ADVERTISEMENT

ನಗರದಲ್ಲೂ ₹2.96 ಕೋಟಿ ವಂಚನೆ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2018, 20:34 IST
Last Updated 4 ಮಾರ್ಚ್ 2018, 20:34 IST
ನಗರದಲ್ಲೂ ₹2.96 ಕೋಟಿ ವಂಚನೆ
ನಗರದಲ್ಲೂ ₹2.96 ಕೋಟಿ ವಂಚನೆ   

ಬೆಂಗಳೂರು: ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ನ (ಪಿಎನ್‌ಬಿ) ಹಗರಣಗಳು  ಬಯಲಾದ ಬೆನ್ನಲ್ಲೇ, ನಗರದ ಎಲೆಕ್ಟ್ರಾನಿಕ್‌ ಸಿಟಿ ಶಾಖೆಯಲ್ಲಿ ₹2.96 ಕೋಟಿ ವಂಚನೆ ನಡೆದಿರುವುದು ಬಹಿರಂಗವಾಗಿದೆ.

ಈ ಸಂಬಂಧ  ಶಾಖೆಯ ಹಿರಿಯ ವ್ಯವಸ್ಥಾಪಕಿ ಶಿವಕುಮಾರಿ ಎಲೆಕ್ಟ್ರಾನಿಕ್‌ ಸಿಟಿ ಠಾಣೆಗೆ ದೂರು ನೀಡಿದ್ದಾರೆ. ಎಫ್‌ಐಆರ್‌ ದಾಖಲಿಸಿಕೊಂಡಿರುವ ಪೊಲೀಸರು, ನೀಲಾದ್ರಿ ರಸ್ತೆಯಲ್ಲಿರುವ ಬ್ಯಾಂಕ್‌ನ ಶಾಖೆಗೆ ಹೋಗಿ ಪರಿಶೀಲನೆ ನಡೆಸಿದ್ದಾರೆ. ವಂಚನೆ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದಾರೆ.

‘ಬಿಲ್ಡರ್‌ ಪ್ರದೀಪ್‌ ಕುಮಾರ್‌ ಎಂಬುವರು ತಿರುಪಾಳ್ಯದಲ್ಲಿರುವ ‘ಶ್ರೀವಾಣಿ ಸಿಂಫೊನಿ’ ಅಪಾರ್ಟ್‌ಮೆಂಟ್‌ ಸಮುಚ್ಚಯದ ಫ್ಲ್ಯಾಟ್‌ಗಳನ್ನು 2015ರಲ್ಲಿ ಮಾರಾಟ ಮಾಡಿದ್ದರು. ಆಂಧ್ರ ಬ್ಯಾಂಕ್‌ ಹಾಗೂ ಇಂಡಿಯಾ ಬುಲ್ಸ್‌ ಬ್ಯಾಂಕ್‌ಗಳಲ್ಲಿ ಗ್ರಾಹಕರಿಗೆ ಸಾಲದ ವ್ಯವಸ್ಥೆ ಮಾಡಿಸಿಕೊಟ್ಟಿದ್ದರು’ ಎಂದು ಶಿವಕುಮಾರಿ ದೂರಿನಲ್ಲಿ ತಿಳಿಸಿದ್ದಾರೆ.

ADVERTISEMENT

‘ಅದೇ ಫ್ಲ್ಯಾಟ್‌ಗಳ ನಕಲಿ ದಾಖಲೆಗಳನ್ನು ಸೃಷ್ಟಿಸಿದ್ದ ಪ್ರದೀಪ್‌ ಕುಮಾರ್ ಹಾಗೂ ಇತರರು, 2017ರಲ್ಲಿ ಅವುಗಳನ್ನೇ ಬೇರೆಯವರಿಗೆ ಮಾರಾಟ ಮಾಡಿದ್ದಾರೆ. ಬಳಿಕ ಆ ನಕಲಿ ದಾಖಲೆಗಳನ್ನು ನಮ್ಮ ಬ್ಯಾಂಕ್‌ಗೆ ಕೊಟ್ಟು ₹2.96 ಕೋಟಿ ಸಾಲ ಪಡೆದುಕೊಂಡಿದ್ದರು. ಆ ಸಾಲವನ್ನು ಬ್ಯಾಂಕ್‌ಗೆ ಪಾವತಿಸದೆ ವಂಚಿಸಿದ್ದಾರೆ’ ಎಂದು ಹೇಳಿದ್ದಾರೆ.

