ADVERTISEMENT

ನಗರ ಜೀವನದ ಚಿತ್ರಣ ಕಟ್ಟಿಕೊಡುವ ಕೃತಿ ಅಗತ್ಯ

​ಪ್ರಜಾವಾಣಿ ವಾರ್ತೆ
Published 21 ಜೂನ್ 2012, 19:30 IST
Last Updated 21 ಜೂನ್ 2012, 19:30 IST
ನಗರ ಜೀವನದ ಚಿತ್ರಣ ಕಟ್ಟಿಕೊಡುವ ಕೃತಿ ಅಗತ್ಯ
ನಗರ ಜೀವನದ ಚಿತ್ರಣ ಕಟ್ಟಿಕೊಡುವ ಕೃತಿ ಅಗತ್ಯ   

ಬೆಂಗಳೂರು: `ನಗರದ ಜನಜೀವನದ ದಟ್ಟವಾದ ಚಿತ್ರವನ್ನು ನೀಡುವ ಮಹತ್ವದ ಕೃತಿಗಳು ಕನ್ನಡ ಭಾಷೆಯಲ್ಲಿ ಪ್ರಕಟಗೊಂಡಿಲ್ಲ. ಬೇರೆ ಭಾಷೆಯಲ್ಲೂ ಇಂತಹ ಕೃತಿಗಳು ವಿರಳ. ಹಾಗಾಗಿ ಪೊಲೀಸ್ ಕಂಡ ಕಥೆಗಳು ಅಪರೂಪದ ಕೃತಿ~ ಎಂದು ಹಿರಿಯ ಸಾಹಿತಿ ಡಾ.ಯು.ಆರ್. ಅನಂತಮೂರ್ತಿ ಶ್ಲಾಘಿಸಿದರು.

ಸಂತ ಪ್ರಕಾಶನದ ಆಶ್ರಯದಲ್ಲಿ ನಗರದ ಚೌಡಯ್ಯ ಸ್ಮಾರಕ ಭವನದಲ್ಲಿ ಗುರುವಾರ ನಡೆದ ಸಮಾರಂಭದಲ್ಲಿ ನಿವೃತ್ತ ಎಸಿಪಿ ಬಿ.ಕೆ. ಶಿವರಾಂ ಅವರ `ಪೊಲೀಸ್ ಕಂಡ ಕಥೆಗಳು~ ಕೃತಿಯನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.

`ನಮ್ಮಲ್ಲಿ ಹಳ್ಳಿಯ ಜನಜೀವನವನ್ನು ದಟ್ಟವಾಗಿ ತಿಳಿಸುವ ಕೃತಿಗಳು ಸಾಕಷ್ಟು ಪ್ರಕಟಗೊಂಡಿವೆ. ನಗರದ ಕುರಿತು ಪ್ರಕಟವಾದ ಕೃತಿಗಳಲ್ಲಿ ದಾಂಪತ್ಯ, ಜಗಳ, ಸುಖ ದುಃಖಗಳ ಬಗ್ಗೆಯೇ ಹೆಚ್ಚು ಬರೆಯಲಾಗಿದೆ. ಈ ಕೃತಿಯಲ್ಲಿ ಅಧೋಲೋಕವನ್ನು ತೋರಿಸುವ ಪ್ರಯತ್ನ ಮಾಡಿದ್ದಾರೆ. ಅಧೋಲೋಕವನ್ನು ವರ್ಣರಂಜಿತವಾಗಿ ಬರೆಯವುದು ಸುಲಭ. ಶಿವರಾಂ ಅವರು ಬರೆದಿರುವುದು ಮನುಷ್ಯರ ಬಗ್ಗೆ. ಎಲ್ಲಿಯೂ ಅತಿರಂಜಿತವಾಗಿ ಬರೆದಿಲ್ಲ. ಅಧೋಲೋಕದವರು ಕೂಡಾ ಮನುಷ್ಯರೇ ಎಂಬುದನ್ನು ಕೃತಿಯಲ್ಲಿ ನಿರೂಪಿಸಿದ್ದಾರೆ~ ಎಂದು ಅವರು ತಿಳಿಸಿದರು.

