ADVERTISEMENT

ಧ್ವನಿ- ದೃಶ್ಯ ಮಾಧ್ಯಮದ ಸಭಾಂಗಣ ಸಿದ್ಧ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2012, 19:15 IST
Last Updated 10 ಫೆಬ್ರುವರಿ 2012, 19:15 IST

ಬೆಂಗಳೂರು:  ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಶಾಲಾ ವಿದ್ಯಾರ್ಥಿಗಳ ಜ್ಞಾನ ಹೆಚ್ಚಿಸುವ ಸಲುವಾಗಿ ಚಾಮರಾಜಪೇಟೆಯಲ್ಲಿರುವ ಬಿಬಿಎಂಪಿ ಶಾಲೆಯಲ್ಲಿ ಧ್ವನಿ ಮತ್ತು ದೃಶ್ಯ ಮಾಧ್ಯಮದ ಸಭಾಂಗಣವನ್ನು ಸಜ್ಜುಗೊಳಿಸಲಾಗಿದೆ ಎಂದು ಶಿಕ್ಷಣ, ಕ್ರೀಡಾ ಸ್ಥಾಯಿ ಸಮಿತಿಯ ಮಾಜಿ ಅಧ್ಯಕ್ಷ ಮತ್ತು ಸ್ಥಳೀಯ ಪಾಲಿಕೆ ಸದಸ್ಯ ಬಿ.ವಿ.ಗಣೇಶ್ ಹೇಳಿದರು.

ಹೈಟೆಕ್ ಮಾದರಿಯ ಈ ಸಭಾಂಗಣವನ್ನು 15 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಹವಾನಿಯಂತ್ರಿತ ವ್ಯವಸ್ಥೆ ಇದ್ದು, ಉತ್ತಮ ಶಬ್ದ ವರ್ಧಕಗಳಿವೆ. ಪ್ರತಿ ಬಿಬಿಎಂಪಿ ಶಾಲೆಯಿಂದ 10 ಮಂದಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗುವುದು. ಈ ವಿದ್ಯಾಥಿಗಳು ಈ ಸಭಾಂಗಣದಲ್ಲಿ ಜ್ಞಾನ ವಿಜ್ಞಾನ ಕುರಿತು ಚರ್ಚೆ ನಡೆಸಲು ವೇದಿಕೆ ಒದಗಿಸಲಾಗುವುದು ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಸಭಾಂಗಣದಲ್ಲಿ 150ಕ್ಕೂ ಹೆಚ್ಚು ಮಕ್ಕಳಿಗೆ ಆಸನ ವ್ಯವಸ್ಥೆ ಮಾಡಲಾಗಿದೆ. ಚರ್ಚಾ ಸ್ಪರ್ಧೆಯಲ್ಲಿ ವಿಜೇತ ರಾದ ವಿದ್ಯಾರ್ಥಿಗಳಿಗೆ ರೂ. 200 ಪ್ರೋತ್ಸಾಹ ಧನ ಮತ್ತು `ಮಂಕುತಿಮ್ಮನ ಕಗ್ಗ~ವನ್ನು ನೀಡಲಾಗುವುದು ಎಂದ ಅವರು, ಈ ಸಭಾಂಗಣವನ್ನು ಫೆ.15ರಂದು ಸಚಿವ ಆರ್. ಅಶೋಕ ಉದ್ಘಾಟಿಸಲಿದ್ದಾರೆ ಎಂದರು.

ದೃಶ್ಯ ಮಾಧ್ಯಮದ ಮೂಲಕ ಪೊಲೀಸ್ ವ್ಯವಸ್ಥೆ, ಸಂಚಾರ ನಿಯಂತ್ರಣ, ವಿದ್ಯುತ್, ಕುಡಿಯುವ ನೀರಿನ ಸಮಸ್ಯೆ ಸೇರಿದಂತೆ ಇತರೆ ಜ್ವಲಂತ ಸಮಸ್ಯೆಗಳ ಕುರಿತು ವಿದ್ಯಾರ್ಥಿಗಳಿಗೆ ತಜ್ಞರು ವಿವರಿಸಲಿದ್ದಾರೆ. ವಾರಕ್ಕೊಂದು ಸಾಕ್ಷ್ಯಚಿತ್ರ ಪ್ರದರ್ಶನ ನಡೆಯಲಿದೆ. ಇದರಿಂದ ಮಕ್ಕಳಲ್ಲಿ ಪ್ರಶ್ನಿಸುವ ಪ್ರವೃತ್ತಿಯನ್ನು ಬೆಳೆಸಲಾಗುತ್ತದೆ. ಇತರೆ ಬಿಬಿಎಂಪಿ ಶಾಲೆಯ ವಿದ್ಯಾರ್ಥಿಗಳುಸಹ ಈ ಸಭಾಂಗಣದ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಕೋರಲಾಗಿದೆ ಎಂದರು.

ಪಾಲಿಕೆ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ರಮೇಶ್‌ರಾಜು, `ಧ್ವನಿ ಮತ್ತು ದೃಶ್ಯ ಮಾಧ್ಯಮ ಸಭಾಂಗಣವನ್ನು ಇತರೆ ವಾರ್ಡ್‌ಗಳ ಶಾಲಾ- ಕಾಲೇಜುಗಳಿಗೂ ವಿಸ್ತರಿಸುವ ಬಗ್ಗೆ ಚಿಂತನೆ ನಡೆಸಲಾಗುವುದು. ಎಸ್ಸೆಸ್ಸೆಲ್ಸಿಯಲ್ಲಿ ಶೇ 85ರಷ್ಟು ಅಂಕ ಪಡೆದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ 10 ಸಾವಿರ ರೂಪಾಯಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ 35 ಸಾವಿರ ರೂಪಾಯಿ ಪ್ರೋತ್ಸಾಹಧನ ನೀಡಲಾಗುತ್ತಿದೆ~ ಎಂದು ಹೇಳಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.