ADVERTISEMENT

ನಗರದಲ್ಲಿ ರೋಗಿಗಳ ಪರದಾಟ

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2017, 19:56 IST
Last Updated 13 ನವೆಂಬರ್ 2017, 19:56 IST
ನಗರದಲ್ಲಿ ರೋಗಿಗಳ ಪರದಾಟ
ನಗರದಲ್ಲಿ ರೋಗಿಗಳ ಪರದಾಟ   

ಬೆಂಗಳೂರು: ಖಾಸಗಿ ಆಸ್ಪತ್ರೆಗಳ ವೈದ್ಯರ ಪ್ರತಿಭಟನೆಯಿಂದಾಗಿ ನಗರದ ಖಾಸಗಿ ಆಸ್ಪತ್ರೆಗಳು, ಕ್ಲಿನಿಕ್‌ ಮತ್ತು ನರ್ಸಿಂಗ್‌ ಹೋಂಗಳಲ್ಲಿ ಸೋಮವಾರ ಹೊರ ರೋಗಿಗಳಿಗೆ ಸೂಕ್ತ ಚಿಕಿತ್ಸೆ ಸಿಗದೇ ಪರದಾಡುವ ಸ್ಥಿತಿ ನಿರ್ಮಾಣವಾಯಿತು.

ಖಾಸಗಿ ವೈದ್ಯಕೀಯ ಆಸ್ಪತ್ರೆಗಳ ನಿಯಂತ್ರಣ ಮಸೂದೆಯನ್ನು ವಿರೋಧಿಸಿ ಭಾರತೀಯ ವೈದ್ಯಕೀಯ ಸಂಘ ‘ಬೆಳಗಾವಿ ಚಲೊ’ ಮತ್ತು ಒಂದು ದಿನದ ಪ್ರತಿಭಟನೆಗೆ ಕರೆ ನೀಡಿತ್ತು. ಇದರಿಂದ ನಗರದ ದೊಡ್ಡ ಆಸ್ಪತ್ರೆಗಳಲ್ಲಿ ಹೊರ ರೋಗಿಗಳಿಗೆ ವೈದ್ಯಕೀಯ ಸೇವೆ ಲಭ್ಯವಿಲ್ಲದೆ, ರೋಗಿಗಳು ಆಸ್ಪತ್ರೆಗಳ ಮುಂದೆ ತಾಸುಗಟ್ಟಲೆ ಕಾದು ನಿಂತರು.

‘ಪ್ರತಿಭಟನೆ ಇರುವುದಿಂದ ವೈದ್ಯರು ಬರುವುದಿಲ್ಲ’ ಎಂದು ಆಸ್ಪತ್ರೆಗಳ ಸಿಬ್ಬಂದಿ ಹೇಳಿದರೂ ರೋಗಿಗಳು ಅಲ್ಲಿಂದ ಕದಲಿಲ್ಲ. ಬಹುತೇಕ ಎಲ್ಲ ಆಸ್ಪತ್ರೆಗಳಲ್ಲಿ ತುರ್ತುಸ್ಥಿತಿಯನ್ನು ನಿಭಾಯಿಸಲು ಬೆರಳೆಣಿಕೆಯಷ್ಟು ವೈದ್ಯರಿದ್ದರು.

ADVERTISEMENT

ಸಣ್ಣ ಮಟ್ಟದ ನರ್ಸಿಂಗ್ ಹೋಂಗಳು ಸಂಪೂರ್ಣ ಬಂದ್‌ ಆಗಿದ್ದವು. ‘ಪ್ರತಿಭಟನೆಯಲ್ಲಿ ಪಾಲ್ಗೊಂಡಿರುವುದರಿಂದ  ವೈದ್ಯಕೀಯ ಸೇವೆ ಇಲ್ಲ’ ಎಂದು ಬರೆದ ಸೂಚನಾ ಪತ್ರಗಳನ್ನು ಆಸ್ಪತ್ರೆಗಳ ಮುಂದೆ ಅಂಟಿಸಲಾಗಿತ್ತು. ಭದ್ರತಾ ಸಿಬ್ಬಂದಿ ರೋಗಿಗಳನ್ನು ಹಿಂದಕ್ಕೆ ಕಳುಹಿಸುವ ದೃಶ್ಯ ಸಾಮಾನ್ಯ
ವಾಗಿತ್ತು. ಪ್ರತಿಯೊಂದು ಖಾಸಗಿ ಆಸ್ಪತ್ರೆಯಲ್ಲೂ ಒಬ್ಬರು ಅಥವಾ ಇಬ್ಬರು ವೈದ್ಯರನ್ನು ಹೊರತುಪಡಿಸಿದರೆ ಉಳಿದವರು ರಜೆ ಹಾಕಿ ‘ಬೆಳಗಾವಿ ಚಲೋ’ದಲ್ಲಿ ಭಾಗವಹಿಸಲು ತೆರಳಿದ್ದರು.

(ಸಂಪೂರ್ಣ ಬಂದ್‌ ಮಾಡಿದ ಮಲ್ಲೇಶ್ವರದ ಲಕ್ಷ್ಮಿ ಮೆಟರ್ನಿಟಿ ಆಸ್ಪತ್ರೆಯ ಮುಂದೆ ಬಾಲಕಿಯೊಂದಿಗೆ ತಾಯಿ.)

ಕಿಮ್ಸ್‌ನಲ್ಲಿ ರೋಗಿಗಳು ಕಂಗಾಲು: ಕೆಂಪೇಗೌಡ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ (ಕಿಮ್ಸ್‌) ನಗರದ ಸುತ್ತಮುತ್ತಲಿನ ಊರುಗಳಿಂದ, ಅದರಲ್ಲೂ ಗ್ರಾಮೀಣ ಭಾಗದ ರೋಗಿಗಳು ಬೆಳಿಗ್ಗೆ ನೂರಾರು ಸಂಖ್ಯೆಯಲ್ಲಿ ಸೇರಿದ್ದರು. ವೈದ್ಯರ ಪ್ರತಿಭಟನೆ ಕುರಿತ ಯಾವುದೇ ಮಾಹಿತಿ ಇಲ್ಲವಾದ್ದರಿಂದ ರೋಗಿಗಳು ಕಂಗಾಲಾದರು. ಹೊರ ರೋಗಿಗಳ ವಿಭಾಗವನ್ನು ಮುಚ್ಚಲಾಗಿತ್ತು. ತೀವ್ರ ಜ್ವರ ಮತ್ತು ಇತರ ಆರೋಗ್ಯ ಸಮಸ್ಯೆಗಳಿಗೆ ಬಳಲುತ್ತಿದ್ದವರು ಸಿಬ್ಬಂದಿ ಜತೆ ಮಾತಿನ ವಾಗ್ವಾದ ನಡೆಸಿದರು.

ಮಲ್ಲೇಶ್ವರದ ‘ನಾರಾಯಣ ಸೂಪರ್‌ ಸ್ಪೆಷಾಲಿಟಿ’ ಆಸ್ಪತ್ರೆಗೆ ಬಂದ ಹೊರ ರೋಗಿಗಳನ್ನು ಕಳುಹಿಸಲಾಗುತ್ತಿತ್ತು. ಆದರೆ, ಕೆಲವು ರೋಗಿಗಳು ನಿರೀಕ್ಷಣಾ ವಿಭಾಗದಲ್ಲಿ ಮಲಗಿದ್ದರು. ಇದೇ ಬಡಾವಣೆಯ ಮಣಿಪಾಲ ನಾರ್ಥ್‌ಸೈಡ್ ಆಸ್ಪತ್ರೆಯಲ್ಲಿ ಹೊರ ರೋಗಿಗಳ ವಿಭಾಗ ಬಂದ್‌ ಆಗಿದ್ದರೂ ತುರ್ತು ಚಿಕಿತ್ಸೆಯ ಅಗತ್ಯವಿದ್ದ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಹಳೆ ವಿಮಾನ ನಿಲ್ದಾಣ ರಸ್ತೆಯಲ್ಲಿರುವ ಮಣಿಪಾಲ ಆಸ್ಪತ್ರೆಯಲ್ಲೂ ಹೊರರೋಗಿಗಳ ವಿಭಾಗ ಮುಚ್ಚಿತ್ತು.

ಕನ್ನಿಂಗ್‌ ಹ್ಯಾಮ್‌ ರಸ್ತೆಯಲ್ಲಿರುವ ಫೋರ್ಟಿಸ್‌ ಮತ್ತು ಮಲ್ಯ ಆಸ್ಪತ್ರೆಗಳಲ್ಲಿ ಹೊರ ರೋಗಿಗಳ ವಿಭಾಗ ಭಾಗಶಃ ಕಾರ್ಯ ನಿರ್ವಹಿಸಿದ್ದವು. ಭಗವಾನ್‌ ಮಹಾವೀರ ಜೈನ್‌ ಆಸ್ಪತ್ರೆಯ ಹೊರ ರೋಗಿ ವಿಭಾಗ ಸಂಪೂರ್ಣ ಮುಚ್ಚಿತ್ತು.

ಸರ್ಕಾರಿ ಆಸ್ಪತ್ರೆಗೆ ಹೆಚ್ಚಿದ ಹೊರ ರೋಗಿಗಳು: ನಗರದ ವಿಕ್ಟೋರಿಯಾ, ಕೆ.ಸಿ.ಜನರಲ್‌ ಆಸ್ಪತ್ರೆ, ಬೌರಿಂಗ್‌ ಮತ್ತು ಇತರ ಪ್ರಮುಖ ಸರ್ಕಾರಿ ಆಸ್ಪತ್ರೆಗಳಲ್ಲಿ ಹೊರ ರೋಗಿಗಳ ಸಂಖ್ಯೆ ಶೇ 15 ರಷ್ಟು ಹೆಚ್ಚಳವಾಗಿತ್ತು.

‘ಇತರ ದಿನಗಳಿಗಿಂತ ಹೊರ ರೋಗಿಗಳ ಸಂಖ್ಯೆ ಹೆಚ್ಚಾಗಿತ್ತು. ರೋಗಿಗಳಿಗೆ ಯಾವುದೇ ತೊಂದರೆ ಆಗಲಿಲ್ಲ’ ಎಂದು ಬೌರಿಂಗ್‌ ಆಸ್ಪತ್ರೆಯ ವೈದ್ಯರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಈ ಮಸೂದೆಯ ಅಂಶಗಳು ಮಾರಕವಾಗಿವೆ. ಯಾವ ದೇಶದಲ್ಲೂ ಇಂತಹ ನಿಯಮಗಳಿಲ್ಲ. ಇದರಿಂದ ಆಸ್ಪತ್ರೆಗಳನ್ನು ನಡೆಸುವುದೇ ಕಷ್ಟ ಆಗುತ್ತದೆ’ ಎಂದು ‘ನಾರಾಯಣ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ’ಯ ವ್ಯವಸ್ಥಾಪಕ ನಿರ್ದೇಶಕ ಡಾ.ನಾರಾಯಣ ಸ್ವಾಮಿ ತಿಳಿಸಿದರು.

(ಮಾರ್ಗೋಸಾ ರಸ್ತೆಯಲ್ಲಿರುವ ನಾರಾಯಣ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ವೈದ್ಯರು ಮುಷ್ಕರದಲ್ಲಿದ್ದಾರೆ ಎನ್ನುವ ಪ್ರಕಟಣೆ ಮುಂದೆ ಭದ್ರತಾ ಸಿಬ್ಬಂದಿ)

ನಮ್ಮ ಗೋಳು ಕೇಳುವವರು ಯಾರು?

‘ವೈದ್ಯರು ಪ್ರತಿಭಟನೆ ಮಾಡುತ್ತಾರೆ ಎಂಬುದು ನಮಗೆ ಗೊತ್ತಿಲ್ಲ. ನನ್ನ ಸಹೋದರನಿಗೆ ತೀವ್ರ ಹೊಟ್ಟೆ ನೋವಿದೆ. ಇಲ್ಲಿ ವೈದ್ಯರು ಇಲ್ಲ. ಮುಂದೇನು ಮಾಡಬೇಕು ಎಂಬುದು ಗೊತ್ತಾಗುತ್ತಿಲ್ಲ. ನಮ್ಮ ಗೋಳು ಕೇಳುವವರು ಇಲ್ಲ ’ ಎಂದು  ಮಾಗಡಿಯ ರಾಜಪ್ಪ ತಿಳಿಸಿದರು. ಭಗವಾನ್‌ ಮಹಾವೀರ ಆಸ್ಪತ್ರೆಗೆ ಹೊರ ರೋಗಿ ವಿಭಾಗ ಮುಚ್ಚಿದ್ದರಿಂದ ಸರ್ಕಾರಿ ಆಸ್ಪತ್ರೆಗೆ ತೆರಳುವ ಸಿದ್ಧತೆ ನಡೆಸಿದ್ದರು.

‘ನನ್ನ ಮಗಳು ರಾತ್ರಿಯಿಂದ ಜ್ವರದಿಂದ ಬಳಲುತ್ತಿದ್ದಾಳೆ. ಯಾವ ಆಸ್ಪತ್ರೆ ತೆರೆದಿಲ್ಲ. ಯಾವುದಾದರೂ ವೈದ್ಯರ ಮನೆಗಳನ್ನು ಹುಡುಕಿ
ಕೊಂಡು ಹೋಗಬೇಕು’ ಎಂದು ರಾಜಾಜಿನಗರ ನವರಂಗ್‌ ಬಳಿಯ ಖಾಸಗಿ ಆಸ್ಪತ್ರೆ ಮುಂದೆ ನಿಂತಿದ್ದ ಸಾವಿತ್ರಿ ಎಂಬುವರು ಅಳಲು ತೋಡಿಕೊಂಡರು.

ಬೆಳಗಾವಿಗೆ ₹40 ಸಾವಿರ

‘ಪ್ರತಿಭಟನೆಯಲ್ಲಿ ಭಾಗವಹಿಸಲು ಇವತ್ತು ಬೆಳಿಗ್ಗೆ ಬೆಳಗಾವಿಗೆ ವಿಮಾನದಲ್ಲಿ ಹೋಗಬೇಕು ಎಂದು ತಯಾರಿ ನಡೆಸಿದ್ದೆ. ಆದರೆ, ಟಿಕೆಟ್‌ ದರ ₹ 40 ಸಾವಿರ ಎಂದು ಹೇಳಿದ್ದರಿಂದ ವಿಮಾನದಲ್ಲಿ ಹೋಗುವುದನ್ನು ಕೈಬಿಡಬೇಕಾಯಿತು’ ಎಂದು ಖಾಸಗಿ ಆಸ್ಪತ್ರೆಯ ವೈದ್ಯ ಡಾ. ನಾರಾಯಣಪ್ಪ ಹೇಳಿದರು.

* ಮಸೂದೆಯಲ್ಲಿರುವ ಅಂಶಗಳು ನಮ್ಮಂತ ಸಣ್ಣ ನರ್ಸಿಂಗ್‌ ಹೋಂಗಳಿಗೆ ಮಾರಕವಾಗಿವೆ. ಆದ್ದರಿಂದ, ಪ್ರತಿಭಟನೆಯನ್ನು ಬೆಂಬಲಿಸಿದ್ದೇವೆ.

 – ಡಾ. ಲಕ್ಷ್ಮಿ, ಲಕ್ಷ್ಮಿ ನರ್ಸಿಂಗ್‌ ಹೋಂ, ಶೇಷಾದ್ರಿಪುರ

* ದಿಢೀರ್‌ ಎಂದು ಹೊರ ರೋಗಿ ವಿಭಾಗವನ್ನು  ಮುಚ್ಚಿದರೆ ನಾವು ಎಲ್ಲಿಗೆ ಹೋಗಬೇಕು

– ಶಾಂತಾ, ರೋಗಿಯ ಸಂಬಂಧಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.