ಸಮಾರಂಭದಲ್ಲಿ ಪಾಲ್ಗೊಂಡ ಕಿಕ್ಕಿರಿದ ಜನಸಮೂಹವನ್ನು ಕಂಡ ಅನಂತಮೂರ್ತಿ ಅವರು `ನಾನು ಆಶ್ಚರ್ಯಭರಿತನಾಗಿದ್ದೇನೆ. ಬೆಂಗಳೂರಿನಲ್ಲಿ ಪುಸ್ತಕ ಬಿಡುಗಡೆಗೆ ಈ ಪ್ರಮಾಣದಲ್ಲಿ ಜನರು ಸೇರಿದ್ದನ್ನು ನಾನು ನೋಡಿಲ್ಲ~ ಎಂದು ಸಂತಸ ವ್ಯಕ್ತಪಡಿಸಿದರು.

ನಿವೃತ್ತ ಐಜಿಪಿ ಟಿ. ಜಯಪ್ರಕಾಶ್ ಮಾತನಾಡಿ, `ಶಿವರಾಂ ಅವರಂತಹ ಪ್ರಾಮಾಣಿಕ ಅಧಿಕಾರಿಗಳು ಇಲಾಖೆಗೆ ಬೇಕು. ಸರ್ಕಾರ ಉತ್ತಮ ಅಧಿಕಾರಿಗಳನ್ನು ಮೂಲೆಗೆ ತಳ್ಳಿ ಸುಲಿಗೆ ಮಾಡುವವರನ್ನು ಪ್ರಮುಖ ಹುದ್ದೆಗೆ ತಂದು ಕೂರಿಸುತ್ತದೆ. ಇಂತಹ ಅಧಿಕಾರಿಗಳಿಂದಾಗಿ ಜನರಿಗೆ ಇಲಾಖೆಯ ಮೇಲೆ ಅಪನಂಬಿಕೆ ಮೂಡುತ್ತದೆ. ಸರ್ಕಾರ ಇದನ್ನು ಅರ್ಥ ಮಾಡಿಕೊಂಡು ಉತ್ತಮ ಅಧಿಕಾರಿಗಳು, ಸಮಾಜ ಸೇವಕರನ್ನು ತಯಾರು ಮಾಡಬೇಕು~ ಎಂದು ಕಿವಿಮಾತು ಹೇಳಿದರು.

ನಿವೃತ್ತ ಡಿಜಿಪಿ ಎಸ್. ಮರಿಸ್ವಾಮಿ, `ಪೊಲೀಸರು ಪುಸ್ತಕ ಬರೆಯುವುದು ಅಪರೂಪ. ಅವರು ಕೃತಿಗಳನ್ನು ರಚಿಸಿದರೂ ವೈಭವೀಕರಿಸಿ ಬರೆಯುವುದನ್ನು ಕಾಣುತ್ತೇವೆ. ಅಲ್ಲದೆ ಪೊಲೀಸರು ಪೂರ್ಣ ಸತ್ಯ ಹೇಳುವ ಸಂದರ್ಭ ಕಡಿಮೆ. ಹಾಗಾಗಿ ಇದೊಂದು ವಿಶೇಷ ಕೃತಿ~ ಎಂದು ಬಣ್ಣಿಸಿದರು.

`ಪೊಲೀಸರು ದೊಡ್ಡ ಅಪರಾಧಿಗಳನ್ನು ಸದೆ ಬಡಿಯುವುದರ ಜೊತೆಗೆ ಜನಸಾಮಾನ್ಯರ ದೂರುಗಳಿಗೂ ಸ್ಪಂದಿಸಬೇಕು. ಅವರ ಕಣ್ಣೀರು ಒರೆಸುವ ಕೆಲಸ ಮಾಡಿದಾಗ ಪೊಲೀಸರನ್ನು ಹೊಗಳುತ್ತಾರೆ. ಪೊಲೀಸರು ಅಪರಾಧವನ್ನು ದ್ವೇಷಿಸಬೇಕೇ ಹೊರತು ಅಪರಾಧಿಯನ್ನಲ್ಲ. ಇದನ್ನು ಅರ್ಥ ಮಾಡಿಕೊಂಡವರು ಉತ್ತಮ ಪೊಲೀಸ್ ಅಧಿಕಾರಿಯಾಗುತ್ತಾರೆ~ ಎಂದು ಅವರು ಅಭಿಪ್ರಾಯಪಟ್ಟರು.

