ADVERTISEMENT

ನಗರದೆಲ್ಲೆಡೆ ಕಸದ್ದೇ ಕಾರುಬಾರು

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2017, 20:10 IST
Last Updated 1 ಅಕ್ಟೋಬರ್ 2017, 20:10 IST
ಬಸವನಗುಡಿಯ ಗಾಂಧಿ ಬಜಾರ್‌ ರಸ್ತೆ ಪಕ್ಕದಲ್ಲಿ ಭಾನುವಾರ ಕಂಡುಬಂದ ಬಾಳೆ ಕಂದುಗಳು ಮತ್ತು ಕುಂಬಳಕಾಯಿ ರಾಶಿ –ಪ್ರಜಾವಾಣಿ ಚಿತ್ರ
ಬಸವನಗುಡಿಯ ಗಾಂಧಿ ಬಜಾರ್‌ ರಸ್ತೆ ಪಕ್ಕದಲ್ಲಿ ಭಾನುವಾರ ಕಂಡುಬಂದ ಬಾಳೆ ಕಂದುಗಳು ಮತ್ತು ಕುಂಬಳಕಾಯಿ ರಾಶಿ –ಪ್ರಜಾವಾಣಿ ಚಿತ್ರ   

ಬೆಂಗಳೂರು: ನಗರದ ಎಲ್ಲೆಲ್ಲೂ ಈಗ ಬಾಳೆ ಕಂದು, ಕೊಳೆತ ಕುಂಬಳಕಾಯಿ, ಪ್ಲಾಸ್ಟಿಕ್‌ ತ್ಯಾಜ್ಯಗಳದ್ದೇ ಕಾರುಬಾರು.

ಬಸವನಗುಡಿ, ಹನುಮಂತನಗರ, ಗಿರಿನಗರ, ಜೆ.ಸಿ.ನಗರ, ಕೆ.ಆರ್‌.ಮಾರ್ಕೆಟ್‌, ಚಾಮರಾಜಪೇಟೆ, ಬನಶಂಕರಿ, ಸುಬ್ರಹ್ಮಣ್ಯಪುರ, ಮಲ್ಲೇಶ್ವರ, ಯಶವಂತಪುರ, ದಾಸರಹಳ್ಳಿ, ಜಾಲಹಳ್ಳಿ, ಹೆಸರಘಟ್ಟ ಮುಖ್ಯರಸ್ತೆ....ಎಲ್ಲ ಕಡೆಯೂ ಕಸದ ರಾಶಿ ಕಾಣ ಸಿಗುತ್ತಿದೆ.

ಆಯುಧ ಪೂಜೆ ಮತ್ತು ವಿಜಯದಶಮಿ ಹಬ್ಬಕ್ಕಾಗಿ ವ್ಯಾಪಾರಿಗಳು ಮಾರಾಟ ಮಾಡಲು ತಂದಿದ್ದ ಬಾಳೆ ಕಂದು ಮತ್ತು ಕುಂಬಳ ಕಾಯಿಗಳಲ್ಲಿ ಮಾರಾಟವಾಗದೆ ಉಳಿದಿದ್ದನ್ನು ರಸ್ತೆ ಬದಿಯಲ್ಲೇ ಬಿಟ್ಟು ಹೋಗಿದ್ದಾರೆ. ಇದನ್ನು ವಿಲೇವಾರಿ ಮಾಡದ ಪರಿಣಾಮ ಸ್ಥಳದಲ್ಲೇ ಕೊಳೆಯುತ್ತಿದ್ದು, ತ್ಯಾಜ್ಯವಾಗಿ ಮಾರ್ಪಡುತ್ತಿದೆ.

