ADVERTISEMENT

ದೇಶದ ಆರ್ಥಿಕ ಸ್ಥಿತಿ ಸಮೃದ್ಧ: ಶಕ್ತಿಕಾಂತ್‌ ದಾಸ್‌

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2018, 19:50 IST
Last Updated 29 ಮಾರ್ಚ್ 2018, 19:50 IST
ಪ್ರೊ.ಸೋನಿ ಪೆಲ್ಲಿಸೇರಿ (ಎಡದಿಂದ ಮೊದಲನೆಯವರು) ಶಕ್ತಿಕಾಂತ್‌ ದಾಸ್‌ ಅವರಿಗೆ ಹಸ್ತಲಾಘವ ನೀಡಿದರು. ರಾಷ್ಟ್ರೀಯ ಕಾನೂನು ಶಾಲೆಯ ಕುಲಪತಿ  ಆರ್. ವೆಂಕಟ್ ರಾವ್ ಇದ್ದರು –ಪ್ರಜಾವಾಣಿ ಚಿತ್ರ
ಪ್ರೊ.ಸೋನಿ ಪೆಲ್ಲಿಸೇರಿ (ಎಡದಿಂದ ಮೊದಲನೆಯವರು) ಶಕ್ತಿಕಾಂತ್‌ ದಾಸ್‌ ಅವರಿಗೆ ಹಸ್ತಲಾಘವ ನೀಡಿದರು. ರಾಷ್ಟ್ರೀಯ ಕಾನೂನು ಶಾಲೆಯ ಕುಲಪತಿ ಆರ್. ವೆಂಕಟ್ ರಾವ್ ಇದ್ದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ದೇಶದ ಆರ್ಥಿಕ ಸ್ಥಿತಿ ಅತ್ಯಂತ ಆರೋಗ್ಯಯುತ ಮತ್ತು ಸಮೃದ್ಧವಾಗಿದೆ’ ಎಂದು 15ನೇ ಹಣಕಾಸು ಆಯೋಗದ ಸದಸ್ಯ ಶಕ್ತಿಕಾಂತ್‌ ದಾಸ್‌ ತಿಳಿಸಿದರು.

ರಾಷ್ಟ್ರೀಯ ಕಾನೂನು ಶಾಲೆಯಲ್ಲಿ ಗುರುವಾರ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ‘ದೇಶದ ಆರ್ಥಿಕ ಸ್ಥಿತಿ: ಮುಂದಿನ ಸವಾಲುಗಳು’ ಕುರಿತು
ಮಾತನಾಡಿದ ಅವರು ‘ನೋಟು ರದ್ದತಿ, ಜಿಎಸ್‌ಟಿ ಜಾರಿಯಂತಹ ಮಹತ್ವದ ಸುಧಾರಣಾ ಕ್ರಮಗಳ ನಂತರವೂ ಈ ವರ್ಷ ಆರ್ಥಿಕ ಬೆಳವಣಿಗೆ ದರವನ್ನು ಶೇ 6.75ರಷ್ಟು ನಿರೀಕ್ಷೆ ಮಾಡಲಾಗಿದೆ. 2019ರ ಹಣಕಾಸು ವರ್ಷದಲ್ಲಿ ಶೇ 7.2ರಿಂದ ಶೇ 7.4ರಷ್ಟು ಆರ್ಥಿಕ ಬೆಳವಣಿಗೆ ದರ ನಿರೀಕ್ಷಿಸಿದ್ದೇವೆ’ ಎಂದರು.

