ADVERTISEMENT

ನಗರ ಜಿಲ್ಲೆಯಲ್ಲಿ 78 ಡೆಂಗೆ ಪ್ರಕರಣ ಪತ್ತೆ

​ಪ್ರಜಾವಾಣಿ ವಾರ್ತೆ
Published 10 ಜುಲೈ 2013, 19:59 IST
Last Updated 10 ಜುಲೈ 2013, 19:59 IST

ಬೆಂಗಳೂರು: ಜನವರಿಯಿಂದ ಇಲ್ಲಿವರೆಗೆ ಬೆಂಗಳೂರು ನಗರ ಜಿಲ್ಲೆಯಲ್ಲಿ 78 ಡೆಂಗೆ ಪ್ರಕರಣಗಳು ಪತ್ತೆಯಾಗಿವೆ ಎಂದು ಜಿಲ್ಲಾ ಉಸ್ತುವಾರಿ ಸಚಿವರೂ ಆದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.

ನಗರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆ ನಂತರ ಅವರು ಸುದ್ದಿಗಾರರ ಜತೆ ಮಾತನಾಡಿದರು.

`ಡೆಂಗೆಯಿಂದ ಯಾವುದೇ ಸಾವು ಸಂಭವಿಸಿಲ್ಲ. ಎಲ್ಲರಿಗೂ ಸೂಕ್ತ ಚಿಕಿತ್ಸೆ ಒದಗಿಸಲಾಗಿದೆ. ಕಾಯಿಲೆ ನಿಯಂತ್ರಿಸಲು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಸೂಚಿಸಲಾಗಿದೆ' ಎಂದು ತಿಳಿಸಿದರು.

ಬಿಬಿಎಂಪಿ ವ್ಯಾಪ್ತಿಯಲ್ಲಿ ಡೆಂಗೆ ಪ್ರಕರಣಗಳು ಹೆಚ್ಚಾಗಿವೆ. ನಗರಕ್ಕೆ ಹೋಲಿಸಿದರೆ ಗ್ರಾಮಾಂತರ ಪ್ರದೇಶದಲ್ಲಿ ಡೆಂಗೆ ಪ್ರಕರಣಗಳು ಪತ್ತೆಯಾಗಿರುವುದು ಕಡಿಮೆ. 1,520 ಸದಸ್ಯರನ್ನು ಒಳಗೊಂಡ 76 ತಂಡಗಳನ್ನು ರಚಿಸಿ ಸಮೀಕ್ಷೆ ಕೈಗೊಳ್ಳಲಾಗಿದೆ. 20,591 ತಾಣಗಳಲ್ಲಿ ಹಾಗೂ 14,141 ಮನೆಗಳಲ್ಲಿ ಕಂಡು ಬಂದಿರುವ ಸೊಳ್ಳೆ ಲಾರ್ವಾ ನಾಶಪಡಿಸಲಾಗಿದೆ ಎಂದರು.

ನೆಲಮಂಗಲ, ಯರೇಹಳ್ಳಿ ಮತ್ತಿತರ ಪ್ರದೇಶಗಳಲ್ಲಿ ಗೂಂಡಾಗಿರಿ ಸೇರಿದಂತೆ ಹಲವು ರೀತಿಯ ಅಕ್ರಮ ಚಟುವಟಿಕೆಗಳು ನಡೆಯುತ್ತಿರುವ ಬಗ್ಗೆ ದೂರುಗಳು ಬರುತ್ತಿವೆ. ಈ ಅಕ್ರಮ ಚಟುವಟಿಕೆಗಳನ್ನು ನಿಯಂತ್ರಿಸಲು ಕಟ್ಟುನಿಟ್ಟಿನ ಕ್ರಮಕೈಗೊಳ್ಳುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.

2012-13ನೇ ಸಾಲಿಗೆ ಬೆಂಗಳೂರು ನಗರ ಜಿಲ್ಲೆಗೆ ಬಿಡುಗಡೆಯಾಗಿದ್ದ 901.18 ಕೋಟಿ ರೂಪಾಯಿ ಪೈಕಿ 835.58 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ. 2013-14ನೇ ಸಾಲಿನ ಯೋಜನಾ ಕಾರ್ಯಕ್ರಮಗಳಿಗೆ 221.46 ಕೋಟಿ ರೂಪಾಯಿ ನಿಗದಿಪಡಿಸಲಾಗಿದ್ದು, ಜೂನ್ ಅಂತ್ಯಕ್ಕೆ 44.58 ಕೋಟಿ ರೂಪಾಯಿ ಬಿಡುಗಡೆಯಾಗಿದೆ ಎಂದು ಮಾಹಿತಿ ನೀಡಿದರು.

ಜನವರಿಯಿಂದ ಜೂನ್ ಅಂತ್ಯಕ್ಕೆ 254.78 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 149.16 ಮಿ.ಮೀ. ಮಳೆಯಾಗಿತ್ತು. ಮುಂಗಾರು ಹಂಗಾಮಿನಲ್ಲಿ 33,580 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಬೇಕಾಗಿದ್ದು, ಇದುವರೆಗೆ 699 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಜಿಲ್ಲೆಯ ಮುಖ್ಯ ಬೆಳೆಯಾದ ರಾಗಿ ಬಿತ್ತನೆ ಕಾರ್ಯ ಜುಲೈ 3ನೇ ವಾರದಿಂದ ಆರಂಭವಾಗಲಿದೆ. ಜಿಲ್ಲೆಯಲ್ಲಿ ಬಿತ್ತನೆ ಬೀಜ ಮತ್ತು ರಸಗೊಬ್ಬರ ಕೊರತೆಯಾಗಿಲ್ಲ.

ಮುಂಗಾರು ಹಂಗಾಮಿಗೆ ಒಟ್ಟು 1532 ಕ್ವಿಂಟಲ್ ಬಿತ್ತನೆ ಬೀಜದ ಅಗತ್ಯವಿದ್ದು, 545.87 ಕ್ವಿಂಟಲ್ ಪೂರೈಸಲಾಗಿದೆ ಎಂದು ವಿವರಿಸಿದರು.
ಕೊಳಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ಒಟ್ಟು 18,279 ಮನೆಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದ್ದು, ಇದುವರೆಗೆ 13,109 ಮನೆಗಳು ಪೂರ್ಣಗೊಂಡಿವೆ ಮತ್ತು 3219 ಮನೆಗಳು ಪ್ರಗತಿಯಲ್ಲಿವೆ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.