ADVERTISEMENT

ಹಬ್ಬದ ಸಂಭ್ರಮದಿಂದ ನಗರದಲ್ಲಿ ಉತ್ಪತ್ತಿಯಾಗಿರುವ ಕಸದ ರಾಶಿ, ಹಬ್ಬ ಮುಗಿದ ಬಳಿಕವೂ ಹಾಗೆಯೇ ಇದೆ. ರಸ್ತೆ ಮತ್ತು ಪಾದಚಾರಿ ಮಾರ್ಗದಲ್ಲಿ ಬಿದ್ದಿರುವ ಕಸವನ್ನು ಪೌರ ಕಾರ್ಮಿಕರು ತೆರವುಗೊಳಿಸಿದ ಮರು ಕ್ಷಣದಲ್ಲೇ ಮತ್ತೆ ಅದೇ ಜಾಗದಲ್ಲಿ ಕಸದ ರಾಶಿ ಕಾಣಿಸಿಕೊಳ್ಳುತ್ತಿದೆ.

ಮಾರಾಟವಾಗದೆ ಉಳಿದ ಲೋಡುಗಟ್ಟಲೆ ಕುಂಬಳಕಾಯಿಗಳನ್ನು ವ್ಯಾಪಾರಿಗಳು ಹೆಸರಘಟ್ಟ ಮುಖ್ಯರಸ್ತೆ ಬಳಿ ಬಿಸಾಡಿದ್ದಾರೆ.

‘ಕುಂಬಳಕಾಯಿ ಕೊಳೆತು ದುರ್ವಾಸನೆ ಬರುತ್ತಿದೆ. ನೊಣ ಮತ್ತು ಸೊಳ್ಳೆಗಳ ಕಾಟ ಹೆಚ್ಚುತ್ತಿದೆ’ ಎಂದು ಬಾಗಲಗುಂಟೆಯ ಕಿರಾಣಿ ಅಂಗಡಿ ಮಾಲೀಕರೊಬ್ಬರು ತಿಳಿಸಿದರು.

ನಾಗಸಂದ್ರದಿಂದ ಯಶವಂತಪುರದವರೆಗೂ ಬಾಳೆ ಕಂದಿನ ತ್ಯಾಜ್ಯವನ್ನು ಮೆಟ್ರೊ ರೈಲು ಮಾರ್ಗದ ಪಿಲ್ಲರ್‌ಗಳ ಬಳಿ ರಾಶಿ ಹಾಕಲಾಗಿದೆ. ಬಸವನಗುಡಿ, ಗಾಂಧಿ ಬಜಾರ್‌ನಲ್ಲೂ ವ್ಯಾಪಾರಿಗಳು ಬಿಟ್ಟು ಹೋಗಿದ್ದ ಕುಂಬಳಕಾಯಿ ಮತ್ತು ಬಾಳೆ ಕಂದುಗಳನ್ನು ಪೌರಕಾರ್ಮಿಕರು ಭಾನುವಾರ ತೆರವುಗೊಳಿಸಿದರು.

‘ನಾಲಾ ರಸ್ತೆ, ಅಣ್ಣಯ್ಯರೆಡ್ಡಿ ರಸ್ತೆ, ಸತ್ಯನಾರಾಯಣ ಸ್ವಾಮಿ ದೇವಸ್ಥಾನ ರಸ್ತೆಗಳಲ್ಲಿ ಕಸ ಸುರಿಯಲಾಗಿದೆ. ಮನೆಗಳಿಂದ ಕಸ ಸಂಗ್ರಹಣೆ ನಿಯಮಿತವಾಗಿ ನಡೆಯುತ್ತಿದ್ದರೂ, ವಿಂಗಡಣೆ ಮತ್ತು ವಿಲೇವಾರಿ ಸರಿಯಾಗಿ ಆಗುತ್ತಿಲ್ಲ. ಮೂರು ದಿನಗಳಿಂದ ಕಸದ ಗುಡ್ಡೆಗಳು ಕಾಣಿಸುತ್ತಿವೆ’ ಎನ್ನುತ್ತಾರೆ ಹಲಸೂರು ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಸದಸ್ಯ ವಿನೋದ್‌ ರಾಜನ್‌.

