ADVERTISEMENT

‘ದೇಶದ ಸಾಂಸ್ಕೃತಿಕ ಚಹರೆ ಬದಲಿಸಲು ಹುನ್ನಾರ’

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2017, 20:03 IST
Last Updated 24 ಅಕ್ಟೋಬರ್ 2017, 20:03 IST

ಬೆಂಗಳೂರು: ‘ರಾಷ್ಟ್ರೀಯತೆ ಹೆಸರಿನಲ್ಲಿ ದೇಶದ ಸಾಂಸ್ಕೃತಿಕ ಚಹರೆಯನ್ನು ಬದಲಾಯಿಸಲು ಎಲ್ಲಾ ರೀತಿಯ ಹುನ್ನಾರ ನಡೆಸಲಾಗುತ್ತಿದೆ’ ಎಂದು ಹೋರಾಟಗಾರ ಕೋಟಿಗಾನಹಳ್ಳಿ ರಾಮಯ್ಯ ಅಭಿಪ್ರಾಯ ವ್ಯಕ್ತಪಡಿಸಿದರು.

ಬೆಂಗಳೂರು ವಿಶ್ವವಿದ್ಯಾಲಯದ ಸ್ನಾತಕೋತ್ತರ ಮತ್ತು ಸಂಶೋಧನಾ ವಿದ್ಯಾರ್ಥಿಗಳ ಒಕ್ಕೂಟ ಮತ್ತು ಮಾನವ ಬಂಧುತ್ವ ವೇದಿಕೆ ಆಶ್ರಯದಲ್ಲಿ ನಗರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ‘ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಸಮಕಾಲೀನ ಭಾರತ’ ಕುರಿತ ವಿಚಾರಸಂಕಿರಣದಲ್ಲಿ ಅವರು ಮಾತನಾಡಿದರು.

ವಕೀಲ ಸಿ.ಎಸ್‌. ದ್ವಾರಕಾನಾಥ್, ‘ನ್ಯಾಯಾಂಗ ವ್ಯವಸ್ಥೆಯಲ್ಲೂ ಅಭಿವ್ಯಕ್ತಿ ಸ್ವಾತಂತ್ರ್ಯ ಹರಣವಾಗಿದೆ. ಸಂವಿಧಾನದ ಮೂಲ ಆಶಯದ ಮೇಲೆ ದಾಳಿ ನಡೆಯುತ್ತಿದೆ’ ಎಂದು ಕಿಡಿಕಾರಿದರು.

ADVERTISEMENT

ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರ ದಿನೇಶ್ ಅಮಿನ್‌ಮಟ್ಟು, ‘ರಾಷ್ಟ್ರದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಹರಣಕ್ಕೆ ದೀರ್ಘ ಇತಿಹಾಸವಿದೆ. 1992ರಿಂದ ಇಲ್ಲಿಯವರೆಗೆ ದೇಶದಲ್ಲಿ 40ಕ್ಕೂ ಹೆಚ್ಚು ಪತ್ರಕರ್ತರ ಹತ್ಯೆಗಳಾಗಿವೆ’ ಎಂದು ಆತಂಕ ವ್ಯಕ್ತಪಡಿಸಿದರು.

‘ಪತ್ರಿಕೋದ್ಯಮ ವೃತ್ತಿಯಾಗಿ ಉಳಿದಿಲ್ಲ. ಬೃಹತ್ ಉದ್ಯಮವಾಗಿ ರೂಪುಗೊಂಡಿದೆ. ರಿಲಯನ್ಸ್‌ನಂತಹ ಉದ್ದಿಮೆದಾರರು ಅದನ್ನು ಲಾಭಕ್ಕಾಗಿ ಬಳಸಿಕೊಳ್ಳುವ ಆತಂಕ ಎದುರಾಗಿದೆ’ ಎಂದರು.

ಪ್ರೊ. ಮಹೇಶ್‌ಚಂದ್ರ ಗುರು, ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಉಪಾಧ್ಯಕ್ಷೆ ಕೆ.ನೀಲಾ, ಬೆಂಗಳೂರು ವಿಶ್ವವಿದ್ಯಾಲಯದ ಹಂಗಾಮಿ ಕುಲಪತಿ ಎಚ್.ಎನ್.ರಮೇಶ್, ಕುಲಸಚಿವರಾದ ಡಾ. ಬಿ.ಕೆ.ರವಿ, ಡಾ.ಸಿ.ಶಿವರಾಜು ಮತ್ತು ಮಾನವ ಬಂಧುತ್ವ ವೇದಿಕೆ ಸಂಚಾಲಕ ಎನ್‌. ಅನಂತನಾಯಕ್ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.