕೊಂಡಿವೆ. ಈ ಸಮಸ್ಯೆಗಳನ್ನು ಪರಿಹರಿಸಲು ದೇಶದ ಎಲ್ಲ ನಾಗರಿಕರೂ ಮನಸ್ಸು ಮಾಡಬೇಕು~ ಎಂದು ಅವರು ನುಡಿದರು.

`ಸಂಸ್ಕೃತ, ಪ್ರಾಕೃತಗಳಂತಹ ಪ್ರಾಚೀನ ಭಾಷೆಗಳ ಅಗತ್ಯವೇ ಇಲ್ಲ ಎಂಬಂತೆ ಇಂದಿನ ಯುವ ಜನರು ಅವುಗಳಿಂದ ದೂರವಾಗುತ್ತಿದ್ದಾರೆ. ನಮ್ಮ ನೆಲದ ಮೂಲ ಜ್ಞಾನವಾದ ವೇದಗಳನ್ನು ಅರಿತುಕೊಳ್ಳಲು ಸಂಸ್ಕೃತವನ್ನು ಮತ್ತು ವೇದಗಳ ವ್ಯಾಖ್ಯಾನಕ್ಕಾಗಿ ಪ್ರಾಕೃತವನ್ನೂ ಕಲಿಯಬೇಕಾದ್ದು ಅಗತ್ಯ.

ನಮ್ಮ ದೇಶದಲ್ಲಿ ಬದುಕಿದ್ದ ಸಾವಿರಾರು ಋಷಿ ಮುನಿಗಳ ಜ್ಞಾನದಿಂದ ವೇದ ವೇದಾಂಗಗಳು ಸಮೃದ್ಧವಾಗಿವೆ. ನಿಜವಾದ ಭಾತರವನ್ನು ಅರಿಯಲು ನಮ್ಮ ಇತಿಹಾಸವನ್ನು ಅರಿಯಬೇಕು ಎಂಬ ದಯಾನಂದ ಸರಸ್ವತಿ ಅವರ ಮಾತನ್ನು ಕಾರ್ಯರೂಪಕ್ಕೆ ತರಲು ವೇದಗಳ ಅಧ್ಯಯನಕ್ಕೆ ಹಿಂದಿರುಗಬೇಕು~ ಎಂದು ಅವರು ಕರೆ ನೀಡಿದರು.

ಕಿರುತೆರೆ ನಿರ್ದೇಶಕ ಟಿ.ಎನ್.ಸೀತಾರಾಂ ಮಾತನಾಡಿ, `ಜಗತ್ತಿಗೆ ಬೃಹದಾರಣ್ಯಕವನ್ನು ಕೊಟ್ಟ ಯಾಜ್ಞವಲ್ಕ್ಯರ ಕೊಡುಗೆ ಹಿರಿದು.

ಜಗತ್ತಿನ ಎಲ್ಲವೂ ಭಗವಂತನೇ ಎಂದು ಸಾರಿದ ಅವರ ಲೋಕ ಚಿಂತೆನೆಯನ್ನು ತಿಳಿಯುವ ಪ್ರಯತ್ನವಾಗಬೇಕು~ ಎಂದರು.

ಸಮಾರಂಭದಲ್ಲಿ ಕೂಡಲಿ ಕ್ಷೇತ್ರದ ವಿದ್ಯಾರಣ್ಯ ಭಾರತಿ ಸ್ವಾಮೀಜಿ, ಬೆಂಗಳೂರು ದೂರದರ್ಶನ ಕೇಂದ್ರದ ಉಪ ಮಹಾ ನಿರ್ದೇಶಕ ಡಾ.ಮಹೇಶ್ ಜೋಷಿ ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.