‘ಪೌರಕಾರ್ಮಿಕರು ಕಸ ತೆಗೆದುಕೊಂಡು ಹೋದ ಮರು ಕ್ಷಣದಲ್ಲೇ ಜನರು ಸ್ಕೂಟರ್‌, ಆಟೊಗಳಲ್ಲಿ ಕಸ ತಂದು ಸುರಿಯುತ್ತಾರೆ. ಹಬ್ಬದ ದಿನಗಳಲ್ಲಿ ಕಸ ಹೆಚ್ಚು ಉತ್ಪತ್ತಿಯಾಗುತ್ತಿದೆ. ಸಿದ್ದಪ್ಪ ಗಾರ್ಡನ್‌ ಮತ್ತು ಮಾರಪ್ಪ ಗಾರ್ಡನ್‌ಗಳ ರಸ್ತೆಗಳಲ್ಲಿ ಕಸದ ಸಮಸ್ಯೆ ಉಲ್ಬಣಿಸಿದೆ’ ಎನ್ನುತ್ತಾರೆ ಮಾರಪ್ಪ ಗಾರ್ಡನ್‌ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಸದಸ್ಯ ಕೆ.ಎಂ.ಮಕ್ಬೂಲ್‌.

‘ವೆಂಕಟಪ್ಪ ಬಡಾವಣೆಯ ರಾಘವೇಂದ್ರಸ್ವಾಮಿ ದೇವಸ್ಥಾನ ಸಮೀಪ 10ನೇ ಕ್ರಾಸ್‌ ರಸ್ತೆಯಲ್ಲಿ ಎರಡು ದಿನಗಳಿಂದ ಕಸ ರಾಶಿ ಹಾಗೆಯೇ ಬಿದ್ದಿದೆ. ಕಸ ಸಾಗಿಸುವವರು ತುಂಬಿಕೊಂಡು ಹೋಗಿಲ್ಲ’ ಎನ್ನುತ್ತಾರೆ ಸ್ಥಳೀಯ ನಿವಾಸಿ ಎನ್‌.ಶಾರದಮ್ಮ.

‘ಭಾರತೀಯ ಕ್ರೀಡಾ ಪ್ರಾಧಿಕಾರ ಮೈದಾನದ ಒಂದು ಬದಿಗೆ ಕಸವನ್ನು ನಿರಂತರ ಸುರಿಯಲಾಗುತ್ತಿದೆ. ಈ ಮೈದಾನಕ್ಕೆ ಹೋಗುವ ರಸ್ತೆಯ ಎರಡೂ ಬದಿಯೂ ಕಸದಿಂದ ತುಂಬಿದೆ. ಈ ಭಾಗದಲ್ಲಿ ಒಂದು ತಿಂಗಳಿನಿಂದ ಕಸ ವಿಲೇವಾರಿಯಾಗಿಲ್ಲ’ ಎಂದು ದೂರುತ್ತಾರೆ ವಿನಾಯಕ ಲೇಔಟ್‌ ನಿವಾಸಿ ವೀರೇಶ್‌ ಹಿರೇಮಠ್‌.

‘ಕಸ ವಿಲೇವಾರಿ ಗುತ್ತಿಗೆದಾರರ ಮುಷ್ಕರದಿಂದಾಗಿ ವಿಲೇವಾರಿ ಆಗದೇ ಉಳಿದ ಕಸ ಮತ್ತು ಹಬ್ಬದ ಪ್ರಯುಕ್ತ ಸಂಗ್ರಹವಾಗಿರುವ ಕಸವನ್ನು ಸಂಪೂರ್ಣ ತೆರವುಗೊಳಿಸಲು ಇನ್ನಷ್ಟು ದಿನಗಳು ಬೇಕು. ಮನೆಗಳಿಂದ ಕಸ ಸಂಗ್ರಹ ನಿತ್ಯವೂ ಸರಿಯಾಗಿ ನಡೆದರೂ, ಸಂಸ್ಕರಣೆ ಮತ್ತು ವಿಲೇವಾರಿ ಘಟಕಗಳಿಗೆ ಕಸ ಸಾಗಣೆ ಸಮರ್ಪಕವಾಗಿ ಆಗುತ್ತಿಲ್ಲ’ ಎನ್ನುತ್ತಾರೆ ಬಿಬಿಎಂಪಿ ಪೌರಕಾರ್ಮಿಕರು ಮತ್ತು ಆರೋಗ್ಯ ಗ್ಯಾಂಗ್‌ಮೆನ್‌ಗಳ ಸಂಘದ ಕಾರ್ಯದರ್ಶಿ ಪೋತನ್ನ.

