ADVERTISEMENT

ದೊಡ್ಡ ಅರಳಗೆರೆ ಗ್ರಾ.ಪಂ: ಅವಿರೋಧ ಆಯ್ಕೆ

​ಪ್ರಜಾವಾಣಿ ವಾರ್ತೆ
Published 6 ಜನವರಿ 2012, 19:30 IST
Last Updated 6 ಜನವರಿ 2012, 19:30 IST

ಹೊಸಕೋಟೆ: ತಾಲ್ಲೂಕಿನ ದೊಡ್ಡ ಅರಳಗೆರೆ ಗ್ರಾ.ಪಂ.ನ ಮೊದಲ ಅವಧಿಗೆ ಅಧ್ಯಕ್ಷರಾಗಿ ಚಿಕ್ಕರಳಗೆರೆಯ ಮದ್ದೂರಪ್ಪ ಮತ್ತು ಉಪಾಧ್ಯಕ್ಷರಾಗಿ ಭುವನಹಳ್ಳಿಯ ಲಕ್ಷ್ಮಮ್ಮ ಗುರುವಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. 

ಅಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿ ಮತ್ತು ಉಪಾಧ್ಯಕ್ಷ ಸ್ಥಾನ ಹಿಂದುಳಿದ ವರ್ಗ ಮಹಿಳೆಗೆ ಮೀಸಲಾಗಿತ್ತು. ಪಂಚಾಯಿತಿಗೆ ಒಂದೂವರೆ ವರ್ಷದ ಹಿಂದೆ ಚುನಾವಣೆ ನಡೆದಿದ್ದರೂ ಮೀಸಲಾತಿ ಬದಲಾವಣೆಗೆ ಒತ್ತಾಯಿಸಿ ಸದಸ್ಯರು ಪಟ್ಟು ಹಿಡಿದಿದ್ದರಿಂದ ಅಲ್ಲಿ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳು ಚುನಾವಣೆ ನಡೆಯದೆ ಖಾಲಿಯಾಗಿ ಉಳಿದಿದ್ದವು.

ತಾಲ್ಲೂಕಿನ ನಂದಗುಡಿ ಗ್ರಾ.ಪಂ.ಅಧ್ಯಕ್ಷರಾಗಿ ಕಲಾಜ್ಯೋತಿ ಮತ್ತು ಉಪಾಧ್ಯಕ್ಷರಾಗಿ ನಡುವಿನಪುರದ ವಿ.ಮಂಜುಳಾ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಬೈಲನರಸಾಪುರ ಗ್ರಾ.ಪಂ.ಅಧ್ಯಕ್ಷರಾಗಿ ತಾಜರ್ ಅಹಮದ್ ಮತ್ತು ಉಪಾಧ್ಯಕ್ಷರಾಗಿ ದೊಡ್ಡಗಾನಹಳ್ಳಿಯ ಎಸ್.ರತ್ನಮ್ಮ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಆಯ್ಕೆಯಾದ ಅಧ್ಯಕ್ಷರು ಬಿಜೆಪಿ ಬೆಂಬಲಿತ ಸದಸ್ಯರಾಗಿದ್ದಾರೆ.

ಭಟ್ಟರಹಳ್ಳಿ: ಅಪಘಾತದಲ್ಲಿ ಗಾಯಗೊಂಡಿದ್ದ ವ್ಯಕ್ತಿ ಸಾವು
ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ಆಂಧ್ರಪ್ರದೇಶ ಮೂಲದ ವೆಂಕಟಪ್ಪ (45) ಚಿಕಿತ್ಸೆ ಫಲಕಾಕಾರಿಯಾಗದೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಗುರುವಾರ ಮೃತಪಟ್ಟರು.

ಭಟ್ಟರಹಳ್ಳಿ ಬಳಿ ವಾಸವಾಗಿರುವ ತಮ್ಮ ಸಂಬಂಧಿಕರನ್ನು ನೋಡಲು ಜ.2 ರಂದು ವೆಂಕಟಪ್ಪ ಬಸ್‌ನಿಂದ ಇಳಿದು ರಸ್ತೆ ದಾಟುತ್ತಿದ್ದಾಗ ವೇಗವಾಗಿ ಬಂದ ಜೀಪ್ ಒಂದು ಡಿಕ್ಕಿ ಹೊಡೆದು ಅವರು ಗಾಯಗೊಂಡಿದ್ದರು. ಆವಲಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.