ಬೆಂಗಳೂರು: ಹೆಸರಾಂತ ಕಂಪನಿಗಳ ಹೆಸರಿನಲ್ಲಿ ನಕಲಿ ಟೀ ಶರ್ಟ್‌ಗಳನ್ನು ಮಾರಾಟ ಮಾಡುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ಮಂಗಳವಾರ ಬಂಧಿಸಿರುವ ಕೆಂದ್ರ ಅಪರಾಧ ವಿಭಾಗದ ಪೊಲೀಸರು, ಆರೋಪಿಗಳಿಂದ 18 ಲಕ್ಷದ 75 ಸಾವಿರ ರೂ. ಮೌಲ್ಯದ 1250 ಟೀ ಶರ್ಟ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
ತಿಪ್ಪಸಂದ್ರ ನಿವಾಸಿ ಅಬ್ದುಲ್ ಮಜೀಬ್ ಬಿನ್ ಅಬ್ದುಲ್ ರೌಫ್ (38) ಮತ್ತು ಜಯನಗರ ನಿವಾಸಿ ಅಜಮ್ ಷರೀಫ್ ಬಿನ್ ಶೇಖ್ ಖಾಸಿಂ(30) ಬಂಧಿತ ಆರೋಪಿಗಳು. ಕಾಟನ್ ಪೇಟೆ ಸಮೀಪದ ಎ.ಎಸ್.ಚಾರ್ ಸ್ಟ್ರೀಟ್‌ನ ಮಳಿಗೆಯೊಂದರಲ್ಲಿ ವಿವಿಧ ಕಂಪೆನಿ ಹೆಸರುಗಳನ್ನು ಟೀ ಶರ್ಟ್‌ಗಳ ಮೇಲೆ ಮುದ್ರಿಸಿ ಮಾರಾಟ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳ ವಿರುದ್ದ ಕಾಟನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಪರಾಧ ವಿಭಾಗದ ಜಂಟಿ ಪೊಲೀಸ್ ಕಮಿಷನರ್ ಬಿ.ದಯಾನಂದ ಅವರ ಮಾರ್ಗದರ್ಶನದಲ್ಲಿ ಎಸಿಪಿ ಜಿ.ಟಿ.ಅಜ್ಜಪ್ಪ ನೇತೃತ್ವದಲ್ಲಿ ಇನ್‌ಸ್ಪೆಕ್ಟರ್ ಎನ್.ಹನುಮಂತರಾಯ ಹಾಗೂ ಸಿಬ್ಬಂದಿ ತಂಡ ಪ್ರಕರಣ ಬೇಧಿಸಿದೆ.
ಸುಳ್ಳು ದೂರು: ಮಹಿಳೆ ಬಂಧನ: ಸರ ಅಪಹರಣವಾಗಿದೆ ಎಂದು ಸುಳ್ಳು ದೂರು ನೀಡಿದ್ದ ಮಹಿಳೆಯನ್ನು ಕೆಂಪೇಗೌಡನಗರ ಠಾಣೆ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
ತಲಘಟ್ಟಪುರ ನಿವಾಸಿ ಭಾಗ್ಯಲಕ್ಷ್ಮಿ (48) ಬಂಧಿತರು. ಅವರು, ಹನುಮಂತನಗರ ಸಮೀಪದ ಅಲ್ಲಮ್ಮಪ್ರಭು ರಸ್ತೆಯಲ್ಲಿರುವ ಸಂಬಂಧಿಕರ ಮನೆಗೆ ಹೋಗಿದ್ದರು. ನಕಲಿ ಸರವನ್ನು ಸ್ನಾನದ ಕೋಣೆಯಲ್ಲಿ ಅಡಗಿಸಿ ಹೊರಬಂದ ಭಾಗ್ಯ, ಇಬ್ಬರು ದುಷ್ಕರ್ಮಿಗಳು ತನ್ನ 80 ಗ್ರಾಂ. ಚಿನ್ನದ ಸರ ದೋಚಿದ್ದಾರೆ ಎಂದು ನಾಟಕವಾಡಿ, ಠಾಣೆಯಲ್ಲಿ ದೂರು ನೀಡಿದ್ದರು.
ಸಂಬಂಧಿಕರ ಮಗ ಆ ಸರತಂದು ಠಾಣೆಗೆ ಒಪ್ಪಿಸಿದ್ದು, ಪರಿಶೀಲಿಸಿದಾಗ ಅದು ನಕಲಿ ಸರ ಎಂದು ತಿಳಿಯಿತು. ಆರೋಪಿ ವಿರುದ್ಧ ಸುಳ್ಳು ದೂರು ದಾಖಲೆ ಹಾಗೂ ವಂಚನೆ ಆರೋಪದ ಮೇಲೆ ಭಾರತ ದಂಡ ಸಂಹಿತೆ 203 ಹಾಗೂ 420ರ ಅಡಿಯಲ್ಲಿ 2 ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಕೆ.ಜಿ.ನಗರ ಇನ್‌ಸ್ಪೆಕ್ಟರ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.