ADVERTISEMENT

ನಕ್ಸಲರ ಶರಣಾಗತಿಗೆ ಆದ್ಯತೆ: ಅಶೋಕ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2012, 5:25 IST
Last Updated 7 ಫೆಬ್ರುವರಿ 2012, 5:25 IST

ಬೆಂಗಳೂರು: ರಾಜ್ಯದ ಪಶ್ಚಿಮ ಘಟ್ಟಗಳ ವ್ಯಾಪ್ತಿಯಲ್ಲಿ ಇರುವ ನಕ್ಸಲರನ್ನು ಮನವೊಲಿಕೆ ಮೂಲಕ ಮುಖ್ಯವಾಹಿನಿಗೆ ಕರೆತರಲು ಸರ್ಕಾರ ಪ್ರಯತ್ನಿಸುತ್ತದೆ. ನಕ್ಸಲರು ಶಸ್ತ್ರ ತ್ಯಜಿಸದಿದ್ದರೆ, ಬಂದೂಕಿನ ಮೂಲಕ ಹತ್ತಿಕ್ಕಲಾಗುವುದು ಎಂದು ಗೃಹ ಸಚಿವ ಆರ್.ಅಶೋಕ ತಿಳಿಸಿದರು.

ಸೋಮವಾರ ವಿಧಾನ ಪರಿಷತ್‌ನಲ್ಲಿ ಬಿಜೆಪಿ ಸದಸ್ಯೆ ಭಾರತಿ ಶೆಟ್ಟಿ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಚಿಕ್ಕಮಗಳೂರು, ಉಡುಪಿ, ದಕ್ಷಿಣ ಕನ್ನಡ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ನಕ್ಸಲ್ ಚಟುವಟಿಕೆ ಇರುವ ಬಗ್ಗೆ ಮಾಹಿತಿ ಇದೆ. 15ರಿಂದ 20 ನಕ್ಸಲರು ಇರಬಹುದೆಂದು ಅಂದಾಜಿಸಲಾಗಿದೆ. ವರ್ಷದೊಳಗೆ ನಕ್ಸಲ್ ಚಟುವಟಿಕೆಯನ್ನು ಸಂಪೂರ್ಣವಾಗಿ ನಿಗ್ರಹಿಸುವ ಗುರಿ ಸರ್ಕಾರದ ಮುಂದಿದೆ ಎಂದರು.

ನಾಲ್ಕು ಜಿಲ್ಲೆಗಳ 108 ಗ್ರಾಮಗಳನ್ನು ನಕ್ಸಲ್‌ಪೀಡಿತ ಪ್ರದೇಶವೆಂದು ಸರ್ಕಾರ ಗುರುತಿಸಿದೆ. ಈ ಪ್ರದೇಶದ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡಲಾಗುವುದು. ಗುತ್ತಿಗೆ ಆಧಾರದಲ್ಲಿ ಸ್ಥಳೀಯರಿಗೆ ಸರ್ಕಾರಿ ನೌಕರಿ ನೀಡುವುದು, ಅಭಿವೃದ್ಧಿ ಯೋಜನೆಗಳಲ್ಲಿ ಶೇಕಡ 10ರಷ್ಟು ಅನುದಾವನ್ನು ಆದ್ಯತೆ ಮೇಲೆ ಈ ಪ್ರದೇಶದಲ್ಲಿ ವೆಚ್ಚ ಮಾಡುವುದು ಸೇರಿದಂತೆ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು.

ನಕ್ಸಲ್ ನಿಗ್ರಹಕ್ಕೆ ವಿಶೇಷ ಪೊಲೀಸ್ ಪಡೆಯನ್ನು ನಿಯೋಜಿಸಲಾಗಿದೆ. 500 ಸದಸ್ಯರ ಈ ತಂಡದ ಜೊತೆಗೆ 80 ಸದಸ್ಯರ ಕಮಾಂಡೊ ಪಡೆಯೂ ಕಾರ್ಯನಿರ್ವಹಿಸಲಿದೆ. ಪ್ರಸ್ತುತ ನಕ್ಸಲರ ಸಂಖ್ಯೆಯಲ್ಲಿ ಗಣನೀಯವಾಗಿ ಇಳಿಮುಖವಾಗಿದೆ. ಆದರೆ, ನೆರೆ ರಾಜ್ಯಗಳಿಂದ ಕೆಲವರು ರಾಜ್ಯದ ಪಶ್ಚಿಮ ಘಟ್ಟ ಪ್ರದೇಶಕ್ಕೆ ವಲಸೆ ಬರುತ್ತಾರೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಬೆಳವಣಿಗೆಗೆ ಕಡಿವಾಣ ಹಾಕಲು ವಿಶೇಷ ಕಾರ್ಯತಂತ್ರ ರೂಪಿಸಲಾಗುವುದು ಎಂದರು.

ನಕ್ಸಲ್‌ಪೀಡಿತ ಗ್ರಾಮಗಳ ಪಟ್ಟಿ ಸಿದ್ಧಪಡಿಸುವುದು, ಶರಣಾಗತಿ ಪ್ಯಾಕೇಜ್, ಈ ಪ್ರದೇಶದಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಆದ್ಯತೆ ನೀಡದಿರುವುದು ಮತ್ತಿತರ ವಿಷಯಗಳಲ್ಲಿ ಸರ್ಕಾರದ ನಿಲುವಿನ ಬಗ್ಗೆ ವಿರೋಧಪಕ್ಷದ ನಾಯಕಿ ಮೋಟಮ್ಮ, ಕಾಂಗ್ರೆಸ್ ಸದಸ್ಯ ಕೆ.ಪ್ರತಾಪಚಂದ್ರ ಶೆಟ್ಟಿ ಮತ್ತಿತರರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.