ಬ್ಯಾಂಕ್‌ಗಳ ಆಡಳಿತ ನಿರ್ವಹಣೆ ಸರಿ ಇಲ್ಲದ ಕಾರಣಕ್ಕೆ ಬ್ಯಾಂಕುಗಳಲ್ಲಿ ವಸೂಲಾಗದ ಸಾಲದ ಪ್ರಮಾಣ ಹೆಚ್ಚುತ್ತಿದೆ. ಬ್ಯಾಂಕುಗಳ ಮೇಲೆ ನಿಗಾ ಇಡು
ವುದು ಮತ್ತು ನಿಯಂತ್ರಣ ಹೊಂದುವುದು ಹಣಕಾಸು ಸಚಿವಾಲಯದ ಜವಾಬ್ದಾರಿಯಾಗಬೇಕೆಂದು ಬಯಸಲಾಗುತ್ತಿದೆ. ಇದು ಸಚಿವಾಲಯದ ಜವಾಬ್ದಾರಿ ಅಲ್ಲ, ಇದಕ್ಕಾಗಿ ಪ್ರತ್ಯೇಕ ವ್ಯವಸ್ಥೆ ಬೇಕಿದೆ. ಕೆಲವರು ಬ್ಯಾಂಕುಗಳನ್ನು ಸಂಪೂರ್ಣ ಖಾಸಗೀಕರಣಗೊಳಿಸಬೇಕೆಂದು ವಾದಿಸುತ್ತಾರೆ. ಆದರೆ, ಇದು ಸಹ ಅಂತಿಮ ಪರಿಹಾರವಲ್ಲ. ದೇಶದ ಅರ್ಥ ವ್ಯವಸ್ಥೆಗೆ ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳು ಮತ್ತು ಖಾಸಗಿ ಬ್ಯಾಂಕುಗಳು ಸಮಾನ ಕೊಡುಗೆ ನೀಡಿವೆ ಎಂದರು.

ADVERTISEMENT

ಕಪ್ಪು ಹಣ, ನಕಲಿ ನೋಟು ಪತ್ತೆ ಹಚ್ಚುವುದು, ಹಣದ ಅಕ್ರಮ ಚಲಾವಣೆ ಹಾಗೂ ಭಯೋತ್ಪಾದನೆಗೆ ಹಣದ ನೆರವು ತಡೆಯುವುದಷ್ಟೇ ನೋಟು ರದ್ದತಿಯ ಮೂಲ ಉದ್ದೇಶವಾಗಿರಲಿಲ್ಲ. ಜನರ ಮನೆಯಲ್ಲಿ ಸಂಗ್ರಹವಾಗಿ ಪರ್ಯಾಯ ಆರ್ಥಿಕ ವ್ಯವಸ್ಥೆಯಾಗಿ ರೂಪುಗೊಂಡಿದ್ದ ಹಣವನ್ನು ಪುನಃ ಬ್ಯಾಂಕಿಗೆ ತಂದು, ಹೂಡಿಕೆ ಮಾಡುವುದು ಕೂಡ ಪ್ರಮುಖ ಉದ್ದೇಶವಾಗಿತ್ತು. ನಮ್ಮ ದೃಷ್ಟಿಯಲ್ಲಿ ನೋಟು ರದ್ದತಿಯ ಉದ್ದೇಶ ಯಶಸ್ವಿಯಾಗಿದೆ ಎಂದರು.

ಸರಕು ಸೇವಾ ತೆರಿಗೆ (ಜಿಎಸ್‌ಟಿ) ಬಂದ ಮೇಲೆ ಪ್ರತಿಯೊಂದಕ್ಕೂ ಲೆಕ್ಕ ಸಿಗುತ್ತಿದೆ. ರಸ್ತೆ ಬದಿ ವ್ಯಾಪಾರವು ಲೆಕ್ಕಕ್ಕೆ ಸಿಗುತ್ತಿದೆ. ಆಧಾರ್‌ ಜೋಡಣೆಯಿಂದ ಅರ್ಥ ವ್ಯವಸ್ಥೆಯ ಶುದ್ಧೀಕರಣವಾಗುತ್ತಿದೆ. ಜಾಗತಿಕರಣ, ಉದಾರಿಕರಣ ಹಾಗೂ ಖಾಸಗಿಕರಣದಿಂದ ಆರ್ಥ ವ್ಯವಸ್ಥೆಯೇ ಬದಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.