`ಪ್ರಜಾವಾಣಿ~ ಸಂಪಾದಕರಾದ ಕೆ.ಎನ್.ಶಾಂತಕುಮಾರ್ ಮಾತನಾಡಿ, `ಪತ್ರಿಕೆಯಲ್ಲಿ ಕೆಲವು ಲೇಖನಗಳನ್ನು ಬರೆಯಬೇಕು ಎಂದು ಶಿವರಾಂ ಆಶಿಸಿದ್ದಾರೆ ಎಂಬುದಾಗಿ ಮೂರೂವರೆ ವರ್ಷಗಳ ಹಿಂದೆ ಸಹಸಂಪಾದಕರಾಗಿದ್ದ ಪದ್ಮರಾಜ ದಂಡಾವತಿ ಅವರು ತಮ್ಮಲ್ಲಿ ತಿಳಿಸಿದರು. ಶಿವರಾಂ ಅವರ ಪರಿಚಯ ಅಷ್ಟಾಗಿ ಇಲ್ಲದಿದ್ದರೂ ಉತ್ತಮ ಅಧಿಕಾರಿ ಎಂಬುದು ಗೊತ್ತಿತ್ತು. ಒಂದೆರಡು ತಿಂಗಳುಗಳ ಕಾಲ ಬರೆಯಬಹುದು ಎಂದು ಅಂದುಕೊಂಡಿದ್ದೆ. ಮೂರು ವರ್ಷಗಳಷ್ಟು ದೀರ್ಘಕಾಲ ಅಂಕಣ ಬರೆಯುತ್ತಾರೆ ಎಂದು ಅಂದುಕೊಂಡಿರಲಿಲ್ಲ. ಅಂಕಣ ಅಷ್ಟು ಜನಪ್ರಿಯತೆ ಗಳಿಸಿತ್ತು~ ಎಂದರು.

ಚಿಂತಕ ಕೋ. ಚೆನ್ನಬಸಪ್ಪ, `ಇಲ್ಲಿರುವ ಕಥೆಗಳು ಸತ್ಯಕಥೆಗಳು. ಶಿವರಾಂ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದಾರೆ. ಅವರಿಂದ ತುಂಬಾ ಮಂದಿಗೆ ನೆಮ್ಮದಿ ಸಿಕ್ಕಿದೆ. ಗ್ರಂಥಕರ್ತನಿಗೆ ಅದಕ್ಕಿಂತ ದೊಡ್ಡ ನೆಮ್ಮದಿ ಇಲ್ಲ. ಇಂತಹ ಒಳ್ಳೆಯ ಜನರು ಇರುವುದರಿಂದ ಪ್ರಜಾಪ್ರಭುತ್ವಕ್ಕೆ ಬೆಲೆ ಇದೆ~ ಎಂದರು.

`ಪ್ರಜಾವಾಣಿ~ ಕಾರ್ಯನಿರ್ವಾಹಕ ಸಂಪಾದಕ ಪದ್ಮರಾಜ ದಂಡಾವತಿ ಮಾತನಾಡಿ, `ರಾಜಕೀಯ, ಸಿನಿಮಾ ಸೇರಿದಂತೆ ವಿವಿಧ ರಂಗಗಳ ಜನರು ಜೀವನದ ಅನುಭವ, ಕಷ್ಟ, ಸಂತೋಷದ ವಿಚಾರಗಳನ್ನು ಅಕ್ಷರ ರೂಪಕ್ಕೆ ಇಳಿಸಬೇಕು~ ಎಂದು ಸಲಹೆ ನೀಡಿದರು.

ಸ್ವಾತಂತ್ರ್ಯ ಹೋರಾಟಗಾರ ಎಚ್. ಎಸ್. ದೊರೆಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ನಿರ್ದೇಶಕ ಟಿ. ಎನ್. ಸೀತಾರಾಂ, ಜನವಾದಿ ಮಹಿಳಾ ಸಂಘಟನೆಯ ಉಪಾಧ್ಯಕ್ಷೆ ಕೆ. ಎಸ್. ವಿಮಲ, ವಸಂತ ಪ್ರಕಾಶನದ ಮುರಳಿ ಉಪಸ್ಥಿತರಿದ್ದರು.

`ಪ್ರಜಾವಾಣಿ~ಯಲ್ಲಿ `ಪೊಲೀಸ್ ಕಂಡ ಕಥೆಗಳು~ 150 ವಾರಗಳ ಕಾಲ ಪ್ರಕಟಗೊಂಡಿತ್ತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.