ADVERTISEMENT

ನಗರ ರೈಲು ನಿಲ್ದಾಣ ಮೇಲ್ದರ್ಜೆಗೆ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2012, 19:30 IST
Last Updated 6 ಏಪ್ರಿಲ್ 2012, 19:30 IST

ಬೆಂಗಳೂರು: ಪ್ರಯಾಣಿಕರ ಅನುಕೂಲಕ್ಕಾಗಿ ನಗರ ರೈಲ್ವೆ ನಿಲ್ದಾಣದಲ್ಲಿ ನೂತನವಾಗಿ ನಿರ್ಮಿಸಲಾದ ಐದು ವಿಶ್ರಾಂತಿ ಕೊಠಡಿಗಳನ್ನು ರೈಲ್ವೆ ಖಾತೆ ರಾಜ್ಯ ಸಚಿವ ಕೆ.ಎಚ್. ಮುನಿಯಪ್ಪ ಶುಕ್ರವಾರ ಉದ್ಘಾಟಿಸಿದರು.

ವಿಶ್ರಾಂತಿ ಕೊಠಡಿಗೆ ಒಂದು ದಿನಕ್ಕೆ 1,500 ರೂಪಾಯಿ ಮತ್ತು ಅರ್ಧ ದಿನಕ್ಕೆ 800 ರೂಪಾಯಿ ಬಾಡಿಗೆ ನಿಗದಿ ಮಾಡಲಾಗಿದೆ. ನಗರ ರೈಲು ನಿಲ್ದಾಣದಲ್ಲಿ, ಹೊಸದಾಗಿ ನಿರ್ಮಿಸಿದ ಕೊಠಡಿಗಳೂ ಸೇರಿದಂತೆ, ಪ್ರಸ್ತುತ 30 ವಿಶ್ರಾಂತಿ ಕೊಠಡಿಗಳಿವೆ. ಹೊಸ ಕೊಠಡಿಗಳನ್ನು ಒಟ್ಟು 37 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದೆ.

ಉದ್ಘಾಟನಾ ಕಾರ್ಯಕ್ರಮದ ನಂತರ ಮಾತನಾಡಿದ ಮುನಿಯಪ್ಪ, `ನಗರ ರೈಲು ನಿಲ್ದಾಣ ಮತ್ತು ಬೈಯಪ್ಪನಹಳ್ಳಿ ರೈಲು ನಿಲ್ದಾಣವನ್ನು ಅಂತರರಾಷ್ಟ್ರೀಯ ದರ್ಜೆಗೆ ಏರಿಸಲಾಗುವುದು~ ಎಂದರು.

ಯಶವಂತಪುರ ರೈಲು ನಿಲ್ದಾಣ: ಹೊಸದಾಗಿ ನಿರ್ಮಿಸಲಾದ ಪ್ರಾಂಗಣ ಮತ್ತು ರೈಲಿಗಾಗಿ ಕಾಯುವ ಪ್ರಯಾಣಿಕರಿಗೆ ನಿಲ್ಲುವ ಸ್ಥಳ ಉದ್ಘಾಟಿಸಿ ಮಾತನಾಡಿದ ಮುನಿಯಪ್ಪ ಅವರು, `ರೈಲ್ವೆ ಯೋಜನೆಗಳ ವಿಷಯದಲ್ಲಿ ರಾಜ್ಯಕ್ಕೆ ಯಾವುದೇ ಕೊರತೆ ಎದುರಾಗದಂತೆ ಕೇಂದ್ರ ಗಮನವಹಿಸಿದೆ~ ಎಂದರು.

ರೈಲ್ವೆ ವಿಭಾಗೀಯ ವ್ಯವಸ್ಥಾಪಕ ನಿರ್ದೇಶಕ ಸುಧಾಂಶು ಮಣಿ, ರೈಲ್ವೆ ಮಂಡಳಿಯ ಕಾರ್ಯನಿರ್ವಾಹಕ ನಿರ್ದೇಶಕ ಎನ್.ಸಿ. ಗೋಯಲ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.