ADVERTISEMENT

ದ್ವೇಷದಿಂದ ಗೌರಿ ಹತ್ಯೆ: ರಾಹುಲ್‌

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2018, 19:30 IST
Last Updated 8 ಏಪ್ರಿಲ್ 2018, 19:30 IST
ರಾಹುಲ್‌ ಗಾಂಧಿ
ರಾಹುಲ್‌ ಗಾಂಧಿ   

ಬೆಂಗಳೂರು: 'ದ್ವೇಷ ಹರಡುವವರ ಸಂಖ್ಯೆ ದೇಶದಲ್ಲಿ ಹೆಚ್ಚಾಗುತ್ತಿದೆ. ಭಿನ್ನ ಅಭಿಪ್ರಾಯಗಳನ್ನು ಅವರು ಸಹಿಸುತ್ತಿಲ್ಲ. ಈ ಕಾರಣಕ್ಕೆ ಸತ್ಯ ಪ್ರತಿಪಾದಿಸಿದ ಗೌರಿ ಲಂಕೇಶ್‌ ಅಂತಹವರ ಹತ್ಯೆ ನಡೆದಿದೆ. ಇದಕ್ಕೆಲ್ಲ ಕಡಿವಾಣ ಹಾಕಬೇಕು’ ಎಂದು ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಅಭಿಪ್ರಾಯ ವ್ಯಕ್ತಪಡಿಸಿದರು.

ಮಹಿಳಾ ಸಾಧಕಿಯರ ಜತೆಗಿನ ಸಂವಾದದಲ್ಲಿ ಕವಿತಾ ಲಂಕೇಶ್ ‘ದಿ ವೇ ಐ ಸೀ ಇಟ್ -ಎ ಗೌರಿ ಲಂಕೇಶ್ ರೀಡರ್’ ಪುಸ್ತಕವನ್ನು ರಾಹುಲ್‌ಗೆ ಉಡುಗೊರೆಯಾಗಿ ನೀಡಿದರು. ‘ಪ್ರಗತಿಪರ ಚಿಂತಕರ ಹತ್ಯೆ ತಡೆಯಲು ಯಾವ ಕ್ರಮ ಕೈಗೊಳ್ಳುತ್ತೀರಿ’ ಎಂದು ಕವಿತಾ ಪ್ರಶ್ನಿಸಿದಾಗ ಈ ಉತ್ತರ ನೀಡಿದರು.

ಮಹಿಳಾ ಮೀಸಲಾತಿ ಮಸೂದೆ ಮೂಲೆಗುಂಪಾಗಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ರಾಹುಲ್‌, ‘ಕಾಂಗ್ರೆಸ್‌ ಅಧಿಕಾರದಲ್ಲಿದ್ದಾಗ ಮೀಸಲಾತಿ ನೀಡಬೇಕು ಎಂದು ಸಂಸತ್‌ನಲ್ಲಿ ನಿರ್ಧರಿಸಲಾಗಿತ್ತು. ಆ ಮಸೂದೆ ಕುರಿತ ಚರ್ಚೆಯೂ ನಡೆದಿತ್ತು. ಆದರೆ, ಬಿಜೆಪಿ ಅಧಿಕಾರಕ್ಕೆ ಬರುತ್ತಿದ್ದಂತೆ ಅದು ಕನಸಿನ ಕೂಸಾಗಿದೆ’ ಎಂದು ದೂರಿದರು.

ADVERTISEMENT

ಮಹಿಳಾ ಸಬಲೀಕರಣಕ್ಕಾಗಿ ಶ್ರಮಿಸುತ್ತಿರುವವರು ಹಾಗೂ ಆ ಬಗ್ಗೆ ಆಸ್ಥೆ ಹೊಂದಿರುವವರು ರಾಜಕೀಯಕ್ಕೆ ಬರಬೇಕು. ಆಗ ಮಹಿಳೆಯ ಸಾಕಷ್ಟು ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ ಎಂದು ಮಹಿಳಾ ಸಾಧಕಿಯರಿಗೆ ಕರೆ ನೀಡಿದರು.

ಪಠ್ಯ ಆಧಾರಿತ ಹಾಗೂ ಅಂಕಗಳನ್ನು ಗುರಿಯಾಗಿಸಿಕೊಂಡು ಶಿಕ್ಷಣ ನೀಡಲಾಗುತ್ತಿದೆ ಎಂದು ಶಿಕ್ಷಕಿಯೊಬ್ಬರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಅಂಕಗಳನ್ನು ಗಳಿಸುವುದೇ ಸಾಧನೆ ಎಂಬ ಅಭಿಪ್ರಾಯ ಪೋಷಕರಲ್ಲಿದೆ. ಮಕ್ಕಳಲ್ಲಿನ ವಿಭಿನ್ನ ಕೌಶಲಗಳನ್ನು ಗುರುತಿಸುವಲ್ಲಿ ಶಿಕ್ಷಣ ಸಂಸ್ಥೆಗಳೂ ವಿಫಲವಾಗಿವೆ. ಈ ಮನಸ್ಥಿತಿ ಬದಲಾಗಬೇಕು. ಸರ್ಕಾರ ಕೌಶಲ ಆಧಾರಿತ ಶಿಕ್ಷಣ ವ್ಯವಸ್ಥೆಯನ್ನೇ ಜಾರಿ ತರಬೇಕು’ ಎಂದು ತಿಳಿಸಿದರು.‌

ಹೆಚ್ಚು ಜನಕ್ಕಿಲ್ಲ ಅವಕಾಶ: ರಂಗಕರ್ಮಿ ಅರುಂಧತಿ ನಾಗ್ ಸೇರಿದಂತೆ ಸುಮಾರು 100 ಸಾಧಕ ಮಹಿಳೆಯರಿಗೆ ಸಂವಾದದಲ್ಲಿ ಅವಕಾಶ ಕಲ್ಪಿಸಲಾಗಿತ್ತು. ಆದರೆ, ಪ್ರಶ್ನೆ ಕೇಳಲು ಅವಕಾಶ ಸಿಕ್ಕಿದ್ದು ಮಾತ್ರ 10 ಜನರಿಗೆ. ಇದರಿಂದಾಗಿ ವಿವಿಧೆಡೆಯಿಂದ ಬಂದಿದ್ದ ಸಾಧಕಿಯರು ಬೇಸರದಿಂದ ಮರಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.