ಬೆಂಗಳೂರು: ಮಾವು ಪ್ರಿಯರಿಗೆ ಸಂತಸದ ಸುದ್ದಿ. ನಗರದ ಸುಮಾರು 35–40 ಸ್ಥಳಗಳಲ್ಲಿ ಈ ಬಾರಿ ‘ಮಾವು ಮಹಾಮೇಳ’ ಆಯೋಜಿಸಲು ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮವು ಸಿದ್ಧತೆ ನಡೆಸಿದೆ.
ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಿಗಮದ ಅಧ್ಯಕ್ಷ ಎಲ್.ಗೋಪಾಲಕೃಷ್ಣ, ‘ಹಿಂದೆಲ್ಲಾ, ನಗರದ ಒಂದು ಸ್ಥಳದಲ್ಲಿ ಮಾತ್ರ ವಾರ್ಷಿಕವಾಗಿ ಮಾವು ಮೇಳ ನಡೆಸಲಾಗುತ್ತಿತ್ತು.
ದೂರ, ಸಂಚಾರ ದಟ್ಟಣೆ, ಪಾರ್ಕಿಂಗ್ ಸಮಸ್ಯೆಯಿಂದ ಮೇಳಕ್ಕೆ ಬರಲು ನಗರದ ಬೇರೆ ಬೇರೆ ಭಾಗದ ಜನರು ಹಿಂದೇಟು ಹಾಕುತ್ತಿದ್ದರು. ಜನರ ಸಮಸ್ಯೆ ಅರಿತು, ನಗರದ ಹೆಚ್ಚು ಸ್ಥಳಗಳಲ್ಲಿ ಮೇಳ ಆಯೋಜಿಸಲು ಮುಂದಾಗಿದ್ದೇವೆ’ ಎಂದರು.
‘ಬಿಬಿಎಂಪಿ ಸಹಯೋಗದಲ್ಲಿ ಮೇಳ ಆಯೋಜನೆಗೆ ಸ್ಥಳಗಳ ಗುರುತಿಸುವ ಕಾರ್ಯ ನಡೆಯುತ್ತಿದೆ. ಪ್ರಮುಖ ಅಪಾರ್ಟ್‌ಮೆಂಟ್‌ಗಳಲ್ಲಿ ಹಾಗೂ ಇತರೆ ಸ್ಥಳಗಳಲ್ಲಿ ವಾಹನಗಳ ಮೂಲಕ ಮಾವು ಮಾರಾಟ (ಸಂಚಾರಿ ಮಾವು ಮಾರುಕಟ್ಟೆ) ಮಾಡಲಾಗುತ್ತದೆ’ ಎಂದರು.
‘ನೇರ ಮಾರುಕಟ್ಟೆ ಉತ್ತೇಜಿಸಲು ಮಾವು ಬೆಳೆಗಾರರಿಗೆ ಮಾತ್ರ ಮೇಳದಲ್ಲಿ ಮಾರಾಟ ಮಾಡಲು ಅವಕಾಶ ನೀಡಲಾಗುತ್ತದೆ. ಇಲ್ಲಿ ಸಹಜವಾಗಿ ಮಾಗಿಸಿದ ಹಾಗೂ ಇಥಲೀನ್ ಮೂಲಕ ಮಾಗಿಸಿದ ಹಣ್ಣುಗಳ ಮಾರಾಟಕ್ಕೆ ಮಾತ್ರ ಅವಕಾಶವಿದೆ’ ಎಂದು ಹೇಳಿದರು.
‘ರಾಜ್ಯದಲ್ಲಿ 2 ಲಕ್ಷ ಹೆಕ್ಟೇರ್ ಭೂಮಿಯಲ್ಲಿ ಮಾವು ಬೆಳೆಯುತ್ತಿದ್ದು, ಈ ವರ್ಷ 12–14 ಲಕ್ಷ ಟನ್ ಇಳುವರಿ ದೊರೆಯುವ ನಿರೀಕ್ಷೆ ಇದೆ. ನೀರಿನ ಟ್ಯಾಂಕರ್ ಖರೀದಿಸಲು ಇತರೆ ವರ್ಗದ ಮಾವು ಬೆಳೆಗಾರರಿಗೆ ₹ 50 ಸಾವಿರ ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡದ ಬೆಳೆಗಾರರಿಗೆ ₹ 90 ಸಾವಿರ ಸಹಾಯಧನ ನೀಡಲಾಗುವುದು’ ಎಂದು ತಿಳಿಸಿದರು.
ಹತ್ತು ಸಾವಿರ ಟನ್ ಮಾವು ರಫ್ತು ಗುರಿ: ‘ಕಳೆದ ವರ್ಷ 6,750 ಟನ್ ಮಾವನ್ನು ವಿದೇಶಕ್ಕೆ ರಫ್ತು ಮಾಡಲಾಗಿದ್ದು, ಈ ಬಾರಿ ಹತ್ತು ಸಾವಿರ ಟನ್ ಮಾವು ರಫ್ತು ಮಾಡುವ ಗುರಿಯಿದೆ’ ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕ ಕದಿರೇಗೌಡ ಹೇಳಿದರು.