ಪೊಲೀಸರು, ‘ಒಂದೇ ಫ್ಲ್ಯಾಟ್‌ ಅನ್ನು ಆರೋಪಿಗಳು ಇಬ್ಬರಿಗೆ ಮಾರಾಟ ಮಾಡಿದ್ದಾರೆ. ಅವರ ವಿರುದ್ಧ ವಂಚನೆ (ಐಪಿಸಿ 420), ಸಹಿ ನಕಲು ಮಾಡಿರುವ (ಐಪಿಸಿ 465), ನಕಲಿ ದಾಖಲೆ ಸೃಷ್ಟಿ (ಐಪಿಸಿ 468), ನಕಲಿ ದಾಖಲೆಗಳನ್ನು ಅಸಲಿ ಎಂದು ಬಳಸಿದ (ಐಪಿಸಿ 471) ಹಾಗೂ ಅಪರಾಧಕ್ಕೆ ಸಂಚು ರೂಪಿಸಿದ (ಐಪಿಸಿ 120 ಬಿ) ಆರೋಪದಡಿ ಪ್ರಕರಣ ದಾಖಲಿಸಿಕೊಂಡಿದ್ದೇವೆ’ ಎಂದು ತಿಳಿಸಿದರು.

ವಿಚಾರಣೆ ಬಳಿಕ ನಿಜಾಂಶ ಪತ್ತೆ: ‘ಸಾಲ ಕೊಡುವ ವೇಳೆಯಲ್ಲಿ ದಾಖಲೆಗಳ ಪರಿಶೀಲನೆಗೆಂದೇ ಬ್ಯಾಂಕ್‌ನವರು ನುರಿತ ಸಿಬ್ಬಂದಿಯನ್ನು ನೇಮಿಸಿಕೊಂಡಿರುತ್ತಾರೆ. ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ನ ಸಿಬ್ಬಂದಿಯು ಪ್ರದೀಪ್‌ಕುಮಾರ್‌ ಕೊಟ್ಟಿದ್ದ ನಕಲಿ ದಾಖಲೆಗಳನ್ನು ಪರಿಶೀಲಿಸಿದ್ದರು. ಆ ದಾಖಲೆಗಳಲ್ಲವೂ ಅಸಲಿ ಎಂದೇ ಭಾವಿಸಿದ್ದ ಸಿಬ್ಬಂದಿ, ಸಾಲ ನೀಡಲು ಶಿಫಾರಸು  ಮಾಡಿದ್ದರು. ಆ ಸಿಬ್ಬಂದಿಯನ್ನೂ ವಿಚಾರಣೆಗೆ ಒಳಪಡಿಸಲಿದ್ದೇವೆ’ ಎಂದು ಪೊಲೀಸರು ತಿಳಿಸಿದರು.

‘ಬ್ಯಾಂಕ್‌ನ ಹಲವು ಹಗರಣಗಳು ಈಗಾಗಲೇ ಹೊರಗೆ ಬಂದಿವೆ. ಹೀಗಾಗಿ ಈ ಪ್ರಕರಣವು ಸೂಕ್ಷ್ಮವಾಗಿದ್ದು, ಅಗತ್ಯಬಿದ್ದರೆ ಸಿಬಿಐ ಅಧಿಕಾರಿಗಳ ನೆರವನ್ನೂ ಪಡೆಯಲಿದ್ದೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.