ಮೇಯರ್‌ ಪರಿಶೀಲನೆ:

ದಸರಾ ಹಬ್ಬದಿಂದ ನಗರದಲ್ಲಿ ಹೆಚ್ಚು ಉತ್ಪತ್ತಿಯಾಗಿರುವ ಕಸ ವಿಲೇವಾರಿ ಚುರುಕುಗೊಳಿಸಲು ಮೇಯರ್‌ ಆರ್‌.ಸಂಪತ್‌ರಾಜ್‌ ಭಾನುವಾರ ಬೆಳಿಗ್ಗೆ ನಗರದ ವಿವಿಧ ಸ್ಥಳಗಳಲ್ಲಿ ಪರಿಶೀಲನೆ ನಡೆಸಿದರು.

ಬಸವನಗುಡಿಯ ಗಾಂಧಿ ಬಜಾರ್‌ ಮಾರುಕಟ್ಟೆಗೆ (ರೋಟಿಘರ್ ಹೋಟೆಲ್ ಹತ್ತಿರ) ಬೆಳಿಗ್ಗೆ 7.30ಕ್ಕೆ ಅವರು ಭೇಟಿ ಕೊಟ್ಟಿದ್ದರು. ಪಾದಚಾರಿ ಮಾರ್ಗ ಮತ್ತು ರಸ್ತೆಗಳ ಬದಿ ರಾಶಿ ಬಿದ್ದಿದ್ದ ಕಸವನ್ನು ಸಿಬ್ಬಂದಿಗೆ ಗಡುವು ನೀಡಿ, ಒಂದು ತಾಸಿನೊಳಗೆ ವಿಲೇವಾರಿ ಮಾಡಿಸಿದರು.

ಕಸ ಉತ್ಪಾದನೆ ದುಪ್ಪಟ್ಟು

‘ನಗರದಲ್ಲಿ ನಿತ್ಯ ಸರಾಸರಿ 4,000 ಟನ್‌ ಕಸ ಉತ್ಪತ್ತಿಯಾಗುತ್ತಿತ್ತು. ಆದರೆ, ಹಬ್ಬದ ದಿನಗಳಲ್ಲಿ ಸರಾಸರಿ 8,000 ಸಾವಿರ ಟನ್‌ ಕಸ ಉತ್ಪತ್ತಿಯಾಗಿದೆ. ಶೇ 70ರಷ್ಟು ಕಸ ವಿಲೇವಾರಿ ಆಗಿದೆ’ ಎಂದು ಮೇಯರ್‌ ಆರ್‌.ಸಂಪತ್‌ರಾಜ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಗಾಂಧಿ ಜಯಂತಿ ಆಚರಣೆ ವೇಳೆಗೆ ಇಡೀ ನಗರ ಸ್ವಚ್ಛವಾಗಿಡುವ ಸಂಕಲ್ಪ ಮಾಡಿ, ಕಸ ವಿಲೇವಾರಿ ಮಾಡಲಾಗುತ್ತಿದೆ. ಹೆಚ್ಚುವರಿ ವಾಹನಗಳ ವ್ಯವಸ್ಥೆ ಮಾಡಿಕೊಂಡು ಹೆಚ್ಚು ಕಸ ಸಂಗ್ರಹವಾಗಿದ್ದ ಮಾರುಕಟ್ಟೆಗಳು ಮತ್ತು ಪ್ರಮುಖ ರಸ್ತೆಗಳಲ್ಲಿನ ಕಸವನ್ನು ಸಾಗಿಸಲಾಗಿದೆ. ಉಳಿದಿರುವ ಕಸವನ್ನು ರಾತ್ರಿ ಪಾಳಿಯಲ್ಲೂ ಕೆಲಸ ಮಾಡಿ, ವಿಲೇವಾರಿಗೊಳಿಸಲು ಸೂಚಿಸಿದ್ದೇನೆ’ ಎನ್ನುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.