‘ಈಗಾಗಲೇ ಬ್ರಿಟನ್, ಅಮೆರಿಕ, ಆಸ್ಟ್ರೇಲಿಯಾ, ಮಲೇಷ್ಯಾ, ಸಿಂಗಪುರ, ಚೀನಾ ಹಾಗೂ ಯುರೋಪ್ ರಾಷ್ಟ್ರಗಳಿಂದ ಮಾವು ಪೂರೈಕೆಗೆ ಬೇಡಿಕೆ ಬಂದಿದೆ. ವಿದೇಶಗಳಲ್ಲಿ ಹೆಚ್ಚು ಬೇಡಿಕೆ ಇರುವ ಅಲ್ಫಾನ್ಸೊ ಹಣ್ಣಿನ ಇಳುವರಿಯು ಅಕಾಲಿಕ ಮಳೆಯಿಂದಾಗಿ ಈ ವರ್ಷ ಕಡಿಮೆಯಾಗಿದೆ’ ಎಂದರು.
ಸ್ಥಳೀಯ ಮಾರುಕಟ್ಟೆಗೆ ಉತ್ತೇಜನ: ‘ಸ್ಥಳೀಯ ಮಾರುಕಟ್ಟೆ ಉತ್ತೇಜಿಸಲು ಮಾವು ನಿಗಮವು ವಿವಿಧ ಜಿಲ್ಲೆಗಳಲ್ಲಿ ಹಾಗೂ ಲಾಲ್‌ಬಾಗ್‌ನಲ್ಲಿ ರಾಜ್ಯ ಮಟ್ಟದ ಮಾವು ಮೇಳಗಳನ್ನು ಆಯೋಜಿಸಿ, ನೇರ ಮಾರಾಟಕ್ಕೆ ಅವಕಾಶ ಕಲ್ಪಿಸುತ್ತೇವೆ’ ಎಂದು ಕದಿರೇಗೌಡ ಹೇಳಿದರು.
‘ಮಾರ್ಚ್ 24 ರಂದು ಹೆಬ್ಬಾಳದಲ್ಲಿ ಮಾವು ಬೆಳೆಗಾರರೊಂದಿಗೆ ಸಂವಾದ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಬೆಳೆಗಾರರಿಂದ ಮೇಳದ ಆಯೋಜನೆಗೆ ಸಲಹೆಗಳನ್ನು ಪಡೆಯುತ್ತೇವೆ.
2016ರಲ್ಲಿ 10 ಮಂದಿ ರೈತರು ಆನ್‌ಲೈನ್‌ನ ಮೂಲಕ ಮಾವು ಮಾರಾಟ ಮಾಡಲು ಮುಂದೆ ಬಂದಿದ್ದರು. ಇದೇ ರೀತಿ ಈ ಬಾರಿ ರೈತರು ಮುಂದೆ ಬಂದರೆ ನಿಗಮದ ವತಿಯಿಂದ ಅವಕಾಶ ಒದಗಿಸಲಾಗುವುದು’ ಎಂದು ಹೇಳಿದರು.
ಲಭ್ಯವಾಗಲಿರುವ ಹಣ್ಣುಗಳು
ಬಾದಾಮಿ (ಅಲ್ಫಾನ್ಸೊ), ರಸಪುರಿ, ನೀಲಂ, ರಾಜಗೀರ, ರಸಾಲು, ತೋತಾಪುರಿ, ಮಲ್ಲಿಕಾ, ಬೇನಿಷಾ, ಆಪೂಸ್, ಮಲಗೋವಾ, ಸಕ್ಕರೆಗುತ್ತಿ ತಳಿಯ ಮಾವಿನ ಹಣ್ಣುಗಳ ರುಚಿಯನ್ನು ಸವಿಯಬಹುದು.
ಮೆಟ್ರೊ ನಿಲ್ದಾಣದಲ್ಲೂ ಮಾವು ಮೇಳ
ವಿಧಾನ ಸೌಧ, ಎಂ.ಜಿ. ರಸ್ತೆ, ಇಂದಿರಾನಗರ, ಸ್ವಾಮಿ ವಿವೇಕಾನಂದ ರಸ್ತೆ, ಬೈಯಪ್ಪನಹಳ್ಳಿ ಹಾಗೂ ಮೈಸೂರು ರಸ್ತೆ ಮೆಟ್ರೊ ನಿಲ್ದಾಣಗಳಲ್ಲಿ ಮಾವು ಮೇಳ ನಡೆಸಲು ನಿಗಮ ಉದ್ದೇಶಿದೆ.
ಮೆಜೆಸ್ಟಿಕ್, ಶಾಂತಿನಗರ, ಸ್ಯಾಟಲೈಟ್, ಬಿನ್ನಿಮಿಲ್,ಕೋರಮಂಗಲ, ಕೆಂಗೇರಿ ರಾಜ್ಯ ಸಾರಿಗೆ ಬಸ್ ನಿಲ್ದಾಣಗಳಲ್ಲಿ ಹಾಗೂ ಇನ್ಫೋಸಿಸ್‌ನಲ್ಲಿ ಮೇಳ ನಡೆಸಲು ಉದ್ದೇಶಿಸಲಾಗಿದೆ.