ADVERTISEMENT

ನಾಳೆಯಿಂದ ಬ್ರಿಕ್ ಕಾರ್ಯಾಗಾರ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2011, 19:30 IST
Last Updated 10 ಆಗಸ್ಟ್ 2011, 19:30 IST
ನಾಳೆಯಿಂದ ಬ್ರಿಕ್ ಕಾರ್ಯಾಗಾರ
ನಾಳೆಯಿಂದ ಬ್ರಿಕ್ ಕಾರ್ಯಾಗಾರ   

ಬೆಂಗಳೂರು: ನಗರದ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಕೇಂದ್ರದಲ್ಲಿ ಇದೇ 12ರಿಂದ 14ರವರೆಗೆ ಹುಟ್ಟಿನಿಂದಲೇ ಚಿಕ್ಕ ವಯಸ್ಸಿನ ಮಕ್ಕಳಿಗೆ  ಬರುವ ಹೃದ್ರೋಗ ಸಮಸ್ಯೆಗಳಿಗೆ ಶಸ್ತ್ರಚಿಕಿತ್ಸೆ ರಹಿತ ಪರಿಹಾರ ನೀಡುವ ಕಾರ್ಯಾಗಾರ ನಡೆಯಲಿದೆ.

ಕಾರ್ಯಕ್ರಮದಲ್ಲಿ `ಬ್ರಿಕ್~ (ಬ್ರೆಜಿಲ್, ರಷ್ಯಾ, ಇಂಡಿಯಾ, ಚೀನಾ) ದೇಶಗಳ 400ಕ್ಕೂ ಹೆಚ್ಚು ವೈದ್ಯರು ಭಾಗವಹಿಸಲಿದ್ದಾರೆ ಎಂದು ಸಂಶೋಧನಾ ಕೇಂದ್ರದ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ ತಿಳಿಸಿದ್ದಾರೆ.

ಹುಟ್ಟುವ ಪ್ರತಿ ಸಾವಿರ ನವಜಾತ ಶಿಶುಗಳಲ್ಲಿ 6-7 ಮಕ್ಕಳ ಹೃದಯದಲ್ಲಿ ರಂಧ್ರ ಕಾಣಿಸಿಕೊಳ್ಳುತ್ತದೆ. ಇದರಿಂದಾಗಿ ಶುದ್ಧ ರಕ್ತಸಂಚಾರಕ್ಕೆ ಅಡ್ಡಿಯಾಗುತ್ತದೆ. ಇತ್ತೀಚಿನವರೆಗೆ ಈ ರಂದ್ರವನ್ನು ಮುಚ್ಚಲು ಶಸ್ತ್ರಚಿಕಿತ್ಸೆಯನ್ನು ನಡೆಸಲಾಗುತ್ತಿತ್ತು. ಇದೀಗ ಶಸ್ತ್ರಚಿಕಿತ್ಸೆ ನಡೆಸದೆ ಹೃದಯದ ರಂಧ್ರವನ್ನು ಮುಚ್ಚುವ ಕೊಡೆಯಾಕಾರದ ಪುಟ್ಟ ಉಪಕರಣ (ಅಂಬ್ರಲ್ಲಾ ಡಿವೈಸ್) ಲಭ್ಯವಿದ್ದು, ಕಾರ್ಯಾಗಾರದಲ್ಲಿ ಇದನ್ನು ಬಳಸಲಾಗುತ್ತದೆ.

ಹೃದಯದ ರಂಧ್ರದ ಸಮಸ್ಯೆಯಿಂದ ಬಳಲುತ್ತಿರುವ 30 ಮಕ್ಕಳಿಗೆ ಕಾರ್ಯಾಗಾರದ ಸಂದರ್ಭದಲ್ಲಿ ಬಲೂನ್ ವಾಲ್ವೋಪ್ಲಾಸ್ಟಿಯನ್ನು ನಡೆಸಲಾಗುತ್ತದೆ. ಪೋಷಕರ ಆರ್ಥಿಕ ಸ್ಥಿತಿಯನ್ನು ಆಧರಿಸಿ ಮಕ್ಕಳನ್ನು ಆಯ್ಕೆ ಮಾಡಲಾಗಿದೆ.  ಅಂಬ್ರಲ್ಲಾ ಡಿವೈಸ್‌ಗೆ 40 ಸಾವಿರ ರೂಪಾಯಿಯಿಂದ ಒಂದು ಲಕ್ಷ ರೂಪಾಯಿ ವೆಚ್ಚವಾಗುತ್ತದೆ. ಇದನ್ನು ಕಾರ್ಯಾಗಾರ ಆಯೋಜಿಸುತ್ತಿರುವ ಸಮಿತಿಯೇ ಭರಿಸಲಿದೆ ಎಂದರು.

ಎದೆಯ ಮೇಲೆ ಶಸ್ತ್ರಚಿಕಿತ್ಸೆ ನಡೆಸದೆ ಮಾಡುವ ವಾಲ್ವೋಪ್ಲಾಸ್ಟಿಯಿಂದಾಗಿ ಎರಡೇ ದಿನಗಳಲ್ಲಿ ಎದ್ದು ಓಡಾಡಬಹುದು. ಹೆಣ್ಣು ಮಕ್ಕಳಿಗೆ ಇದೊಂದು ವರದಾನ ಎಂದೇ ಹೇಳಬಹುದು ಎಂದು ಅಭಿಪ್ರಾಯಪಟ್ಟರು.

 ಕಾರ್ಯಾಗಾರದಲ್ಲಿ ನಡೆಯುವ ವಾಲ್ವೋಪ್ಲಾಸ್ಟಿಯನ್ನು ಸಮ್ಮೇಳನ ಸಭಾಂಗಣಕ್ಕೆ ನೇರ ಪ್ರಸಾರ ಮಾಡಲಾಗುತ್ತದೆ. ಅಲ್ಲಿ ತಜ್ಞರು ಹಾಗೂ ವೈದ್ಯರ ಸಂವಾದ ನಡೆಯಲಿದೆ. ಈ ಕಾರ್ಯಕ್ರಮವು ಯುವ ಹೃದಯ ತಜ್ಞರಿಗೆ ಬಹಳ ಉಪಯುಕ್ತವಾಗಲಿದೆ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.