ADVERTISEMENT

ಧಾರ್ಮಿಕ ಸಂಸ್ಥೆಗಳಿಗೆ ವಿನಾಯಿತಿ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2012, 19:30 IST
Last Updated 7 ಅಕ್ಟೋಬರ್ 2012, 19:30 IST

ಬೆಂಗಳೂರು: ದೇವಸ್ಥಾನ, ಮಸೀದಿ, ಚರ್ಚ್ ಹಾಗೂ ಗುರುದ್ವಾರಗಳಲ್ಲಿ ಅಧಿಕ ಪ್ರಮಾಣದಲ್ಲಿ ತ್ಯಾಜ್ಯ ಉತ್ಪಾದನೆಯಾದರೂ ಅವುಗಳ ಆವರಣದೊಳಗೇ ಹಸಿ ತ್ಯಾಜ್ಯವನ್ನು ವಿಂಗಡಿಸಿ ವಿಲೇವಾರಿ ಮಾಡುವ ಘಟಕ ಸ್ಥಾಪಿಸುವುದನ್ನು ಕಡ್ಡಾಯಗೊಳಿಸುವುದಕ್ಕೆ ಬಿಬಿಎಂಪಿ ವಿನಾಯಿತಿ ನೀಡಿದೆ.

ದೇವಸ್ಥಾನ ಹಾಗೂ ಇತರೆ ಧಾರ್ಮಿಕ ಸಂಸ್ಥೆಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಕಸ ಉತ್ಪತ್ತಿಯಾಗುವ ಪಟ್ಟಿಗೆ ಸೇರಿಸಲಾಗಿದ್ದರೂ ಅವುಗಳ ಸೂಕ್ಷ್ಮತೆಯನ್ನು ಅರಿತು ಆವರಣದೊಳಗೇ ಕಸ ವಿಂಗಡಿಸುವ ಘಟಕ ಸ್ಥಾಪಿಸುವಂತೆ ಯಾವುದೇ ಒತ್ತಡ ಹೇರುವುದಿಲ್ಲ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.

 `ಧಾರ್ಮಿಕ ಸಂಸ್ಥೆಗಳಿಗೆ ಕಾನೂನನ್ನು ಕಡ್ಡಾಯವಾಗಿ ಹೇರಲು ಸಾಧ್ಯವಾಗುವುದಿಲ್ಲ. ಒಂದು ವೇಳೆ ಆವರಣದೊಳಗೆ ಜಾಗ ಇದ್ದಲ್ಲಿ ಜೈವಿಕ ಅನಿಲ ಘಟಕ ಸ್ಥಾಪಿಸಿಕೊಳ್ಳುವಂತೆ ನಾವು ಕೋರುತ್ತೇವೆ. ಇಲ್ಲದಿದ್ದಲ್ಲಿ ಪಾಲಿಕೆಯೇ ತ್ಯಾಜ್ಯವನ್ನು ಸಂಗ್ರಹಿಸಲಿದೆ~ ಎಂದು ಅವರು ಹೇಳಿದರು.

ಅಲ್ಲದೆ, ಕಸ ಸಂಗ್ರಹಿಸಲು ಧಾರ್ಮಿಕ ಸಂಸ್ಥೆಗಳಿಂದ ಯಾವುದೇ ರೀತಿಯ ಶುಲ್ಕ ಸಂಗ್ರಹಿಸುವುದಿಲ್ಲ ಎಂದು ಪಾಲಿಕೆ ಆಯುಕ್ತ ರಜನೀಶ್ ಗೋಯಲ್ ಸ್ಪಷ್ಟಪಡಿಸಿದ್ದಾರೆ. ಈ ನಡುವೆ, ದೇವಸ್ಥಾನ ಹಾಗೂ ಇತರೆ ಧಾರ್ಮಿಕ ಸಂಸ್ಥೆಗಳ ಆವರಣದೊಳಗೆ ಸೂಕ್ತ ಸ್ಥಳಾವಕಶವಿದ್ದಲ್ಲಿ ಜೈವಿಕ ಅನಿಲ ಘಟಕವನ್ನು ಸ್ಥಾಪಿಸುವ ಸಾಧ್ಯಾಸಾಧ್ಯತೆಗಳ ಬಗ್ಗೆ ಪರಿಶೀಲನೆ ನಡೆಸುವಂತೆ ಮುಜರಾಯಿ ಹಾಗೂ ಧಾರ್ಮಿಕ ದತ್ತಿ ಇಲಾಖೆಯನ್ನು ಕೋರಲಾಗುವುದು ಎಂದು ಅವರು ಹೇಳಿದ್ದಾರೆ.

ಜೈವಿಕ ಅನಿಲ ಘಟಕ: ಹಸಿ ತ್ಯಾಜ್ಯವನ್ನು ಸದ್ಬಳಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಪಾಲಿಕೆಯು ನಗರದಲ್ಲಿ 15 ಜೈವಿಕ ಅನಿಲ ಘಟಕಗಳನ್ನು ಸ್ಥಾಪಿಸಲು ನಿರ್ಧರಿಸಿದೆ. ಪ್ರತಿನಿತ್ಯ ಸುಮಾರು 80 ಟನ್‌ಗಳಷ್ಟು ಹಸಿ ತ್ಯಾಜ್ಯ ಉತ್ಪತ್ತಿಯಾಗುವ ಕೆ.ಆರ್.

ಮಾರುಕಟ್ಟೆಯಲ್ಲಿ ಐದು ಟನ್ ಸಾಮರ್ಥ್ಯದ ಜೈವಿಕ ಅನಿಲ ಘಟಕ ಸ್ಥಾಪಿಸಲಾಗಿದೆ. ಈ ಘಟಕದ ಯಶಸ್ಸನ್ನು ಆಧರಿಸಿ ಮತ್ತೊಂದು ಘಟಕ ಪ್ರಾರಂಭಿಸುವ ಕುರಿತು ಪರಿಶೀಲಿಸಲಾಗುವುದು ಎಂದು ಆಯುಕ್ತರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT