ADVERTISEMENT

ನಗರದಲ್ಲೂ ನಿಸರ್ಗ ಲೂಟಿ

​ಪ್ರಜಾವಾಣಿ ವಾರ್ತೆ
Published 28 ಮೇ 2012, 19:30 IST
Last Updated 28 ಮೇ 2012, 19:30 IST
ನಗರದಲ್ಲೂ ನಿಸರ್ಗ ಲೂಟಿ
ನಗರದಲ್ಲೂ ನಿಸರ್ಗ ಲೂಟಿ   

ಬೆಂಗಳೂರು: `ರಾಜ್ಯದಲ್ಲಿ ಬಳ್ಳಾರಿ ಮಾತ್ರವಲ್ಲ. ರಾಜಧಾನಿಯಲ್ಲಿಯೂ ನೈಸರ್ಗಿಕ ಸಂಪನ್ಮೂಲಗಳು ಅವ್ಯಾಹತವಾಗಿ ಲೂಟಿಯಾಗುತ್ತಿದ್ದು, ಬೆಂಗಳೂರು ನಗರವು ರಾಷ್ಟ್ರೀಯ ಮಟ್ಟದಲ್ಲೂ ಭ್ರಷ್ಟಾಚಾರದ ಸಂಕೇತವಾಗಿ ಗೋಚರಿಸುತ್ತಿದೆ~ ಎಂದು ಸಿಪಿಐ(ಎಂ) ಪಾಲಿಟ್ ಬ್ಯುರೋ ಸದಸ್ಯೆ ಬೃಂದಾ ಕಾರಟ್ ಆತಂಕ ವ್ಯಕ್ತಪಡಿಸಿದರು.

ಮತದಾರರ ಜಾಗೃತಿ ವೇದಿಕೆಯು ನಗರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಬೆಂಗಳೂರು ಪದವೀಧರ ಕ್ಷೇತ್ರದ ಮತದಾರರ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.

`ರಿಯಲ್ ಎಸ್ಟೇಟ್, ಭೂ ಮಾಫಿಯಾದಿಂದ ನಗರದ ನೈಸರ್ಗಿಕ ಸಂಪನ್ಮೂಲಗಳು ದರೋಡೆಯಾಗುತ್ತಿದ್ದು, ರಾಜಕಾರಣಿಗಳು, ಅಧಿಕಾರಿಗಳು ಶಾಮೀಲಾಗಿದ್ದಾರೆ. ಇದು ಹೀಗೆ ಮುಂದುವರಿದರೆ ಬೆಂಗಳೂರು ಬರಿದಾಗುವುದರಲ್ಲಿ ಸಂದೇಹವಿಲ್ಲ~ ಎಂದು ಹೇಳಿದರು.

`ಲಕ್ಷಾಂತರ ಮಂದಿಗೆ ನಗರದಲ್ಲಿ ಉದ್ಯೋಗ ಸೃಷ್ಟಿಯಾಗಿದೆ. ಕಾರ್ಮಿಕ ವಲಯದ ಸಮಸ್ಯೆಗಳನ್ನು ವಿಧಾನಸಭೆ ಮತ್ತು ವಿಧಾನ ಪರಿಷತ್ತಿನಲ್ಲಿ ಚರ್ಚಿಸಲು ಜನಪ್ರತಿನಿಧಿಗಳು ಅಸಮರ್ಥರಾಗಿದ್ದಾರೆ. ಹನಿ ನೀರಿಗೆ ಪರದಾಡುವ ನಗರದ ಜನತೆಗೆ ಸಮರ್ಪಕವಾಗಿ ನೀರು ಪೂರೈಸಲು ಸಾಧ್ಯವಾಗದೇ ಇರುವ ಜನಪ್ರತಿನಿಧಿಗಳ ಅಗತ್ಯವೇನು?~ ಎಂದು ಪ್ರಶ್ನಿಸಿದರು.

`ಸಾಮಾಜಿಕ ಮೌಲ್ಯಗಳ ಅರಿವಿಲ್ಲದೇ ಇರುವ ವರ್ಗವೊಂದು ರಾಜಕಾರಣದಲ್ಲಿ ತೊಡಗಿಕೊಂಡಿದೆ. ಈ ಹಿಂದೆ ಇದ್ದ ಪದವೀಧರ ಕ್ಷೇತ್ರದ ಪ್ರತಿನಿಧಿಗಳು ನೌಕರರ ಕನಿಷ್ಠ ವೇತನ ಸೇರಿದಂತೆ ಯಾವುದೇ ಸಮಸ್ಯೆಗಳಿಗೆ ಸ್ಪಂದಿಸಿಲ್ಲ. ಇಂತಹವರ ನಡುವೆ ಪ್ರಾಮಾಣಿಕತೆ ಮತ್ತು ವಿವೇಕದ ದನಿಯಂತಿರುವ ಸಿಪಿಐ(ಎಂ)ನ ಅಭ್ಯರ್ಥಿ ಕೆ.ಎಸ್.ಲಕ್ಷ್ಮಿ ಅವರನ್ನು ಜನಪ್ರತಿನಿಧಿಯಾಗಿ ಆರಿಸಿ ಕಳುಹಿಸಬೇಕು~ ಎಂದು ಮನವಿ ಮಾಡಿದರು.

`ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಶೇ 15ರಷ್ಟು ಕುಸಿದಿದೆ. ಆದರೆ, ಕೇಂದ್ರ ಸರ್ಕಾರ ಪ್ರತಿ ಲೀಟರ್‌ಗೆ 7 ರೂಪಾಯಿ ದರ ಹೆಚ್ಚಳ ಮಾಡಿದೆ. ಒಂದೆಡೆ ಬಡವರಿಗೆ ತೈಲ ಉತ್ಪನ್ನಗಳಿಗೆ ಸಹಾಯಧನ ಒದಗಿಸುವ ನೆಪವೊಡ್ಡಿ ಹೆಚ್ಚಿನ ತೆರಿಗೆ ವಿಧಿಸುತ್ತಿದೆ. ಈ ಮೂಲಕ ತೈಲ ಕಂಪೆನಿಗಳಿಗೆ ಲಾಭ ಮಾಡಿಕೊಡುತ್ತಿದೆ~ ಎಂದು ಆರೋಪಿಸಿದರು.

`ರಾಜ್ಯದಲ್ಲಿ ಜಾತಿ ಪದ್ಧತಿ ವಿರುದ್ಧ ಹಲವು ಚಳವಳಿಗಳು ನಡೆದಿವೆ. ಜಾತ್ಯತೀತವನ್ನೇ ಬಡಬಡಾಯಿಸಿ ಅಧಿಕಾರಕ್ಕೆ ಬರುವ ಸರ್ಕಾರಗಳು ಜಾತಿ ರಾಜಕಾರಣ ನಡೆಸುತ್ತಾ ಸಾರ್ವಜನಿಕರ ಹಿತಾಸಕ್ತಿಯನ್ನು ಕಡೆಗಣಿಸುತ್ತಿವೆ. ಕೋಮುವಾದಿ ಬಿಜೆಪಿ ಸರ್ಕಾರ ಅಧಿಕಾರ ವಹಿಸಿಕೊಂಡ ಮೇಲೆ ಪ್ರಗತಿಪರ ಚಿಂತನೆಗಳ ಪರಂಪರೆಗೆ ಭಾರಿ ಹೊಡೆತ ಉಂಟಾಗಿದೆ~ ಎಂದು ದೂಷಿಸಿದರು.

ಚಿಂತಕ ಪ್ರೊ.ಜಿ.ಕೆ.ಗೋವಿಂದರಾವ್ ಮಾತನಾಡಿ, `ಪದವೀಧರ ಕ್ಷೇತ್ರದ ಅಭ್ಯರ್ಥಿ ರಾಮಚಂದ್ರಗೌಡ ಅವರು ಯಾವ ಕಾರಣಕ್ಕಾಗಿ ಮಂತ್ರಿ ಪದವಿ ಕಳೆದುಕೊಂಡರು ಎಂಬುದು ಮಹಾಜನತೆಗೆ ಗೊತ್ತಿದೆ. ಹೀಗಿದ್ದು ಮತ್ತೆ ಪದವೀಧರ ಕ್ಷೇತ್ರದ ಚುನಾವಣೆಗೆ ಸ್ಪರ್ಧಿಸುವುದು ಭಂಡತನ~ ಎಂದು ವ್ಯಂಗ್ಯವಾಡಿದರು.

`ಈ ದೇಶಕ್ಕೆ ಪ್ರಜಾಪ್ರಭುತ್ವ ಅಲ್ಲದೇ ಬೇರೆ ಯಾವುದೇ ವ್ಯವಸ್ಥೆ ಹೊಂದುವುದಿಲ್ಲ. ಪ್ರಸ್ತುತ ಸಮಾಜದಲ್ಲಿ ಮಾನಸಿಕ ಭ್ರಷ್ಟತನ ಹೆಚ್ಚಾಗಿದ್ದು, ಈ ಬಗ್ಗೆಯೂ ಎಚ್ಚೆತ್ತುಕೊಳ್ಳಬೇಕು~ ಎಂದು ಅವರು ಸಲಹೆ ನೀಡಿದರು. ಅಭ್ಯರ್ಥಿ ಕೆ.ಎಸ್.ಲಕ್ಷ್ಮಿ, ಸಮುದಾಯ ಸಂಸ್ಥೆಯ ರಾಜ್ಯ ಕಾರ್ಯದರ್ಶಿ ಟಿ.ಸುರೇಂದ್ರರಾವ್, ಸರ್ಕಾರಿ ನೌಕರರ ಒಕ್ಕೂಟದ ಮುಖಂಡ ಮಹಾದೇವ ಮಠಪತಿ, ಸಿಪಿಐ(ಎಂ) ರಾಜ್ಯ ಮುಖಂಡ ಎಸ್.ಪ್ರಸನ್ನಕುಮಾರ್ ಇತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.