ADVERTISEMENT

ಧರೆಗೆ ಉರುಳಿದ 34 ಮರಗಳು

​ಪ್ರಜಾವಾಣಿ ವಾರ್ತೆ
Published 22 ಜುಲೈ 2012, 19:30 IST
Last Updated 22 ಜುಲೈ 2012, 19:30 IST

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಶಿರಸಿ ವೃತ್ತದಿಂದ ಅಗ್ರಹಾರ ಜಂಕ್ಷನ್‌ವರೆಗಿನ ಸಿಗ್ನಲ್ ಮುಕ್ತ ಕಾರಿಡಾರ್ ನಿರ್ಮಾಣಕ್ಕಾಗಿ ಯಾವುದೇ ಕಾರ್ಯಾದೇಶ ಪಡೆಯದೇ ಕೋರಮಂಗಲದಲ್ಲಿ ಸುಮಾರು 34 ಮರಗಳನ್ನು ಕಡಿದಿರುವ ಪ್ರಕರಣ ಬೆಳಕಿಗೆ ಬಂದಿದೆ.

ಈ ಭಾಗದಲ್ಲಿರುವ ನಿವಾಸಿಗಳು ಕಾರಿಡಾರ್ ನಿರ್ಮಾಣವನ್ನು ಶತಾಯಗತಾಯ ವಿರೋಧಿಸುತ್ತಿದ್ದ ನಡುವೆಯೇ ಬಿಡಿಎ ಮರಗಳನ್ನು ಕಡಿಯುವ ಮೂಲಕ  ನಿವಾಸಿಗಳಿಗೂ ಹಾಗೂ ಪರಿಸರ ಪ್ರೇಮಿಗಳಿಗೂ `ಶಾಕ್~ ನೀಡಿದೆ.

`ಪ್ರಜಾವಾಣಿ~ಗೆ ದೊರೆತ ಮಾಹಿತಿ ಪ್ರಕಾರ, ಸಿಗ್ನಲ್‌ಮುಕ್ತ ಕಾರಿಡಾರ್‌ನ ಭಾಗವಾಗಿ ಗ್ರೇಡ್ ಸೆಪರೇಟರ್ ಅಳವಡಿಸಲು ಬಿಬಿಎಂಪಿಯು ಕೋರಮಂಗಲದ ನಾಲ್ಕು ಜಂಕ್ಷನ್‌ಗಳ ಸುತ್ತಲೂ ಇರುವ 88 ಮರಗಳನ್ನು ಕಡಿಯಲು 2011 ರ ಸೆಪ್ಟೆಂಬರ್‌ನಲ್ಲಿ ಅನುಮತಿ ನೀಡಿತ್ತು.
 
2012ರ ಏಪ್ರಿಲ್‌ನಲ್ಲಿ ಬಿಡಿಎ ಅರಣ್ಯ ವಿಭಾಗವು ಯಾವ ತೆರನಾದ ಮರಗಳನ್ನು ಕಡಿಯಬಹುದು, ಅದರ ಮಾನದಂಡವೇನು ಎಂಬುದೂ ಸೇರಿದಂತೆ ಮರ ಕಡಿಯುವ ಕುರಿತು ಒಪ್ಪಿಗೆ ಪಡೆಯಲು ಮೂಲಸೌಕರ್ಯ ವಿಭಾಗಕ್ಕೆ ಪತ್ರ ಬರೆದಿತ್ತು. ಮರ ಕಡಿಯುವ ಟೆಂಡರ್ ಪ್ರಕ್ರಿಯೆಗೂ ಸಿದ್ದತೆ ನಡೆಸಿತ್ತು. 

ಆದರೆ, ಅರಣ್ಯ ವಿಭಾಗವು ಮೇ 25 ಮತ್ತು 26 ರಂದು ಯಾವುದೇ ಟೆಂಡರ್ ಪ್ರಕ್ರಿಯೆ ನಡೆಸದೆ ಕಾನೂನು ಉಲ್ಲಂಘಿಸಿ ಸುಮಾರು 34 ಮರಗಳನ್ನು ಕಡಿದು ಹಾಕಿದೆ. ಗುತ್ತಿಗೆದಾರರು ಮರ ಸಾಗಣೆ ಅನುಮತಿಯನ್ನು ಪಡೆಯದೇ, ಯಾವುದೇ ಕಾರ್ಯಾದೇಶವೂ ಇಲ್ಲದೇ ಏಕಾಏಕಿ ಮರಗಳನ್ನು ಕಡಿದು ಹಾಕಿರುವುದು ಸಂಶಯಕ್ಕೆ ಎಡೆ ಮಾಡಿಕೊಟ್ಟಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.